ಕುಂದಾಪುರ: ಹಣಕಾಸು ವಿಚಾರಕ್ಕಾಗಿ ವ್ಯಕ್ತಿಯೋರ್ವರನ್ನು ಕೊಲೆ ಮಾಡಿದ ಘಟನೆ ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಾಳಾವರದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಮೃತ ವ್ಯಕ್ತಿಯನ್ನು ಯಡಾಡಿ ಮತ್ಯಾಡಿ ನಿವಾಸಿ ಅಜೇಂದ್ರ ಶೆಟ್ಟಿ (33 ವ) ಎಂದು ಗುರುತಿಸಲಾಗಿದೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ ಅಜೇಂದ್ರ ಶೆಟ್ಟಿ ಇವರು ಕಾಳಾವರ ನಂದಿಕೇಶ್ವರ ಕಾಂಪ್ಲೆಕ್ಸ್ ನಲ್ಲಿ ಅನೂಪ್ ನೊಂದಿಗೆ ಪಾಲುದಾರಿಕೆಯಲ್ಲಿ ಫೈನಾನ್ಸ್ ವ್ಯವಹಾರ ನಡೆಸಿಕೊಂಡಿದ್ದರು. ಅಜೇಂದ್ರನು ರಾತ್ರಿ ಮನೆಗೆ ಬಾರದ ಕಾರಣ ಆತನಿಗೆ ಫೋನ್ ಮಾಡಿದಾಗ ಸಂಪರ್ಕಕ್ಕೆ ಸಿಗದ ಕಾರಣ ಸ್ನೇಹಿತರಿಗೆ ಫೊನ್ ಮಾಡಿ ರಾತ್ರಿ ಕಾಳಾವರಕ್ಕೆ ಬಂದು ಫೈನಾನ್ಸ್ ನಲ್ಲಿ ನೋಡುವಾಗ ಫೈನಾನ್ಸ್ ನ ರೂಮಿನಲ್ಲಿ ಅಜೇಂದ್ರ ಶೆಟ್ಟಿಯು ಕುಳಿತಲ್ಲಿಯೇ ವಾಲಿಕೊಂಡು ಬಿದ್ದಿದ್ದು, ಆತನ ಕೆನ್ನೆಯ ಬಳಿ ಕಡಿದ ಗಾಯವಾಗಿ ರಕ್ತ ಹರಿಯುತ್ತಿತ್ತು.
ಇದನ್ನೂ ಓದಿ:ಅಂಕೋಲಾ : ಬೈಕಿಗೆ ಟಿಪ್ಪರ್ ಡಿಕ್ಕಿ ಹೊಡೆದು ಓರ್ವ ಸಾವು, ಇನ್ನೋರ್ವ ಗಂಭೀರ
ಕೂಡಲೇ ಅವರು ಸ್ನೇಹಿತರೊಂದಿಗೆ ಸೇರಿ ಅಜೇಂದ್ರನನ್ನು ಕೋಟೇಶ್ವರ ಎನ್.ಆರ್ ಆಚಾರ್ಯ ಆಸ್ವತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಅದಾಗಲೇ ಅಜೇಂದ್ರ ಮೃತಪಟ್ಟಿದ್ದರು.
ಪಾಲುದಾರ ಅನೂಪ್‌ನಿಗೆ ಪೋನ್ ಮಾಡಿದಾಗ ಆತನ ಪೋನ್ ಸ್ವಿಚ್‌ಅಪ್ ಆಗಿದೆ. ಪಕ್ಕದ ಅಂಗಡಿಯವರಲ್ಲಿ ವಿಚಾರಿಸಿದಾಗ ಅನೂಪ್ ಮತ್ತು ಅಜೇಂದ್ರನು ರಾತ್ರಿ 8.30 ಗಂಟೆ ತನಕ ಪೈನಾನ್ಸ್ ನಲ್ಲಿ ಒಟ್ಟಿಗೆ ಇದ್ದರು ಎನ್ನಲಾಗಿದೆ.
ಕೊಲೆಗೆ ನಿಖರ ಕಾರಣ ಏನು ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.