ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮತ್ತೆ ಪಾರ್ಕಿಂಗ್ ಶುಲ್ಕ ವ್ಯವಸ್ಥೆ ಜಾರಿಗೆ ಬರಲಿದೆ. ಅಷ್ಟೇ ಅಲ್ಲ, ವಾಹನ ಮಾಲೀಕರು ತಮ್ಮ ವಾಹನಗಳನ್ನು ಮನೆ ಮುಂದಿನ ರಸ್ತೆ ಬದಿಯಲ್ಲಿ ನಿಲ್ಲಿಸಿದರೆ ದಂಡ ತೆರಬೇಕಾಗುತ್ತದೆ!
ಹೌದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡುವುದನ್ನು ನಿಯಂತ್ರಿಸುವುದು ಹಾಗೂ ವ್ಯವಸ್ಥಿತ ವಾಹನ ನಿಲುಗಡೆ ವ್ಯವಸ್ಥೆ ಜಾರಿಗೆ ತರಲು ಸಾರಿಗೆ ಇಲಾಖೆ ಮುಂದಾಗಿದೆ. ಇದಕ್ಕೆ ನಗರ
ಪೊಲೀಸರ ಸಹಕಾರವನ್ನು ಇಲಾಖೆ ಪಡೆಯಲಿದೆ.
ಹೀಗಾಗಿ, ಈ ಹಿಂದೆ ಸಾರ್ವಜನಿಕರ ವಿರೋಧಕ್ಕೆ ಕಾರಣವಾಗಿ ರದ್ದುಗೊಳಿಸಲಾಗಿದ್ದ ಪಾರ್ಕಿಂಗ್ ಶುಲ್ಕ ಪಾವತಿ ವ್ಯವಸ್ಥೆ ಮತ್ತೆ ಜಾರಿಯಾಗುವ ಸಾಧ್ಯತೆಯಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಸ್ಥಳ ಗುರುತಿಸಿ ಅಲ್ಲಿ ನಿಲ್ಲಿಸುವ ವಾಹನಗಳ ಮಾಲೀಕರಿಂದ ಪಾರ್ಕಿಂಗ್ ಶುಲ್ಕ ಪಡೆಯುವುದು ಹಾಗೂ ಕೆಲವು ರಸ್ತೆಗಳಲ್ಲಿ ಮತ್ತು ಜಂಕ್ಷನ್‌ಗಳಲ್ಲಿ ವಾಹನಗಳನ್ನು ನಿಲ್ಲಿಸುವುದನ್ನು ನಿಷೇಧಿಸಲು ತೀರ್ಮಾನಿಸಲಾಗಿದೆ. ಅಡ್ಡಾದಿಡ್ಡಿ ವಾಹನ ನಿಲುಗಡೆಯಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿರುವುದು ಈ ನಿರ್ಧಾರಕ್ಕೆ ಕಾರಣ.
ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ರಾಜಧಾನಿಯಲ್ಲಿ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಗೆಜಾರಿಗೊಳಿಸಲು ಹಾಗೂ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡುವ ವಾಹನಗಳ ಮಾಲೀಕರಿಗೆ ದಂಡ ವಿಧಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಮನೆ ಅಥವಾ ಕಟ್ಟಡದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿದ್ದರೂ ವಾಹನಗಳನ್ನು ಖರೀದಿಸಿ, ಮನೆ ಎದುರಿನ ರಸ್ತೆ ಪಕ್ಕದಲ್ಲಿ ವಾಹನ ನಿಲ್ಲಿಸಲಾಗುತ್ತಿದೆ. ಈ ರೀತಿ ವಾಹನ ನಿಲ್ಲಿಸುವುದರಿಂದ ಬಡಾವಣೆಗಳಲ್ಲಿ ತರ ವಾಹನಗಳ ಸಂಚಾರಕ್ಕೆ ತೊಡಕಾಗುತ್ತಿದೆ. ಈ ರೀತಿ ವಾಹನ ನಿಲ್ಲಿಸುವ ಮಾಲೀಕರಿಗೆ ದಂಡ ವಿಧಿಸುವ ಮೂಲಕ ಅಡ್ಡಾದಿಡ್ಡಿ ಪಾರ್ಕಿಂಗ್‌ಗೆ ಕಡಿವಾಣ ಹಾಕುವ ಉದ್ದೇಶವಿದೆ. ಈ ವ್ಯವಸ್ಥೆಯನ್ನು ಯಾವ ರೀತಿ ಜಾರಿಗೆ ತರಬಹುದು ಎಂಬ ಬಗ್ಗೆ
ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ನಗರದಲ್ಲಿ ಖಾಸಗಿ ಬಸ್‌ಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಖಾಸಗಿ ಬಸ್‌ಗಳಿಗೆ ನಗರದಲ್ಲಿ ನಿಲ್ದಾಣ ವ್ಯವಸ್ಥೆ ಇಲ್ಲವಾದಲ್ಲಿ ಅವರು ನಗರದ ಹೊರಭಾಗದಲ್ಲಿ ನಿಲ್ದಾಣ ವ್ಯವಸ್ಥೆ ಮಾಡಿಕೊಳ್ಳಬೇಕು. ಅದನ್ನು ಹೊರತುಪಡಿಸಿ ನಗರಾದ್ಯಂತ ವಾಹನ ಸಂಚಾರಕ್ಕೆ ಅಡ್ಡಿಪಡಿಸುವ ರೀತಿ ಮನಬಂದಂತೆ ಬಸ್ ನಿಲ್ಲಿಸುವುದು ಅಥವಾ ಸಂಚರಿಸುವುದು ಸರಿಯಲ್ಲ ಎಂದು ಹೇಳಿದರು.
ಜನತೆ ಸಮೂಹ ಸಾರಿಗೆ ಬಳಸಿಕೊಳ್ಳುವ ಮೂಲಕ ನಗರದ ವಾಹನ ದಟ್ಟಣೆ ತೆಡಗಟ್ಟಲು ಸಹಕರಿಸಬೇಕು. ಆದರೆ, ಸಮೂಹ ಸಾರಿಗೆ ಬಳಸುವಂತೆ ಯಾರನ್ನೂ ಬಲವಂತ ಮಾಡುವುದಿಲ್ಲ. ಬದಲಾಗಿ ಜಾಗೃತಿ ಮೂಡಿಸುವ ಮೂಲಕ ಅವರ ಮನವೊಲಿಸಲಾಗುವುದು.
ಬೆಂಗಳೂರಿನಂತಹ ನಗರಕ್ಕೆ ಮೆಟ್ರೋ ರೈಲು ಉಪಯುಕ್ತ ಸಾರ್ವಜನಿಕ ಸಂಪರ್ಕ ಸಾರಿಗೆಯಾಗಿದ್ದು, ಇದನ್ನು ಜನ ಹೆಚ್ಚು ಹೆಚ್ಚು ಬಳಸಿಕೊಳ್ಳಬೇಕು. ಸ್ವಂತ ಕೆಲಸಕ್ಕೆ ಹೋಗುವುದಾದರೆ ಮಾತ್ರ ತಮ್ಮ ವಾಹನ ಬಳಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.