Advertisement

ಕನ್ನಡದಲ್ಲಿ ಓದಿದವರಿಗೆ ಉದ್ಯೋಗ ಸಿಗಲಿ

06:33 PM Nov 08, 2021 | Team Udayavani |

ಬೆಳಗಾವಿ: ಕನ್ನಡ ಓದಿದರೆ ಮಾತ್ರ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಉದ್ಯೋಗವಕಾಶ ಎಂಬ ಕುರಿತು ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು. ಕನ್ನಡ ಅನ್ನದ ಭಾಷೆ ಆಗಬೇಕು. ಅನ್ನದ ಭಾಷೆ ಆಗಲಾರದೇ ಕನ್ನಡ ಬದುಕುವುದಿಲ್ಲ ಎಂದು ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದರು.

Advertisement

ಇಲ್ಲಿಯ ಶಿವಬಸವ ನಗರದ ದಿ ಇನ್ಸ್‌ಟಿಟ್ಯೂಟ್‌ ಆಫ್‌ ಇಂಜಿನಿಯರ್ಸ್‌(ಇಂಡಿಯಾ) ಸಭಾಂಗಣದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಪ್ತಸ್ವರ ಸಂಗೀತ ಕಲಾ ಬಳಗ ವತಿಯಿಂದ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ರವಿವಾರ ಕನ್ನಡಕ್ಕಾಗಿ ನಾವು ಅಭಿಯಾನದಡಿಯಲ್ಲಿ ಗಡಿ ಕನ್ನಡ ಸಾಂಸ್ಕೃತಿಕ ಉತ್ಸವ, ಕವಿಗೋಷ್ಠಿ ಹಾಗೂ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಎರಡೂವರೆ ಸಾವಿರಕ್ಕಿಂತ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಇನ್ನು ಮುಂದೆ ಅನ್ನದ ಭಾಷೆ ಆಗಬೇಕು. ಇದರಿಂದ ಪ್ರತಿಯೊಬ್ಬರಲ್ಲಿಯೂ ಕನ್ನಡದ ಬಗ್ಗೆ ಅಭಿಮಾನ ಬೆಳೆಯುತ್ತದೆ. ಜೊತೆ ಜೊತೆಗೆ ಕನ್ನಡ ಬೆಳೆಯುತ್ತ ಸಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಮಹಾರಾಷ್ಟ್ರ, ತಮಿಳುನಾಡು, ಗುಜರಾತ ಸೇರಿದಂತೆ ಯಾವುದೇ ರಾಜ್ಯಗಳಲ್ಲೂ ಪ್ರಾದೇಶಿಕ ಭಾಷೆಗಳ ರಕ್ಷಣೆಗಾಗಿ ಕನ್ನಡ ನಿಗಮ, ಅಭಿವೃದ್ಧಿ ಪ್ರಾಧಿಕಾರಗಳಿಲ್ಲ. ಆದರೆ ಕರ್ನಾಟಕದಲ್ಲಿ ಮಾತ್ರ ಮಾತೃಭಾಷೆ ಹಾಗೂ ಗಡಿ ಸಂರಕ್ಷಣೆಗಾಗಿಯೇ ಪ್ರಾ ಧಿಕಾರ ಇರುವುದು ನಮ್ಮ ದುರಂತ. ಕನ್ನಡಿಗರಲ್ಲಿರುವ ಉದಾರತೆಯೇ ಇದಕ್ಕೆ ಕಾರಣ. ನಮ್ಮ ಭಾಷೆ ಸಂರಕ್ಷಣೆಗಾಗಿ ನಾವು ಪ್ರಾಧಿಕಾರ ಮಾಡಿಕೊಳ್ಳುವುದು ದೊಡ್ಡ ದುರಂತವಾಗಿದೆ ಎಂದರು.

ಕನ್ನಡ ಮಾಧ್ಯಮ ಶಿಕ್ಷಣಕ್ಕಾಗಿ 90ರ ದಶಕದಲ್ಲಿ ನಾವು ಹೋರಾಟ ಮಾಡಿದ್ದೇವೆ. ಆದರೆ 2014ರಲ್ಲಿ ಸುಪ್ರೀಂ ಕೋರ್ಟ್‌ನ ತೀಪುì ಬಂದ ಮೇಲೆ ಕನ್ನಡ ಒಂದು ಭಾಷೆಯನ್ನಾಗಿ ಆದರೂ ಕಲಿಸುವಂತೆ ಹೋರಾಟ ಮಾಡುವ ಪ್ರಸಂಗ ಬಂದಿದೆ ಎಂದರು. ಬೆಳಗಾವಿ ಗಡಿಯಲ್ಲಿ ಕನ್ನಡ ಹೋರಾಟಗಾರರಿಂದ ಕನ್ನಡ ಉಳಿದಿದೆ. ಕನ್ನಡದ ರಕ್ಷಣೆಯಾಗಿದೆ. ಯಾವುದೇ ಜನಪ್ರತಿನಿಧಿಗಳು, ರಾಜಕಾರಣಿಗಳಿಂದ ಗಡಿಯಲ್ಲಿ ಕನ್ನಡ ಉಳಿದಿಲ್ಲ-ಬೆಳೆದಿಲ್ಲ. ಕನ್ನಡ ಹೋರಾಟಗಾರರು ಹಾಗೂ ಸಾಹಿತಿಗಳ ದಿಟ್ಟ ನಿರ್ಧಾರದಿಂದ ಕನ್ನಡದ ರಕ್ಷಣೆ ಆಗಿದೆ. ಇಂಥ ಕಾರ್ಯಕ್ರಮಗಳು ಆಗುತ್ತಿದ್ದರೂ ಜನಪ್ರತಿನಿ ಧಿಗಳು ಆಗಮಿಸದೇ ತಾತ್ಸಾರ ಭಾವ ಹೊಂದಿರುವುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದರು.

