Advertisement

ಸಕಾಲ ಅರ್ಜಿ ವಿಳಂಬವಾದ್ರೆ ದಂಡ ಕಡ್ಡಾಯ

05:41 PM Jul 26, 2022 | Team Udayavani |

ಕೊಪ್ಪಳ: ಸಕಾಲದಡಿ ಬರುವ ಎಲ್ಲ ಇಲಾಖೆಗಳು ನಿಗದಿಪಡಿಸಿದ ಅವಧಿಯೊಳಗೆ ಅರ್ಜಿ ವಿಲೇವಾರಿ ಮಾಡದಿದ್ದರೆ, ಅನಗತ್ಯ ವಿಳಂಬ ಮಾಡಿದರೆ ನಿಯಮಾನುಸಾರ ಸಂಬಂಧಿಸಿದ ಅಧಿಕಾರಿ, ವಿಷಯ ನಿರ್ವಾಹಕರು ದಂಡ ಪಾವತಿಸುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಸುಂದರೇಶ ಬಾಬು ಅವರು ಎಚ್ಚರಿಕೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಕಾಲ ಹಾಗೂ ಐಪಿಜಿಆರ್‌ಎಸ್‌ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಕಾಲದಡಿ ಒಟ್ಟು 45 ಇಲಾಖೆಗಳು ವಿವಿಧ ಸೇವೆಗಳನ್ನು ಸಾರ್ವಜನಿಕರಿಗೆ ಸೇವೆ ಒದಗಿಸುತ್ತವೆ. ಪ್ರತಿ ಇಲಾಖೆಯ ಒಪ್ಪಿಗೆ ಹಾಗೂ ಕಾರ್ಯನಿರ್ವಹಣೆಯ ಅವಧಿಯನುಸಾರ ಪ್ರತಿ ಅರ್ಜಿ ವಿಲೇವಾರಿಗೂ ನಿರ್ದಿಷ್ಟ ಕಾಲಮಿತಿ ನಿಗದಿಪಡಿಸಿದೆ. ಆದಾಗ್ಯೂ ಕೆಲ ಇಲಾಖೆಗಳು ಅರ್ಜಿ ವಿಲೇವಾರಿಗೆ ಹಾಗೂ ಅರ್ಜಿ ತಿರಸ್ಕಾರಕ್ಕೆ ಕೊನೆಯ ದಿನಾಂಕದವರೆಗೆ ಕಾಯುತ್ತವೆ. ಇದರಿಂದ ಅರ್ಜಿದಾರರ ಸಮಯ ವ್ಯರ್ಥವಾಗುವುದರೊಂದಿಗೆ ಜಿಲ್ಲೆಯ ಪ್ರಗತಿಯಲ್ಲೂ ಕುಂಠಿತಗೊಳ್ಳುತ್ತದೆ. ಆದ್ದರಿಂದ ಅರ್ಜಿದಾರರಿಗೆ ಸೇವೆಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ನೀಡುವಂತೆ ಅರ್ಜಿ ಸ್ವೀಕಾರ ಸಮಯದಲ್ಲಿ ತಿಳಿಸಿ. ಕೊನೆಯ ದಿನಾಂಕದವರೆಗೂ ಕಾದು ದಾಖಲಾತಿಗಳ ಕೊರತೆಯ ಕಾರಣ ನೀಡಿ ಅರ್ಜಿ ತಿರಸ್ಕರಿಸಬೇಡಿ. ಇದರಿಂದ ಅನಗತ್ಯ ವಿಳಂಬ ಉಂಟಾಗಿ, ಅರ್ಜಿದಾರರಿಗೂ ಸಮಸ್ಯೆಯಾಗುವುದರ ಜೊತೆಗೆ ಸಂಬಂಧಿಸಿದ ಅಧಿಕಾರಿ, ವಿಷಯ ನಿರ್ವಾಹಕರು ದಂಡ ಪಾವತಿಸಬೇಕಾಗಬಹುದು ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.

