Advertisement

ಅದ್ಯರ್ಪಣದಲ್ಲಿದ್ದ ವಾಹನ ಓಡಿಸಿದರೆ ದಂಡ: ಗಂಗಾಧರ್‌

08:46 PM Sep 18, 2021 | Team Udayavani |

ಉಡುಪಿ: ಕೋವಿಡ್‌ನಿಂದಾಗಿ ಒಂದು ವರ್ಷದಿಂದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ 573 ಬಸ್‌ಗಳು ಅದ್ಯರ್ಪಣ (ಸರಂಡರ್‌)ದಲ್ಲಿವೆ. ಇದರಲ್ಲಿ ಕೆಲವು ಬಸ್‌ಗಳನ್ನು ಮಾತ್ರ ಅದ್ಯರ್ಪಣದಿಂದ ಬಿಡಿಸಿಕೊಳ್ಳುತ್ತಿದ್ದಾರೆ.  ಇದರಿಂದ ಬಿಡುಗಡೆಗೊಳಿಸದೆ ಓಡಿಸಿದಲ್ಲಿ ವಾಹನವನ್ನು ಮುಟ್ಟುಗೋಲು ಹಾಕಿ, ತೆರಿಗೆ ಜತೆಗೆ ದಂಡ ವಿಧಿಸಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ.ಗಂಗಾಧರ್‌ ತಿಳಿಸಿದರು.

Advertisement

ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ  ನಡೆದ ಜನಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಮೆಯ ಬಗ್ಗೆ ಮಾಹಿತಿ ಇರಲಿ:

ಸಾರ್ವಜನಿಕರು ತಮ್ಮ ವಾಹನದ ವಿಮೆಯ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಳ್ಳಬೇಕು. ವಾಹನ ಅಪಘಾತವಾದಾಗ ವಿಮಾ ಕಂಪೆನಿಯವರು “ಟೋಟಲ್‌ ಲಾಸ್‌’ ಎಂದು ವಿಮೆ ಪರಿಹಾರ ನೀಡಿ ಪುನಃ ಬೇರೆಯವರಿಗೆ ವಾಹನ ಮಾರಾಟ ಮಾಡುತ್ತಾರೆ. ಈ ಬಗ್ಗೆ ಜಾಗರೂಕರಾಗಬೇಕು. ಕಡ್ಡಾಯವಾಗಿ ನೋಂದಣಿ ಪ್ರಮಾಣಪತ್ರದೊಂದಿಗೆ ವಿಮಾ ಪರಿಹಾರ ಮೊತ್ತ ವನ್ನು “ಟೋಟಲ್‌ ಲಾಸ್‌’ ಎಂದು ಪರಿಗಣಿಸುವ ಸಮಯದಲ್ಲಿ ನೋಂದಣಿ ಪತ್ರವನ್ನು ಪ್ರಾದೇಶಿಕ ಸಾರಿಗೆ ಕಚೇರಿಗೆ ರದ್ದುಪಡಿಸಲು ಸಲ್ಲಿಸಲೇಬೇಕು ಎಂದರು.

 ಸರಕಾರಿ ಅಧೀನದಲ್ಲಿ 4 ವಿಮಾ ಕಂಪೆನಿ:

