Advertisement

ಪಿಲಿಕುಳ ನಿಸರ್ಗಧಾಮಕ್ಕೆ ಅಳಿವಿನ ಭೀತಿ!

11:05 PM Aug 25, 2020 | mahesh |

ಮಂಗಳೂರು: ಸರಕಾರದ ಅನುದಾನ ಪಡೆಯದ ದೇಶದ ಏಕೈಕ ಮತ್ತು 1,200ಕ್ಕೂ ಹೆಚ್ಚು ಪ್ರಾಣಿ-ಪಕ್ಷಿಗಳಿಗೆ ನೆಲೆಯಾಗಿ ರಾಜ್ಯದ 3ನೇ ಅತೀ ದೊಡ್ಡ ಪಿಲಿಕುಳ ನಿಸರ್ಗಧಾಮ ಪ್ರಸ್ತುತ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ, ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ.

Advertisement

20 ವರ್ಷಗಳ ಹಿಂದೆ ಪ್ರಾರಂಭಗೊಂಡ ಪಿಲಿಕುಳ ನಿಸರ್ಗಧಾಮ ಕರಾವಳಿಯ ಏಕೈಕ, ಕೇಂದ್ರ ಮೃಗಾಲಯ ಪ್ರಾಧಿಕಾರದ ಅಡಿಯಲ್ಲಿ ಬರುವ ಕರ್ನಾಟಕದ ಏಕೈಕ ಮೃಗಾಲಯವೂ ಹೌದು. ಜಿಲ್ಲಾಡಳಿತದ ಉಸ್ತುವಾರಿಯಲ್ಲಿ ಸೊಸೈಟಿ ಪರಿಕಲ್ಪನೆಯಲ್ಲಿ ಮಾದರಿಯಾಗಿ ರೂಪುಗೊಂಡಿರುವ ಏಕೈಕ ಮೃಗಾಲಯ ಎನ್ನುವ ಹೆಗ್ಗಳಿಕೆಯನ್ನು ಕೂಡ ಹೊಂದಿದೆ. 150ಕ್ಕೂ ಹೆಚ್ಚು ಎಕರೆ ಜಾಗ ಹೊಂದಿರುವ ರಾಜ್ಯದ ಕೆಲವೇ ಮೃಗಾಲಯಗಳ ಸಾಲಿಗೆ ಸೇರಿದೆ.

ಇಷ್ಟೆಲ್ಲ ವಿಶೇಷತೆಗಳಿದ್ದರೂ ಪಿಲಿಕುಳ ನಿಸರ್ಗಧಾಮವು ಕೊರೊನಾದಿಂದಾಗಿ ದೊಡ್ಡ ಮಟ್ಟದ ಆರ್ಥಿಕ ಹೊಡೆತಕ್ಕೆ ಸಿಲುಕಿದೆ. ಬೇರೆ ಮೂಲಗಳಿಂದ ಆರ್ಥಿಕ ನೆರವು ದೊರೆಯದೆ ಹೋದರೆ ಭವಿಷ್ಯದಲ್ಲಿ ಅದಕ್ಕೆ ಅಳಿವು-ಉಳಿವಿನ ಪ್ರಶ್ನೆ ಎದುರಾಗುವುದರಲ್ಲಿ ಅನುಮಾನವಿಲ್ಲ.

ಕಳೆದ ಒಂದು ವರ್ಷದಿಂದ ಎಂಆರ್‌ಪಿಎಲ್‌ ಸಂಸ್ಥೆಯು ಮೃಗಾಲಯದ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದು, ಮುಂದಿನ ಒಂದು ತಿಂಗಳ ವರೆಗೆ ಈ ಒಪ್ಪಂದ ಜಾರಿಯಲ್ಲಿರುತ್ತದೆ. ಸದ್ಯ ಕೊರೊನಾ ಮತ್ತು ಮಳೆಗಾಲವಾದ್ದರಿಂದ ಪ್ರವಾಸಿಗರೂ ಆಗಮಿಸುತ್ತಿಲ್ಲ. ಇತರ ಯಾವುದೇ ಆದಾಯದ ಮೂಲವಿಲ್ಲದ್ದರಿಂದ ತಿಂಗಳ ಬಳಿಕ ನಿರ್ವಹಣೆ ಹೇಗೆ ಎನ್ನುವ ಚಿಂತೆ ಆಡಳಿತ ಸಮಿತಿಯನ್ನು ಕಾಡತೊಡಗಿದೆ.

ತಿಂಗಳಿಗೆ 20 ಲಕ್ಷ ರೂ. ವೆಚ್ಚ
ಪಿಲಿಕುಳ ನಿಸರ್ಗಧಾಮದಲ್ಲಿ ವಿವಿಧ ಪ್ರಭೇದಗಳ 1,200ಕ್ಕೂ ಅಧಿಕ ಪ್ರಾಣಿ, ಪಕ್ಷಿ ಮತ್ತು ಸರೀಸೃಪಗಳಿವೆ. ಇವುಗಳಿಗೆ ಆಹಾರಕ್ಕಾಗಿ ಪ್ರತೀ ತಿಂಗಳು 12 ಲಕ್ಷ ರೂ.ಗಳಿಗೂ ಅಧಿಕ ವೆಚ್ಚ ತಗಲುತ್ತದೆ. ಸಿಬಂದಿಯ ಸಂಬಳ ಮತ್ತಿತರ ವೆಚ್ಚ ಸೇರಿ ಪ್ರತೀ ತಿಂಗಳು ಸುಮಾರು 20 ಲಕ್ಷ ರೂ. ಅಗತ್ಯವಿದೆ.