ಸಕಾಲ ಯೋಜನೆಯಡಿ ಜಾರಿಯಾಗಿ ಹಲವು ವರ್ಷಗಳೇ ಕಳೆದರು ಇದುವರೆಗೂ ಸಮರ್ಪಕ ಅನುಷ್ಠಾನ ಆಗುತ್ತಿಲ್ಲ. ಆದ್ದರಿಂದ ಇನ್ಮುಂದೆ ಸಕಾಲ ನಿರ್ವಹಣೆಗಾಗಿಯೇ ಎಲ್ಲ ಇಲಾಖೆಗಳ ಅಧಿಕಾರಿಗಳು ಒಬ್ಬ ಅಧೀನ ಅಧಿಕಾರಿ ಅಥವಾ ಸಿಬ್ಬಂದಿ ನಿಯೋಜಿಸಿ. ಕಂದಾಯ, ಜಿಪಂನಡಿ ಬರುವ ಎಲ್ಲ ಇಲಾಖೆಗಳು ಅರ್ಜಿಯನ್ನು ಕಡ್ಡಾಯವಾಗಿ ಸ್ವೀಕರಿಸಬೇಕು. ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಬೇಕು. ಯಾವುದೇ ಸೂಕ್ತ ಕಾರಣಗಳಿಲ್ಲದೇ ಅರ್ಜಿ ತಿರಸ್ಕಾರ ಮಾಡುವಂತಿಲ್ಲ. ಸಕಾಲದಲ್ಲಿ ಬರಿ ಅರ್ಜಿ ವಿಲೇವಾರಿಗಳಷ್ಟೇ ಅಲ್ಲ, ಬಾಕಿ ಉಳಿದ, ತಿರಸ್ಕರಿಸಿದ ಅರ್ಜಿಗಳ ಸಂಖ್ಯೆಯನ್ನು ಸಹ ಪರಿಗಣಿಸಲಾಗುವುದರಿಂದ ಜಿಲ್ಲೆಯ ಸೂಚ್ಯಂಕದಲ್ಲಿ ಇದು ಋಣಾತ್ಮಕ ಅಂಶವನ್ನು ತೋರಿಸುತ್ತದೆ. ಆದ್ದರಿಂದ ಸಕಾಲ ಅರ್ಜಿಗಳ ವಿಲೇವಾರಿಗೆ ಎಲ್ಲ ಇಲಾಖೆಗಳ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.

ಸಕಾಲದಂತೆ ಸಾರ್ವಜನಿಕರ ಅಹವಾಲು ಸ್ವೀಕಾರಕ್ಕಾಗಿ ಐಪಿಜಿಆರ್‌ಎಸ್‌ ತಂತ್ರಾಂಶವನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಇದು ನೇರವಾಗಿ ಸಿಎಂ ಡ್ಯಾಶ್‌ಬೋರ್ಡ್‌ನಲ್ಲಿ ಕಾರ್ಯನಿರ್ವಹಿಸುವುದರಿಂದ ಜಿಲ್ಲೆಯಲ್ಲಿ ಸ್ವೀಕೃತವಾಗುವ ಅರ್ಜಿಗಳು, ಅವುಗಳ ವಿಲೇವಾರಿ ಕುರಿತ ಮಾಹಿತಿಯು ಸಿಎಂ ಗಮನಕ್ಕೆ ಬರುತ್ತದೆ. ಆದ್ದರಿಂದ ಇದರಲ್ಲಿ ಸ್ವೀಕೃತವಾಗುವ ಎಲ್ಲ ಅರ್ಜಿಗಳಿಗೆ ಸೂಕ್ತ ಹಿಂಬರಹದೊಂದಿಗೆ ಅರ್ಜಿಯನ್ನು ಸಂಬಂಧಿ ಸಿದ ಇಲಾಖೆಗೆ ವರ್ಗಾಯಿಸಿ. ಸಕಾಲದಂತೆ ಕಾಲಮಿತಿಯೊಳಗೆ ಕಾರ್ಯನಿರ್ವಹಿಸಿ, ಮುಂದಿನ ಮಾಹೆಯಲ್ಲಿ ಸಕಾಲ ಹಾಗೂ ಐಜಿಪಿಆರ್‌ಎಸ್‌ ಕುರಿತು ಒಂದು ಕಾರ್ಯಾಗಾರ ಆಯೋಜಿಸಲಾಗುತ್ತಿದ್ದು, ಅಷ್ಟರೊಳಗೆ ಸಕಾಲ ನಿರ್ವಹಣೆಗೆ ಎಲ್ಲ ಇಲಾಖೆಗಳು ಸಿಬ್ಬಂದಿ ನಿಯೋಜಿಸಬೇಕೆಂದು ಅವರು ತಿಳಿಸಿದರು.

Advertisement

ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಸಮೀರ್‌ ಮುಲ್ಲಾ, ಎಸಿ ಬಸವಣಪ್ಪ ಕಲಶೆಟ್ಟಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಪ್ರಾಣೇಶ, ಸಕಾಲ ಕನ್ಸಲ್ಟೆಂಟ್‌ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next