Advertisement

ಯುನೈಟೆಡ್‌ ಇಂಡಿಯಾ ಇನ್ಶೂರೆನ್ಸ್‌ ಕಂ.ಲಿ.  ಮಣಿಪಾಲ ಇದರ ಸೀನಿಯರ್‌ ಡಿವಿಜನಲ್‌ ಮ್ಯಾನೇಜರ್‌ ಎಲ್‌.ಎನ್‌. ಮುರಳೀಧರ ಮಾತನಾಡಿ, ಸರಕಾರದ ಅಧೀನದಲ್ಲಿ 4 ವಿಮಾ ಕಂಪೆನಿಗಳಿವೆ. ಇತರ ಖಾಸಗಿ 30 ವಾಹನ ವಿಮಾ ಕಂಪೆನಿಗಳು ಕಾರ್ಯ ನಿರ್ವಹಿಸುತ್ತಿವೆ. ಸರಕಾರಿ ವಿಮಾ ಕಂಪೆನಿಗಳು ಸರಕಾರದ ಕಾಯ್ದೆ ಅನ್ವಯ ಕೆಲಸ ನಿರ್ವಹಿಸುತ್ತಿವೆ. ಖಾಸಗಿ ವಿಮಾ ಕಂಪೆನಿಗಳು ಪೈಪೋಟಿ ನಡೆಸುತ್ತಿದ್ದು ಕಾಯ್ದೆಯಲ್ಲಿ ಕೆಲವು ಮಾರ್ಪಾಟುಗಳಾಗಿವೆ. ವಾಹನ ಅಪಘಾತವಾದಲ್ಲಿ ವಾಹನದ ಮುಖಬೆಲೆಯ ವಿಮಾ ಮೊತ್ತದ ಶೇ.75ಕ್ಕಿಂತ ಅಧಿಕ ದುರಸ್ತಿಗೆ ಖರ್ಚಾದರೆ ಸಾಲ್‌ವೇಜ್‌ ಲಾಸ್‌/ಟೋಟಲ್‌ ಲಾಸ್‌ ಆಧಾರದಲ್ಲಿ ವಿಮಾ ಮೊತ್ತವನ್ನು ವಿಲೇ ಮಾಡಲಾಗುತ್ತದೆ. ಇಲ್ಲಿ ನೋಂದಣಿ ಪ್ರಮಾಣಪತ್ರದೊಂದಿಗೆ ಅಥವಾ ನೋಂದಣಿ ಪ್ರಮಾಣಪತ್ರವಿಲ್ಲದೆ ವಿಮಾ ಮೊತ್ತದ ಪರಿಹಾರ ನೀಡಲಾಗುತ್ತದೆ. ನೋಂದಣಿ ಪ್ರಮಾಣಪತ್ರವಿಲ್ಲದೆ ವಿಮಾ ಮೊತ್ತದ ಪರಿಹಾರ ಬೇಗ ಸಿಗುತ್ತದೆ. ವಾಹನವನ್ನು ಪುನಃ ದುರ ಸ್ತಿ ಮಾಡಿ ಅವರು ಮಾರಾಟ ಮಾಡುತ್ತಾರೆ. ನೋಂದಣಿ ಪ್ರಮಾಣಪತ್ರದೊಂದಿಗೆ ವಿಮಾ ಮೊತ್ತದ ಪರಿಹಾರ ನೀಡುವಾಗ ವಾಹನವನ್ನು ಒಟ್ಟು ನಷ್ಟವೆಂದು (ಟೋಟಲ್‌ ಲಾಸ್‌) ಪರಿಗಣಿಸಿ ವಾಹನವನ್ನು ಗುಜರಿಗೆ ಹಾಕಿ ಉಳಿದ ಮೊತ್ತವನ್ನು ವಿಮಾ ಕಂಪೆನಿ ಭರಿಸುತ್ತದೆ ಮತ್ತು ಅನಂತರ ನೋಂದಣಿ ರದ್ದುಪಡಿಸಲು ಪ್ರಾದೇಶಿಕ ಸಾರಿಗೆ ಕಚೇರಿಗೆ ಒಪ್ಪಿಸಲೇಬೇಕಾಗುತ್ತದೆ ಎಂದರು.

ಅಪ್‌ಲೋಡ್‌ ವಿಳಂಬ:

ಮಹಾವೀರ ಮೋಟಾರ್‌ ಚಾಲನ ತರಬೇತಿ ಶಾಲೆ ಪ್ರಾಂಶುಪಾಲ ನೇಮಿರಾಜ್‌ ಅರಿಗ ಮಾತನಾಡಿ, ವಾಹನ ವಿಮೆ ಪಾವತಿಸಿದ್ದರೂ ವಾಹನ ತಂತ್ರಾಂಶದಲ್ಲಿ ಅಪ್‌ಲೋಡ್‌ ಆಗಲು ತಡವಾಗುತ್ತದೆ. ಇದರಿಂದ  ವಾಹನ ಅಪಘಾತಕ್ಕೀಡಾದರೆ ವಾಹನದ ವಿಮಾ ಪರಿಹಾರ ಮೊತ್ತ ಪಡೆಯಲು ಸಮಸ್ಯೆಯಾಗುತ್ತದೆ ಎಂದರು.