Advertisement

ನಷ್ಟ ಹೇಗೆ?
ಪಿಲಿಕುಳ ಮೃಗಾಲಯದ ನಿರ್ವಹಣೆಯನ್ನು ವಿವಿಧ ಕಂಪೆನಿಗಳ ಸಿಎಸ್‌ಆರ್‌ ನಿಧಿಯಿಂದ ಮಾಡಲಾಗುತ್ತಿತ್ತು. ಸಾರ್ವಜನಿಕರು ಕೆಲವು ಪ್ರಾಣಿಗಳನ್ನು ದತ್ತು ಸ್ವೀಕರಿಸುತ್ತಿದ್ದರು. ಪ್ರವಾಸಿಗರ ಟಿಕೆಟ್‌ ಮೊತ್ತದಿಂದ ನಿರ್ವಹಣೆ ಆಗುತ್ತಿತ್ತು. ಆದರೆ ಈಗ ಕೊರೊನಾ ಕಾರಣದಿಂದ ಕಂಪೆನಿಗಳು ಸಿಎಸ್‌ಆರ್‌ ನಿಧಿ ಬಳಕೆಗೆ ಹಿಂದೇಟು ಹಾಕುತ್ತಿವೆ. ದತ್ತು ಸ್ವೀಕಾರವೂ ಕಡಿಮೆಯಾಗಿದೆ. ಟಿಕೆಟ್‌ ಆದಾಯವೂ ಸ್ಥಗಿತವಾಗಿದೆ. ಪ್ರತೀ ವರ್ಷ ಟಿಕೆಟ್‌ಗಳಿಂದ 2 ಕೋ.ರೂ. ಆದಾಯ ಬರುತ್ತಿತ್ತು. ಕಳೆದ ವರ್ಷ ಟಿಕೆಟ್‌ ಬೆಲೆಯಲ್ಲಿ ಅರ್ಧದಷ್ಟು ಕಡಿತ ಮಾಡಿದ್ದು, ಒಟ್ಟು ಆದಾಯವೂ ಅರ್ಧದಷ್ಟು ಕಡಿಮೆಯಾಗಿದೆ ಎನ್ನುತ್ತಾರೆ ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್‌. ಜಯಪ್ರಕಾಶ್‌ ಭಂಡಾರಿ.

ಕಡತದಲ್ಲಿ ಬಾಕಿಯಾದ ಪ್ರಾಧಿಕಾರ!
ಪಿಲಿಕುಳ ನಿಸರ್ಗಧಾಮವು “ಡಾ| ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಸೊಸೈಟಿ’ ಅಡಿಯಲ್ಲಿ ಜಿಲ್ಲಾಡಳಿತದ ಸುಪರ್ದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಇದರ ಉಸ್ತುವಾರಿಗಳು. ಆದರೆ ಪಿಲಿಕುಳದ ಸಮಗ್ರ ಅಭಿವೃದ್ಧಿಗಾಗಿ ಸರಕಾರದಿಂದ “ಪಿಲಿಕುಳ ನಿಸರ್ಗಧಾಮ ಪ್ರಾಧಿಕಾರ’ ರಚನೆಯ ಬಗ್ಗೆ ಈ ಹಿಂದೆ ಘೋಷಿಸಲಾಗಿತ್ತು. ವರ್ಷ ಕಳೆದರೂ ಈ ಪ್ರಾಧಿಕಾರದ ರಚನೆ ಆಗಿಲ್ಲ.

ಒಂದೆರಡು ತಿಂಗಳಿಗೆ ಪಿಲಿಕುಳ ಮೃಗಾಲಯ ನಿರ್ವಹಣೆಗೆ ಸಮಸ್ಯೆ ಇಲ್ಲ. ಆದರೆ ಕೊರೊನಾ ಸಮಸ್ಯೆ ಮುಕ್ತಾಯವಾಗುವ ವರೆಗೆ ಏನು ಮಾಡಬೇಕು ಎಂಬ ಬಗ್ಗೆ ಸೂಕ್ತ ಯೋಜನಾ ವರದಿ ಸಿದ್ಧಪಡಿಸುವಂತೆ ಈಗಾಗಲೇ ಸೂಚಿಸಲಾಗಿದೆ. ಆ ಮೂಲಕ ಸರಕಾರದಿಂದ ಹಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು.
– ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವರು

ಪಿಲಿಕುಳ ಮೃಗಾಲಯದ ನಿರ್ವಹಣೆ ಸಮಸ್ಯೆ ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಇದಕ್ಕಾಗಿ ಕರಾವಳಿಯ ಕೈಗಾರಿಕೆಗಳು, ಸಂಸ್ಥೆಗಳಿಂದ ಸಿಎಸ್‌ಆರ್‌ ಹಣ ಒದಗಿಸುವ ಬಗ್ಗೆ ಈ ತಿಂಗಳ ಒಳಗೆ ವಿಶೇಷ ಸಭೆ ನಡೆಸಲಾಗುವುದು. ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ರಚನೆ ಬಗ್ಗೆ ಮತ್ತು ಅನುದಾನ ಒದಗಿಸುವ ಬಗ್ಗೆಯೂ ಸರಕಾರಕ್ಕೆ ಪತ್ರ ಬರೆಯಲಾಗುವುದು.
-ಡಾ| ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ.ಕ.

 ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next