ಚಾಮರಾಜನಗರ: ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಅವರು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಾಸ್ಕ್ ಹಾಕದ, ಭೌತಿಕ ಅಂತರ ಕಾಪಾಡದ ಜನರನ್ನು ತರಾಟೆಗೆ ತೆಗೆದುಕೊಂಡರು. ಚಿತ್ರೀಕರಣ ನಡೆಸುತ್ತಿದ್ದ ಧಾರಾವಾಹಿ ತಂಡಕ್ಕೆ ಬುದ್ದಿವಾದ ಹೇಳಿದರು. ಅಲ್ಲದೇ ಮಾಸ್ಕ್ ಧರಿಸದವರಿಗೆ ಅಧಿಕಾರಿಗಳು ದಂಡ ವಿಧಿಸಿದರು.
ಮಂಗಳವಾರ ಕೋವಿಡ್ ಸುರಕ್ಷಾ ಪಡೆಗೆ ಚಾಲನೆ ನೀಡಿದ ಬಳಿಕ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಅವರು ಅಧಿಕಾರಿಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು. ಅಂಗಡಿ ಮುಂಗಟ್ಟುಗಳಿಗೆ ತೆರಳಿ ಅಂಗಡಿ ಮಾಲೀಕರು ಹಾಗೂ ಜನರಿಗೆ ಮಾಸ್ಕ್ ಧರಿಸುವಂತೆ ಅರಿವು ಮೂಡಿಸಿದರು.
ಭುವನೇಶ್ವರಿ ವೃತ್ತದಲ್ಲಿದ್ದ ಮೊಬೈಲ್ ಮಾರಾಟ ಮಳಿಗೆಯೊಂದರಲ್ಲಿ ಭೌತಿಕ ಅಂತರ, ಮಾಸ್ಕ್ ಧರಿಸದ ಕಾರಣ ಅಂಗಡಿ ಮುಚ್ಚಿಸಿ, ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಚಾಮರಾಜೇಶ್ವರ ದೇವಾಲಯಕ್ಕೆ ತೆರಳಿ ಅಲ್ಲಿ ಸೇರಿದ್ದ ಜನರಿಗೂ ಸಹ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿ ಹೇಳಿದರು. ದೇವಾಲಯದ ಒಳಾವರಣದಲ್ಲಿ ಟಿವಿ ಧಾರಾವಾಹಿ ತಂಡವೊಂದು ಚಿತ್ರೀಕರಣ ನಡೆಸುತ್ತಿತ್ತು. ಈ ತಂಡ ಮಾಸ್ಕ್ ಧರಿಸಿರದ ಕಾರಣ, ದಿನೇ ದಿನೇ ಕೋವಿಡ್ ಪ್ರಕರಣ ಹೆಚ್ಚುತ್ತಿವೆ ಅಸಡ್ಡೆ ಮಾಡಬೇಡಿ, ಮಾಸ್ಕ್ ಧರಿಸಿ, ಭೌತಿಕ ಅಂತರ ಕಾಪಾಡಿ ಎಂದು ಚಿತ್ರತಂಡಕ್ಕೆ ಸಲಹೆ ನೀಡಿದರು.
ಯೋಜನಾ ನಿರ್ದೇಶಕ ಸುರೇಶ್, ನಗರಸಭೆ ಆಯುಕ್ತ ಕರಿಬಸವಯ್ಯ, ನಗರಸಭೆ ಆರೋಗ್ಯ ನಿರೀಕ್ಷಕರು ಮಾಸ್‌ಕ್ ಧರಿಸದೇ ಓಡಾಡುತ್ತಿದ್ದವರಿಗೆ ಸ್ಥಳದಲ್ಲೇ ದಂಡ ವಿಧಿಸಿದರು!
ಜಿಲ್ಲಾಧಿಕಾರಿಯವರು ಕೋವಿಡ್ ನಿಯಮ ಉಲ್ಲಂಸುವವರಿಗೆ ಜಾಗೃತಿ ಮೂಡಿಸುವ ಸಲುವಾಗಿ 65 ಜನರ ಸುರಕ್ಷಾ ಪಡೆಯನ್ನು ರಚಿಸಿದ್ದು, ಈ ಪಡೆ ಜನನಿಬಿಡ ಸ್ಥಳಗಳಲ್ಲಿ ಎಚ್ಚರಿಕೆ ವಿಧಿಸಿ ದಂಡ ವಿಧಿಸಲಿದೆ.