ವಾಹನದ ಮಾಲಕತ್ವ ವರ್ಗಾವಣೆಯಾದ ಅನಂತರ ಬಿ  ಪ್ರತಿ  ಸಲ್ಲಿಸಬೇಕು. ವಿಮಾ ಮೊತ್ತವನ್ನು ಪಾವತಿಸಿ 2 ದಿನದೊಳಗೆ ವಾಹನ ತಂತ್ರಾಂಶದಲ್ಲಿ ಅಪ್‌ಲೋಡ್‌ ಆಗುತ್ತದೆ. ಶೀಘ್ರ ಅಪ್‌ಲೋಡ್‌,ಅಪ್‌ಡೆೇಟ್‌ ಆಗುವ ಬಗ್ಗೆ ಐಆರ್‌ಎಐಡಿ ಹೈದರಾಬಾದ್‌ಗೆ ಮನವಿ ಸಲ್ಲಿಸಬಹುದು ಎಂದು ವಿಮಾ ಕಂಪೆನಿಯವರು ಹೇಳಿದರು.

ಬಸ್‌ನಲ್ಲಿ ಹೆಚ್ಚು  ಹಣ ವಸೂಲು:

ಬೈರಂಪಳ್ಳಿಯ ಶೇಖರ ಕುಲಾಲ್‌, ಕುಂಟಾಲಕಟ್ಟೆ ಮಾರ್ಗವಾಗಿ ಎಳ್ಳಾರೆಗೆ ಬೆಳಗ್ಗೆ ಮತ್ತು ಸಂಜೆ  ಬಸ್‌ ಸೌಲಭ್ಯ ಒದಗಿಸುವಂತೆ ಮನವಿ ಮಾಡಿ ದರು. ಗಂಗೊಳ್ಳಿಯ ನಾಗರಾಜ ಕಲೇಕಾರ್‌  ಕುಂದಾಪುರದಿಂದ ಗಂಗೊಳ್ಳಿಗೆ ರಾತ್ರಿ 9.30ಕ್ಕೆ ಬರುತ್ತಿದ್ದ ಎಪಿಎಂ ಬಸ್‌ ಈಗ ಬರುತ್ತಿಲ್ಲ. ರಜಾ ದಿನಗಳಲ್ಲೂ ಬಸ್‌ ಸೌಲಭ್ಯವಿರುವುದಿಲ್ಲ. ಕೆಲವು   ಪರವಾನಿಗೆ ಇಲ್ಲದೆ ಓಡಾಡುತ್ತವೆ. ಬಸ್‌ನ ದರ ಹೆಚ್ಚು ತೆಗೆದುಕೊಳ್ಳುತ್ತಾರೆ ಎಂದು ದೂರಿದರು.

ಶೀಘ್ರ ಬಸ್‌ ದರ ಪರಿಷ್ಕರಣೆ:

ಕೋವಿಡ್‌ನಿಂದಾಗಿ ಬಸ್‌ಗಳು ಅನುಪಯುಕ್ತತೆ ಯಲ್ಲಿರುವುದರಿಂದ ಈ ಸಮಸ್ಯೆ ಉಂಟಾಗಿದೆ.  ಈಗ ಶಾಲಾ-ಕಾಲೇಜು ಆರಂಭವಾಗುತ್ತಿರುವುದರಿಂದ ಮತ್ತು ವಾರಾಂತ್ಯ ಕರ್ಫ್ಯೂ ರದ್ದಾಗಿರುವುದರಿಂದ ಹಲವು ಬಸ್‌ಗಳು ಅದ್ಯರ್ಪಣದಿಂದ ಬಿಡುಗಡೆ ಗೊಳ್ಳುತ್ತಿದ್ದು ಈ ಸಮಸ್ಯೆ ಆದಷ್ಟು ಬೇಗ ಪರಿಹರಿಸಲಾಗುವುದು.  ಶೀಘ್ರದಲ್ಲಿ ಬಸ್‌ ದರ ಪರಿಷ್ಕರಣೆ ಮಾಡಿ ಸಾರ್ವಜನಿಕರಿಗೆ ತಿಳಿಸಲಾಗುವುದು ಎಂದು ಜೆ.ಪಿ.ಗಂಗಾಧರ್‌ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next