Advertisement
ಆರು ದಿನಗಳ ಕಾಲ ಆತನ ಪತ್ತೆಗೆ ಕಂಗೆಟ್ಟಿದ್ದ ಪೊಲೀಸರು, ಸಾರ್ವಜನಿಕರೊಬ್ಬರು ನೀಡಿದ ಮಾಹಿತಿ ಆಧರಿಸಿ, ಶುಕ್ರವಾರ ರಾತ್ರಿ ಆರ್.ಟಿ.ನಗರದ ಮಸೀದಿಯೊಂದರ ಬಳಿ ಅನುಮಾನಾಸ್ಪದ ವ್ಯಕ್ತಿಯನ್ನು ಪತ್ತೆ ಮಾಡಿದ್ದಾರೆ. ಕೊನೆ ಕ್ಷಣದಲ್ಲಿ ಎಚ್ಚೆತ್ತ ಪೊಲೀಸರು, ಶುಕ್ರವಾರ ರಾತ್ರಿ ವ್ಯಕ್ತಿಯ ಭಾವಚಿತ್ರ ಸಹಿತ (ಸಿಸಿ ಕ್ಯಾಮೆರಾ ದೃಶ್ಯ ಆಧರಿತ) ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು, ಆತನ ಪತ್ತೆಗೆ ನೆರವಾಗಿದೆ.
Related Articles
Advertisement
ಮತ್ತೂಂದೆಡೆ ಆಂತರಿಕ ಭದ್ರತಾ ದಳ, ರಾಜ್ಯ ಮತ್ತು ಕೇಂದ್ರ ಗುಪ್ತಚರ ಇಲಾಖೆ, ರಾಷ್ಟ್ರೀಯ ತನಿಖಾ ತಂಡ(ಎನ್‌ಐಎ) ಐದಾರು ದಿನಗಳಿಂದ ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕಲು ಹಗಲು-ರಾತ್ರಿ ಶ್ರಮಿಸಿತ್ತು. ಹೀಗಾಗಿ ಮೇ 10ರಂದು ಅಪರಿಚಿತ ವ್ಯಕ್ತಿಯ ಬಗ್ಗೆ ಮಾಹಿತಿಯಿದ್ದಲ್ಲಿ ತಿಳಿಸುವಂತೆ ಪೊಲೀಸರು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದರು.
ಪೊಲೀಸ್ ಆಯುಕ್ತರ ಸ್ಪಷ್ಟನೆ: ಪ್ರಕರಣ ಕುರಿತು ಸ್ಪಷ್ಟನೆ ನೀಡಿದ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದ ವರ್ತನೆ ತೋರಿದ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದು, ಆತನನ್ನು ರಾಜಸ್ಥಾನ ಮೂಲದ ಸಾಜಿದ್ ಖಾನ್ ಎಂದು ಗುರುತಿಸಲಾಗಿದೆ. ರಂಜಾನ್ ಪ್ರಯುಕ್ತ ಪತ್ನಿ, ಇಬ್ಬರು ಮಕ್ಕಳ ಜತೆ ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದ ಖಾನ್, ಕಾಟನ್‌ಪೇಟೆ ಮುಖ್ಯರಸ್ತೆಯಲ್ಲಿರುವ ಲಾಡ್ಜ್ ಒಂದರಲ್ಲಿ ಉಳಿದುಕೊಂಡಿದ್ದು, ನಗರದ ವಿವಿಧ ಮಸೀದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ದಾನ ಪಡೆಯುತ್ತಿದ್ದ. ಶುಕ್ರವಾರ ರಾತ್ರಿ ಆರ್.ಟಿ.ನಗರದ ಮಸೀದಿಯೊಂದರ ಬಳಿ ಪತ್ತೆಯಾಗಿದ್ದಾನೆ ಎಂದು ತಿಳಿಸಿದರು.
