Advertisement

ಹಳೆ ವಾಹನಗಳಿಗೆ ದಂಡ ಹೆಚ್ಚಳ: ಹೈಕೋರ್ಟ್‌ ಮಧ್ಯಾಂತರ ತಡೆ

09:13 PM May 12, 2022 | Team Udayavani |

ಬೆಂಗಳೂರು: ಹಳೆಯ ವಾಹನಗಳ ನೋಂದಣಿ ಮತ್ತು ಕ್ಷಮತಾ ಪ್ರಮಾಣಪತ್ರ ನವೀಕರಣಕ್ಕೆ ಶುಲ್ಕ ಮತ್ತು ದಂಡದ ಮೊತ್ತ ಹೆಚ್ಚಿಸಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 2021ರ ಅಕ್ಟೋಬರ್‌ 4ರಂದು ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್‌ ಮಧ್ಯಾಂತರ ತಡೆ ನೀಡಿದೆ.

Advertisement

ಕರ್ನಾಟಕ ಲಾರಿ ಮಾಲಕರ ಒಕ್ಕೂಟ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ| ಹೇಮಂತ್‌ ಚಂದನಗೌಡರ್‌ ಅವರಿದ್ದ ರಜಾಕಾಲದ ವಿಶೇಷ ಏಕಸದಸ್ಯ ನ್ಯಾಯಪೀಠ  ತಡೆ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಈ ವರ್ಷದ ಎ. 1ರಿಂದ ಅನ್ವಯವಾಗುವಂತೆ 15 ವರ್ಷ ಮೇಲ್ಪಟ್ಟ  ಎಲ್ಲ ಹಳೆಯ ವಾಹನಗಳ ದಂಡದ ಪ್ರಮಾಣದಲ್ಲಿ ಭಾರೀ ಏರಿಕೆ ಮಾಡಲಾಗಿದೆ. ನೋಂದಣಿ ಮತ್ತು ಕ್ಷಮತಾ ಪ್ರಮಾಣಪತ್ರಗಳ ನವೀಕರಣಕ್ಕೆ 10 ಸಾವಿರ ರೂ. ವಿಧಿಸಲಾಗುತ್ತಿದೆ. ಒಂದು ವೇಳೆ ಎಫ್ಸಿ ಅವಧಿ ಮುಕ್ತಾಯಗೊಂಡಿದ್ದರೆ ಸಾರಿಗೇತರ ವಾಹನಗಳಿಗೆ ತಿಂಗಳಿಗೆ ಹೆಚ್ಚುವರಿಯಾಗಿ 500 ರೂ.ವಿಧಿಸಲಾಗುತ್ತಿದೆ. ಇದು ಅತ್ಯಂತ ದುಬಾರಿಯಾಗಿದ್ದು, ವಾಹನ ಸವಾರರಿಗೂ ತುಂಬಾ ಹೊರೆಯಾಗಿದೆ ಎಂದರು.

ಅಲ್ಲದೆ, ಪ್ರತಿದಿನದ ವಿಳಂಬಕ್ಕೂ ಅಧಿಕ ಶುಲ್ಕವನ್ನು ವಿಧಿಸಲಾಗುತ್ತಿದೆ. 10 ಸಾವಿರ ರೂ. ನೋಂದಣಿ ಮತ್ತು ನವೀಕರಣಕ್ಕೆ ನಿಗದಿಪಡಿಸಿದ್ದರೂ  ಘನ ಸರಕು ವಾಹನಗಳಿಗೆ 1,500 ರೂ. ಮತ್ತು ಮಧ್ಯಮ ಸರಕು ವಾಹನಗಳಿಗೆ 1,300 ರೂ. ವಿಧಿಸಲಾಗುತ್ತಿದೆ. ಹಾಗಾಗಿ ಹಳೆಯ ವಾಹನ ಹೊಂದಿರುವವರಿಗೆ ತೀವ್ರ ತೊಂದರೆಯಾಗುತ್ತಿದೆ. ಮೊದಲೇ ಹಳೆಯದಾಗಿರುವ ವಾಹನಗಳಿಗೆ ಅಷ್ಟು ದೊಡ್ಡ ಮೊತ್ತದ ದಂಡವನ್ನು ಕಟ್ಟಿ ನಿರ್ವಹಿಸುವುದು ಕಷ್ಟಕರ. ಜತೆಗೆ ತೈಲ ಬೆಲೆಯೂ ಗಗನಮುಖೀಯಾಗಿದೆ. ಹಾಗಾಗಿ ದಂಡ ಶುಲ್ಕ ಹೆಚ್ಚಳದ ಆದೇಶಕ್ಕೆ ತಡೆ ನೀಡಬೇಕೆಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next