ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಖಲಿಸಿರುವ ಎಫ್ಐಆರ್ ತೆರವಿಗೆ ಆಗ್ರಹಿಸಿ ಹೋರಾಟ ನಡೆಸಲು ಬಿಜೆಪಿ ವೇದಿಕೆ ಸಿದ್ಧಪಡಿಸಿಕೊಂಡಿದ್ದು, ಸೋಮವಾರ ರಾಜ್ಯಪಾಲರಿಗೆ ದೂರು ಸಲ್ಲಿಸಲು ನಿರ್ಧರಿಸಿದೆ.
ಸೋಮವಾರ ಬೆಳಗ್ಗೆ ಬಿಜೆಪಿ ಮುಖಂಡರಾದ ಜಗದೀಶ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಶೋಭಾ ಕರಂದ್ಲಾಜೆ, ಆರ್. ಅಶೋಕ್ ಸಹಿತ ಹಲವು ನಾಯಕರು ರಾಜ್ಯಪಾಲ ವಿ.ಆರ್. ವಾಲಾ ಅವ ರನ್ನು ಭೇಟಿ ಮಾಡಿ ರಾಜ್ಯ ಸರಕಾರ ಎಸಿಬಿ ದುರ್ಬಳಕೆ ಮಾಡಿಕೊಳ್ಳುವುದರ ವಿರುದ್ಧ ದೂರು ಸಲ್ಲಿಸಲಿದ್ದಾರೆ.
ಈ ಸಂಬಂಧ ರವಿವಾರ ಬಿಜೆಪಿ ಕಚೇರಿ ಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಬಿಜೆಪಿ ಮುಖಂಡರಾದ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್, “ಬಿಎಸ್‌ವೈ ವಿರುದ್ಧ ದಾಖಲಾಗಿರುವ ಸುಳ್ಳು ಕೇಸಿಗೆ ಸಂಬಂಧಿಸಿದಂತೆ ಹೋರಾಟ ನಡೆಸಲಿದ್ದೇವೆ. ಸಿಎಂ ಸಿದ್ದರಾಮಯ್ಯ ರಾಜಕೀಯ ಸೇಡು ತೀರಿಸಿಕೊಳ್ಳಲು ಹೊರಟಿರುವುದು ಹೇಯ ಕೃತ್ಯ, ಎಸಿಬಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿ ರುವುದು, ಅಕ್ರಮವಾಗಿ ಕಾನೂನು ಕೈಗೆ ತೆಗೆದು ಕೊಳ್ಳುತ್ತಿರುವುದು ಸಹಿತ ರಾಜ್ಯ ಸರಕಾರದ ತಪ್ಪು ನಿರ್ಧಾರದ ವಿರುದ್ಧ ಸೋಮವಾರ ಬೆಳಗ್ಗೆ 11.30ಕ್ಕೆ ರಾಜ್ಯಪಾಲರಿಗೆ ದೂರು ಸಲ್ಲಿಸಿ, ಸರಕಾರವನ್ನು ವಜಾ ಮಾಡುವಂತೆ ಆಗ್ರಹಿಸಲಿದ್ದೇವೆ’ ಎಂದರು.
ಕೆಎಎಸ್ ಅಧಿಕಾರಿ ಬಸವರಾಜೇಂದ್ರ ಅವರನ್ನು ಕೊಡಗಿಗೆ ವರ್ಗಾವಣೆ ಮಾಡಿದ್ದಾರೆ. ಆದರೆ ಇಲ್ಲಿಂದ ತೆರವು ಮಾಡುತ್ತಿಲ್ಲ. ಬಿಎಸ್‌ವೈ ವಿರುದ್ಧ ಆರೋಪ ಮಾಡುವಂತೆ ಅವರಿಗೆ ಟಾರ್ಚರ್ ನೀಡುತ್ತಿದ್ದಾರೆ. ಡಿವೈಎಸ್‌ಪಿ ಅನು ಪಮಾ ಶೆಣೈ ಅವರಿಗೆ ಕಿರುಕುಳ ನೀಡಿದ ಮಾದರಿಯಲ್ಲೇ ಬಸವರಾಜೇಂದ್ರ ಅವರಿಗೂ ಕಿರುಕುಳ ನೀಡುತ್ತಿದ್ದಾರೆ ಎಂದು ಆರ್.ಅಶೋಕ್ ಆರೋಪಿಸಿದರು.
ನ್ಯಾಯಾಂಗ ತನಿಖೆ ವರದಿ ಎಲ್ಲಿದೆ?
ಅರ್ಕಾವತಿ ಬಡವಾಣೆಯಲ್ಲಿ 900 ಎಕ್ರೆ ಡಿನೋಟಿಫಿಕೇಷನ್ ಮಾಡಿರುವ ನಿಮ್ಮ ಪ್ರಕರಣವನ್ನು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ರಚಿಸಿ ನ್ಯಾಯಾಂಗ ತನಿಖೆಗೆ ನೀಡಲಾಗಿದೆ. ಅದರ ವರದಿ ಬಂದಿದೆಯೇ? ಆ ವರದಿ ಬರುವ ಸಾಧ್ಯ ತೆಯೂ ಇಲ್ಲ. ಈಗಾಗಲೇ ಮೂರೂವರೆ ವರ್ಷ ಕಳೆದಿದೆ. ನಿಮ್ಮ ವಿರುದ್ಧದ ಪ್ರಕರಣ ನ್ಯಾಯಾಂಗ ತನಿಖೆಗೆ, ಬಿಎಸ್‌ವೈ ಪ್ರಕರಣ ಎಸಿಬಿಗೆ ಏಕೆ? ಇದನ್ನು ನ್ಯಾಯಾಂಗ ತನಿಖೆಗೆ ನೀಡಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಆರ್. ಅಶೋಕ್ ಸವಾಲು ಹಾಕಿದರು.