ನಾಣ್ಯಗಳು, ತಾಯಿದ್ (ತಾಯಿತ) ಇತ್ತು: ಮೇ 6ರಂದು ವಿವಿಧ ಸಾರ್ವಜನಿಕ ಸ್ಥಳದಲ್ಲಿ ಭೀಕ್ಷಾಟನೆ ನಡೆಸಿಸದ ಖಾನ್, ಸಂಜೆ 7.30ರ ಸುಮಾರಿಗೆ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಪೂರ್ವ ದ್ವಾರದ ಬಳಿ ಬಂದಿದ್ದು, ಲೋಹ ಶೋಧಕ ಯಂತ್ರದ ಮೂಲಕ ಹೋದಾಗ ಅಲಾರಾಂ (ಬೀಪ್) ಸದ್ದು ಬಂದಿದೆ. ಜತೆಗೆ ಭದ್ರತಾ ಸಿಬ್ಬಂದಿ ಸ್ಕ್ಯಾನಿಂಗ್ ಉಪಕರಣದ ಮೂಲಕ ತಪಾಸಣೆ ನಡೆಸಿದಾಗಲೂ ಜೋರಾದ ಬೀಪ್ ಸುದ್ದು ಬಂದಿದೆ.
ಅನುಮಾನಗೊಂಡ ಭದ್ರತಾ ಸಿಬ್ಬಂದಿ, ಜುಬ್ಟಾ ಒಳಗಡೆ ಹಾಕಿದ್ದ ಬೆಲ್ಟ್ ತೆಗೆದು ತೋರಿಸುವಂತೆ ಕೇಳಿದ್ದಾರೆ. ಆಗ ಖಾನ್, ಮನಿ (ನಾಣ್ಯಗಳು) ಹಾಗೂ ತಾಯಿತಗಳು ಇವೆ ಎಂದು ಹಿಂದಿಯಲ್ಲಿ ಹೇಳಿದ್ದಾನೆ. ಆದರೆ, ಭಾಷೆ ಅರ್ಥ ಮಡಿಕೊಳ್ಳದ ಭದ್ರತಾ ಸಿಬ್ಬಂದಿ, ತೆಗೆದು ತೋರಿಸುವಂತೆ ಕನ್ನಡದಲ್ಲಿ ಸೂಚಿಸಿ, ಮತ್ತೂಬ್ಬ ಪ್ರಯಾಣಿಕರ ತಪಾಸಣೆಗೆ ಮುಂದಾಗಿದ್ದಾರೆ. ಈ ವೇಳೆ ಗಾಬರಿಗೊಂಡ ಖಾನ್, ನಿಲ್ದಾಣದಿಂದ ಹೊರ ನಡೆದಿದ್ದಾನೆ ಎಂದು ಆಯುಕ್ತರು ಮಾಹಿತಿ ನೀಡಿದರು.
ಆರ್.ಟಿ.ನಗರದಲ್ಲಿ ಪತ್ತೆ: ಸಾರ್ವಜನಿಕ ಪ್ರಕಟಣೆ ಹೊರಡಿಸುತ್ತಿದ್ದಂತೆ, ಅನುಮಾನಾಸ್ಪದ ವ್ಯಕ್ತಿಯು ಕಾಟನ್‌ಪೇಟೆ ಮುಖ್ಯರಸ್ತೆಯಲ್ಲಿನ ಲಾಡ್ಜ್ ಒಂದರಲ್ಲಿ ಉಳಿದುಕೊಂಡಿದ್ದ ಎಂಬುದಾಗಿ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಖಾನ್ ಬೆನ್ನು ಹತ್ತಿದ ವಿಶೇಷ ತಂಡಕ್ಕೆ, ಆತ ಆಟೋ ಮೂಲಕ ಆರ್.ಟಿ.ನಗರದ ಮಸೀದಿಗೆ ಹೋಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಅದರಂತೆ, ಶುಕ್ರವಾರ ರಾತ್ರಿ ಮಸೀದಿಗೆ ಬರುವಾಗ ಸಾಜಿದ್ ಖಾನ್‌ನನ್ನು ವಶಕ್ಕೆ ಪಡೆಯಲಾಗಿದೆ. ಪ್ರತಿನಿತ್ಯ ಮುಂಜಾನೆ ಐದು ಗಂಟೆ ಹಾಗೂ ಸಂಜೆ ಆರು ಗಂಟೆ ನಂತರ ಖಾನ್ ಹಾಗೂ ಕುಟುಂಬ ವಿವಿಧ ಮಸೀದಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಭೀಕ್ಷಾಟನೆಗೆ ಹೋಗುತ್ತದೆ ಎಂದು ಆಯುಕ್ತ ಸುನಿಲ್‌ಕುಮಾರ್ ತಿಳಿಸಿದರು.
