ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪವಾಗುತ್ತಿರುವ ಬೆನ್ನಲ್ಲೇ ಸ್ತ್ರೀಯರು ಮತ್ತು ಯುವಕರಿಗಾಗಿ ಎರಡು ಮಹತ್ವದ ಯೋಜನೆಗಳನ್ನು ಜಾರಿ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಂದಾಗಿದ್ದಾರೆ.
ಅಂದರೆ, ಪ್ರತಿ ಗ್ರಾಮ ಪಂಚಾಯತ್‌ನ ಎರಡು ಸ್ತ್ರೀ ಶಕ್ತಿ ಸಂಘಗಳಿಗೆ ತಲಾ 5 ಲಕ್ಷ ರೂ.ಗಳನ್ನು ನೀಡುವುದು, ಮನೆ ನಡೆಸುವ ದುಡಿಯುವ ವರ್ಗದ ಮಹಿಳೆಯರಿಗೆ ಪ್ರತಿ ತಿಂಗಳು 2ರಿಂದ 3 ಸಾವಿರ ರೂ., ಯುವಕರು ಸ್ವಯಂ ಉದ್ಯೋಗ ಕೈಗೊಳ್ಳಲು ತಲಾ 1 ಲಕ್ಷ ರೂ. ಹಣಕಾಸಿನ ನೆರವು ನೀಡುವ ಯೋಜನೆ ರೂಪುಗೊಳ್ಳುತ್ತಿದೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸ್ತ್ರೀ ಶಕ್ತಿ ಯೋಜನೆಯು ಇದೇ ತಿಂಗಳ ಅಂತ್ಯದೊಳಗೆ ಅನುಷ್ಠಾನಕ್ಕೆ ಬರಲಿದೆ. ಈ ಯೋಜನೆಯಲ್ಲಿ ಪ್ರತೀ ಪಂಚಾಯತ್‌ನ ಎರಡು ಸ್ತ್ರೀಶಕ್ತಿ ಸಂಘಗಳಿಗೆ ತಲಾ 5 ಲಕ್ಷ ರೂ. ನೆರವು ನೀಡುವ ಮೂಲಕ ಸ್ತ್ರೀಯರಿಗೆ ಸ್ವಾವಲಂಬಿ ಯಾಗಲು ಅವಕಾಶ ಕಲ್ಪಿಸುವುದಾಗಿ ತಿಳಿಸಿದರು.
ದುಡಿಯುವ ವರ್ಗದ ಹೆಣ್ಣುಮಕ್ಕಳಿಗೆ ಮನೆ ನಿಭಾಯಿಸಲು ಅವರ ಅಗತ್ಯಕ್ಕೆ ತಕ್ಕಂತೆ ಪ್ರತೀ ತಿಂಗಳು 2-3 ಸಾವಿರ ರೂ. ನೆರವು ನೀಡುವ ಯೋಜನೆಯನ್ನೂ ಜಾರಿಗೊಳಿಸಲಾಗುತ್ತಿದೆ.
Related Articles
ವಿವೇಕಾನಂದ ಯುವಶಕ್ತಿ ಯೋಜನೆ
ಯುವಕರನ್ನು ಸ್ವಾವಲಂಬಿಯಾಗಿಸಲು 5 ಲಕ್ಷ ಯುವಕರಿಗೆ “ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ’ಯಡಿ ಸ್ವಯಂ ಉದ್ಯೋಗ ಯೋಜನೆ ರೂಪಿಸಿದ್ದು, ಫೆಬ್ರವರಿ ತಿಂಗಳಲ್ಲಿ ಅನುಷ್ಠಾನಕ್ಕೆ ಬರಲಿದೆ. ಇದರಲ್ಲಿ ಯುವಕರಿಗೆ ತಲಾ ಒಂದು ಲಕ್ಷ ರೂ. ಸಹಾಯ ಧನ ನೀಡಲಾಗುವುದು. ಈಗಾಗಲೇ ಇದಕ್ಕೆ ಬ್ಯಾಂಕ್‌ಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ವಿಶೇಷವಾಗಿ ದುಡಿಯುವ ವರ್ಗ, ಮಹಿಳೆ ಯರು, ಯುವಕರು ಹಾಗೂ ಪರಿಶಿಷ್ಟ ವರ್ಗ, ಪಂಗಡಗಳು, ಹಿಂದುಳಿದ ವರ್ಗಗಳ ಶ್ರೇಯೋಭಿ ವೃದ್ಧಿಗಾಗಿ ಮುಂದಿನ ಬಜೆಟ್‌ನಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ನೀಡಲಾಗುವುದು. ಇದಲ್ಲದೇ ಜನರಲ್ಲಿ ಪೌಷ್ಟಿಕತೆ ಹೆಚ್ಚಿಸುವ ಯೋಜನೆಗಳಿಗೂ ಆದ್ಯತೆ ಸಿಗಲಿದೆ ಎಂದರು.
ಈಗ ಮುಕ್ತಾಯಗೊಂಡ ತ್ರೆ„ಮಾಸಿಕ ಅವಧಿಯಲ್ಲಿ ರಾಜ್ಯದಲ್ಲಿ ಆದಾಯ ಸಂಗ್ರಹ ಹೆಚ್ಚಳವಾಗಿದ್ದು ವರ್ಷದ ಕೊನೆಯ ತ್ರೆ„ಮಾಸಿಕ ಅವಧಿಯಲ್ಲಿ ಇನ್ನಷ್ಟು ಸಂಗ್ರಹವಾಗಬೇಕೆನ್ನುವ ಸೂಚನೆ ನೀಡಲಾಗಿದೆ ಎಂದೂ ತಿಳಿಸಿದರು.
ಫೆ.17ಕ್ಕೆ ಬಜೆಟ್ ಮಂಡನೆ ಮುಂದಿನ ರಾಜ್ಯ ಬಜೆಟ್
ಫೆ.17ರಂದು ಮಂಡಿಸಲು ಯೋಚಿಸಿದ್ದು, ತಯಾರಿ ಆರಂಭವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಈ ಬಾರಿ ರೈತರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ದುಡಿಯುವ ವರ್ಗಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸಲು ಗಮನಹರಿಸಲಾಗುವುದು. ಮುಂದಿನ ಜಂಟಿ ಅಧಿವೇಶನದ ದಿನಾಂಕ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸುವುದಾಗಿ ತಿಳಿಸಿದರು.
ಏನೇನು ಸೌಲಭ್ಯ?
01. ಪ್ರತಿ ಪಂಚಾಯತ್‌ನ ತಲಾ 2 ಸ್ತ್ರೀ ಶಕ್ತಿ ಸಂಘಗಳಿಗೆ ತಲಾ 5 ಲಕ್ಷ ರೂ. ನೆರವು
02. ಕುಟುಂಬ ನಡೆಸುವ ಮಹಿಳೆಯರಿಗೆ ಪ್ರತಿ ತಿಂಗಳು 2ರಿಂದ 3 ಸಾವಿರ ರೂ.
03. 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗಕ್ಕೆ ತಲಾ 1 ಲಕ್ಷ ರೂ. ಸಹಾಯಧನ