ಕೋಪನ್ ಹೇಗನ್: ಫಿನ್ ಲ್ಯಾಂಡ್ ಯುವ ಪ್ರಧಾನಿ ಸನ್ನಾ ಮರೀನ್ ಸ್ನೇಹಿತರ ಜತೆಗೂಡಿ ತಮ್ಮ ಖಾಸಗಿ ನಿವಾಸದಲ್ಲಿ ನಡೆಸಿರುವ ಭರ್ಜರಿ ಪಾರ್ಟಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮಾಜಿ ಸಿ.ಎಂ. ಯಡಿಯೂರಪ್ಪ ಬೆಂಗಾವಲು ವಾಹನ ಚಾಲಕರಾಗಿದ್ದ ತಿರುಮಲೇಶ್ ನಿಧನ
ಪ್ರಧಾನಿ ಸನ್ನಾ ಮರೀನ್ ಮತ್ತು ಇನ್ನಿತರರು ನೃತ್ಯ ಮಾಡುತ್ತ, ಹಾಡುತ್ತಾ…ಕುಣಿದು ಕುಪ್ಪಳಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. 36 ವರ್ಷದ ಪ್ರಧಾನಿ ಸನ್ನಾ ಮರೀನ್ ಗೆಳೆಯರೊಂದಿಗೆ ಪಾರ್ಟಿ ಮಾಡಿರುವ ಬಗ್ಗೆ ವಿಪಕ್ಷ ತೀವ್ರ ಟೀಕಿಸಿದ್ದು, ಡ್ರಗ್ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದೆ.
ಆದರೆ ತನ್ನ ಖಾಸಗಿ ನಿವಾಸದ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿದ್ದೇನೆ ಎಂಬ ವಿಪಕ್ಷದ ಆರೋಪವನ್ನು ಪ್ರಧಾನಿ ಸನ್ನಾ ಮರೀನ್ ನಿರಾಕರಿಸಿದ್ದಾರೆ. ಕೂದಲನ್ನು ಇಳಿಬಿಟ್ಟು, ಗೆಳೆಯರ ಜೊತೆ ಪಾರ್ಟಿ ಮಾಡಿರುವುದು ತಪ್ಪಲ್ಲ ಎಂದು ಸಮರ್ಥನೆ ನೀಡಿರುವುದಾಗಿ ವರದಿ ವಿವರಿಸಿದೆ.
“ ಖಾಸಗಿ ಪಾರ್ಟಿಯ ವಿಷಯ ಬಹಿರಂಗಗೊಂಡಿದ್ದರಿಂದ ಬೇಸರವಾಗಿದೆ. ನಾನು ಸಂಜೆ ಗೆಳೆಯರ ಜತೆ ಪಾರ್ಟಿ ಮಾಡಿದ್ದೆ, ಅವರೊಂದಿಗೆ ಡ್ಯಾನ್ಸ್ ಮಾಡುತ್ತ ಹಾಡಿದ್ದೇವೆ, ಇದರಲ್ಲಿ ತಪ್ಪೇನಿಲ್ಲ ಎಂದು” ಸನ್ನಾ ತಿಳಿಸಿರುವುದಾಗಿ ಫಿನ್ ಲ್ಯಾಂಡ್ ಮಾಧ್ಯಮದ ವರದಿ ಹೇಳಿದೆ.
ನಾನು ಪಾರ್ಟಿಯಲ್ಲಿ ಡ್ರಗ್ಸ್ ಬಳಸಿಲ್ಲ, ಮದ್ಯಪಾನ ಹೊರತುಪಡಿಸಿ ಬೇರೆ ಯಾವುದೇ ಮಾದಕ ವಸ್ತು ಬಳಸಿಲ್ಲ. ನಾನು ಪಾರ್ಟಿ ಮಾಡಿದ್ದು, ಕುಣಿದು, ಹಾಡಿರುವುದು ಎಲ್ಲವೂ ಕಾನೂನು ಬದ್ಧವಾಗಿಯೇ ಇದೆ. ಆದರೆ ಇತರರು ಕೂಡಾ ಅದೇ ರೀತಿ ವರ್ತಿಸುತ್ತಾರೆ ಎಂಬುದು ನನಗೆ ತಿಳಿದಿರಲಿಲ್ಲ ಎಂದು ಮರೀನ್ ಹೇಳಿರುವುದಾಗಿ ವರದಿ ವಿವರಿಸಿದೆ.