ಭದ್ರತಾ ಸಿಬ್ಬಂದಿಗೆ ಹಣದ ಆಮಿಷ ಸುಳ್ಳು: ಶಂಕಾಸ್ಪದ ವ್ಯಕ್ತಿಯೊಬ್ಬ ಮೆಟ್ರೋ ನಿಲ್ದಾಣ ಪ್ರವೇಶಿಸಲು ಭದ್ರತಾ ಸಿಬ್ಬಂದಿಗೆ ಹಣದ ಆಮಿಷವೊಡ್ಡಿದ್ದ ಂಬುದಕ್ಕೆ ಸಂಬಂಧಿಸಿದಂತೆ ಕೆಲ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾದ ಊಹಾಪೋಹಗಳ ಸುದ್ದಿಗಳು ಸತ್ಯಕ್ಕೆ ದೂರವಾದವು. ಅಂತಹ ಯಾವುದೇ ಬೆಳವಣಿಗೆ ನಿಲ್ದಾಣದಲ್ಲಿ ನಡೆದಿಲ್ಲ ಎಂದು ನಗರ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದರು.
ಮೆಟ್ರೋ ಸೇವೆ ಬಗ್ಗೆ ಆತನಿಗೆ ಮಾಹಿತಿಯಿಲ್ಲ: ಪೊಲೀಸ್ ಮೂಲಗಳ ಪ್ರಕಾರ ಸಾಜಿದ್ ಖಾನ್‌ಗೆ ಮೆಟ್ರೋ ರೈಲು ಸೇವೆ ಕುರಿತು ಹೆಚ್ಚಿನ ಮಾಹಿತಿಯಿಲ್ಲ. ಸಾರ್ವಜನಿಕರು ಮೆಟ್ರೋ ನಿಲ್ದಾಣದ ಕಡೆ ಹೆಚ್ಚು ಹೋಗುತ್ತಿದ್ದರಿಂದ ಖಾನ್ ಕೂಡ ಆ ಕಡೆ ಹೋಗಿದ್ದಾನೆ. ಮೊದಲಿಗೆ ಪೂರ್ವ ಗೇಟ್ ಮೂಲಕ ಒಳ ಪ್ರವೇಶಿಸಿದ್ದು, ಭದ್ರತಾ ಸಿಬ್ಬಂದಿ ತಪಾಸಣೆ ನಡೆಸುವುದನ್ನು ನೋಡಿ ವಾಪಸ್ ಬಂದಿದ್ದಾನೆ.
ಬಳಿಕ, ಪಶ್ಚಿಮ ದ್ವಾರದ ಮೂಲಕ ನಿಲ್ದಾಣ ಪ್ರವೇಶಿಸಲು ಹೋಗಿದ್ದಾನೆ. ಈ ವೇಳೆ ಎರಡೂ ದ್ವಾರಗಳು ಒಂದೇ ನಿಲ್ದಾಣ ಸಂಪರ್ಕಿಸುತ್ತವೆ ಎಂಬುದು ಆತನಿಗೆ ತಿಳಿದಿಲ್ಲ. ಅಲ್ಲದೆ, ಆತ ಎರಡೂ ಕೈಗಳು ಹಾಗೂ ಸೊಂಟಕ್ಕೆ ತಾಯಿತ ಕಟ್ಟಿಕೊಂಡಿದ್ದರಿಂದ ಲೋಹ ಶೋಧಕ ಯಂತ್ರದಲ್ಲಿ ಅಲಾರಾಂ (ಬೀಪ್) ಸದ್ದು ಜೋರಾಗಿ ಕೇಳಿಬಂದಿದೆ ಎಂದು ಪೊಲೀಸರು ತಿಳಿಸಿದರು.
ಪರಿಶೀಲನೆ ಮುಂದುವರಿಕೆ: ಪ್ರಾಥಮಿಕ ಮಾಹಿತಿ ಪ್ರಕಾರ ಸಾಜಿದ್ ಖಾನ್ ವಿರುದ್ಧ ಯಾವುದೇ ಆರೋಪಗಳಿಲ್ಲ. ಆದರೂ ಆತನ ಪೂರ್ವಪರ ತಿಳಿದುಕೊಳ್ಳಲು ರಾಜಸ್ಥಾನ ಪೊಲೀಸರಿಗೆ ಮಾಹಿತಿ ನೀಡಿದ್ದು, ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಹೇಳಿದರು.