ಬೆಂಗಳೂರು: ಕಳೆದ ಹತ್ತು ದಿನಗಳ ಹಿಂದೆ ನಾಪತ್ತೆಯಾಗಿದ್ದ ಹೈಗ್ರೌಂಡ್ಸ್ ಠಾಣೆ ಪೇದೆ ಅಶೋಕ್ ರಾಥೋಡ್(38) ಅವರ ಮೃತದೇಹ ವಿಜಯವಾಡ ರೈಲಿನಲ್ಲಿ ಪತ್ತೆಯಾಗಿದೆ. ನಿವೃತ್ತ ಸೈನಿಕರಾಗಿದ್ದ ಅಶೋಕ್ ರಾಥೋಡ್ ಮೂಲತಃ ಬಾಗಲಕೋಟೆಯವರು. 2014ರಲ್ಲಿ ಸೈನಿಕ ಕೋಟಾದಡಿ ಪೇದೆಯಾಗಿ ಆಯ್ಕೆಯಾಗಿದ್ದ ರಾಥೋಡ್ ಹೈಗ್ರೌಂಡ್ಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ಪತ್ನಿ ಮತ್ತು ಮಗು ಬಾಗಲಕೋಟೆಯಲ್ಲಿದ್ದು, ನಗರದಲ್ಲಿ ಮಲ್ಲೇಶ್ವರದ ತಂಗಿಯ ಮನೆಯಲ್ಲಿ ನೆಲೆಸಿದ್ದರು.
ಹತ್ತು ದಿನಗಳ ಹಿಂದೆ ರಾಥೋಡ್ ಊರಿಗೆ ಹೋಗುತ್ತಿರುವುದಾಗಿ ಹೇಳಿ ಹೋಗಿದ್ದರಾದರೂ, ಅಲ್ಲಿಗೆ ಹೋಗಿರಲಿಲ್ಲ. ಹೀಗಾಗಿ ಅನುಮಾನಗೊಂಡ ರಾಥೋಡ್ ಸೋದರಿ ಮಲ್ಲೇಶ್ವರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಮಲ್ಲೇಶ್ವರ ಠಾಣೆ ಪೊಲೀಸರು ಎಲ್ಲಾ ಜಿಲ್ಲಾ ಕೇಂದ್ರಗಳಿಗೂ ರಾಥೋಡ್ ಫೋಟೋ ಕಳುಹಿಸಿ ಎಲ್ಲೆಡೆ ಹುಡುಕಾಟ ಆರಂಭಿಸಿದ್ದರು. ಆದರೆ ರಾಥೋಡ್ ಸುಳಿವು ಮಾತ್ರ ಪತ್ತೆಯಾಗಿರಲಿಲ್ಲ.
ಮೂರು ದಿನಗಳ ಹಿಂದೆ ಆಂಧ್ರದ ಪೊಲೀಸರಿಂದ ಡಿಜಿಪಿ ಕಂಟ್ರೋಲ್ ರೂಂಗೆ ಕರೆ ಬಂದಿದ್ದು, ಕರ್ನಾಟಕದ ಪೇದೆಯೊಬ್ಬರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಭಾನುವಾರ ರಾತ್ರಿ ಮಲ್ಲೇಶ್ವರ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಮಲ್ಲೇಶ್ವರ, ಹೈಗ್ರೌಂಡ್ಸ್ ಮತ್ತು ರಾಥೋಡ್ ಪೋಷಕರು ವಿಜಯವಾಡಕ್ಕೆ ತೆರಳಿದ್ದಾರೆ.
ಕುಡಿದ ಮತ್ತಿನಲ್ಲಿ ಕಾನ್ಸ್‌ಟೇಬಲ್ ಅಶೋಕ್ ರಾಥೋಡ್ ಬಾಗಲಕೋಟೆಗೆ ತೆರಳುವ ರೈಲು ಹತ್ತುವ ಬದಲು ಬೆಂಗಳೂರು-ವಿಜಯವಾಡಗೆ ತೆರಳುವ ರೈಲು ಹತ್ತಿದ್ದರು. ಈ ರೈಲಿನ ಶೌಚಾಲಯದಲ್ಲಿ ರಾಥೋಡ್ ಮೃತಪಟ್ಟಿದ್ದಾರೆ. ಅವರ ಪ್ಯಾಂಟ್‌ನ ಪಾಕೇಟ್‌ನಲ್ಲಿ ಸೋಲದೇವನಹಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ರಶೀದಿಯೊಂದು ಪತ್ತೆಯಾಗಿದೆ. ವಿಜಯವಾಡಕ್ಕೆ ತೆರಳಿರುವ ಸಿಬ್ಬಂದಿ ಬಂದ ಬಳಿಕ ಘಟನೆಗೆ ಕಾರಣ ತಿಳಿಯಲಿದೆ ಎಂದು ಅಧಿಕಾರಿ ತಿಳಿಸಿದರು.
10 ದಿನಗಳಿಂದ ಗೈರಾಗಿದ್ದ ರಾಥೋಡ್: ಅಶೋಕ್ ರಾಥೋಡ್ ಹೆಚ್ಚು ಮದ್ಯ ಸೇವಿಸುತ್ತಿದ್ದರು. ಕಳೆದ 10 ದಿನಗಳಿಂದ ಠಾಣೆಗೆ ಬಾರದ ರಾಥೋಡ್ ಠಾಣಾಧಿಕಾರಿಗೆ ಹೇಳದೆ ಗೈರಾಗಿದ್ದಾರೆ ಎಂದು ಹೈಗ್ರೌಂಡ್ಸ್ ಠಾಣೆಯ ಸಿಬ್ಬಂದಿಯೊಬ್ಬರು
“ಉದಯವಾಣಿ’ಗೆ ತಿಳಿಸಿದ್ದಾರೆ.