Advertisement

ಉತ್ಸವದ ಸರ್ವಾಧ್ಯಕ್ಷ, ಸಾಹಿತಿ ಅಪ್ಪಾಸಾಹೇಬ ಅಲಿಬಾದಿ ಮಾತನಾಡಿ, ಈ ಭಾಗದ ಬಹುದಿನಗಳ ಬೇಡಿಕೆ ಆಗಿದ್ದ ಮುಂಬೆ„ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ಮರುನಾಮಕರಣ ಮಾಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದಿಸಿದ್ದಾರೆ. ಕೇವಲ ಹೆಸರು ಬದಲಾದರೆ ಸಾಲದು. ಕಿತ್ತೂರು-ಕರ್ನಾಟಕ ಭಾಗದ ಅಭಿವೃದ್ಧಿ ಆಗಬೇಕು. ಅಂದಾಗ ಮಾತ್ರ ಈ ಪ್ರದೇಶ ಮುಂಚೂಣಿಗೆ ಬರಲು ಸಾಧ್ಯ ಎಂದು ಹೇಳಿದರು.

ಸಾಹಿತಿ ಯ.ರು. ಪಾಟೀಲ ಮಾತನಾಡಿ, ಮಕ್ಕಳಲ್ಲಿ ಕನ್ನಡದ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಯಾವುದೇ ಪ್ರದೇಶದಲ್ಲಿ ಮಕ್ಕಳು ಬಳಸಿದರೆ ಮಾತ್ರ ಆ ಭಾಷೆ ಬೆಳವಣಿಗೆಯಾಗುತ್ತದೆ. ಪ್ರತಿ ಮನೆ ಮನೆಯಲ್ಲಿಯೂ ಕನ್ನಡ ಉಳಿಸಿ, ಬೆಳೆಸುವ ಅಭಿಯಾನ ಆರಂಭವಾಗಬೇಕು ಎಂದು ತಿಳಿಸಿದರು. ಸಾಹಿತಿ ಪಿ.ಎಸ್‌. ವಂಟಗೋಡಿ ಮಾತನಾಡಿ, ಪಶ್ಚಾತ್ಯ ಸಂಸ್ಕೃತಿಯಿಂದ ಹೊರ ಬಂದು ಕನ್ನಡ ಬೆಳೆಸುವ ಕೆಲಸ
ಆಗಬೇಕು. ನಾವೂ ಎಲ್ಲ ಭಾಷೆಗಳನ್ನೂ ಪ್ರೀತಿಸಬೇಕು. ಆದರೆ ಕನ್ನಡವನ್ನು ಪೂಜಿಸಬೇಕು ಎಂದರು.

ಸಾಮಾಜಿಕ ಕಾರ್ಯಕರ್ತ ಬಾಳಾಸಾಹೇಬ ಉದಗಟ್ಟಿ, ಬಸವರಾಜ ಗಾರ್ಗಿ, ಶ್ರೀರಂಗ ಜೋಶಿ, ಡಾ. ಫಕೀರನಾಯ್ಕ ಗಡ್ಡಿಗೌಡರ, ಆನಂದ ರಾಥೋಡ, ಗಣೇಶ ರಾಯ್ಕರ, ಸುಮಾ ಹಡಪದ, ವೀಣಾ ಕಿಡದಾಳ, ಹಜರತ್‌ ಮುಲ್ಲಾ, ಮಲ್ಲಿಕಾರ್ಜುನ ನಾಯಕ ಇತರರು ಇದ್ದರು. ನಂತರ ನಡೆದ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಿದರು.ಕವಿಗೋಷ್ಠಿಯಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಕವಿಗಳು ಕಾವ್ಯ ವಾಚಿಸಿದರು. ಕನ್ನಡದ ಉಳಿವಿಗಾಗಿ ಶ್ರಮಿಸಿದವರನ್ನು ಸತ್ಕರಿಸಲಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next