Advertisement

Financial Distress: 15 ತಿಂಗಳಲ್ಲಿ ರಾಜ್ಯಾದ್ಯಂತ 1,182 ರೈತರ ಆತ್ಮಹತ್ಯೆ

12:15 AM Aug 20, 2024 | Team Udayavani |

ಬೀದರ: ಪ್ರಕೃತಿ ವಿಕೋಪದ ಹೊಡೆತದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿರುವ ಅನ್ನದಾತರು ನೇಣಿಗೆ ಕೊರಳೊಡ್ಡುತ್ತಿರುವ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಬೀದರ ಸೇರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳೆದ 15 ತಿಂಗಳಲ್ಲಿ 277 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.

Advertisement

ಕಳೆದ ವರ್ಷ ಬರದ ಛಾಯೆ ಇದ್ದರೆ, ಅದಕ್ಕೂ ಮೊದಲಿನ ವರ್ಷ ಅತಿವೃಷ್ಟಿ ಕೃಷಿಕರನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ಮತ್ತೂಂದೆಡೆ ಉತ್ತಮ ಮಳೆಯಾಗಿ ಭರ್ಜರಿ ಫಸಲು ಬಂದರೆ ಆಗ ರೈತನ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗುತ್ತಿಲ್ಲ. ಸಾಲ ಮಾಡಿ ಭೂಮಿಯ ಒಡಲಿಗೆ ಬೀಜ ಹಾಕುವ ಅನ್ನದಾತ ಪ್ರತೀ ಹಂತದಲ್ಲೂ ಕೈಸುಟ್ಟಿಕೊಳ್ಳುವಂತಾಗಿದೆ. ಆರ್ಥಿಕ ಹೊರೆ ತಾಳಲಾರದೆ, ಸಕಾಲಕ್ಕೆ ಸಾಲ ತೀರಿಸಲಾಗದೆ ಮರ್ಯಾದೆಗೆ ಅಂಜಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರಲ್ಲಿ ಬಹುತೇಕರು ಸಣ್ಣ, ಅತಿ ಸಣ್ಣ ರೈತರೇ ಆಗಿದ್ದಾರೆ.

ಕಂದಾಯ ಇಲಾಖೆಯ ದಾಖಲೆಗಳ ಪ್ರಕಾರ ರಾಜ್ಯದಲ್ಲಿ 2023 ಎ. 1ರಿಂದ 2024 ಜು. 4ರೊಳಗೆ ಒಟ್ಟು 1,182 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ 277 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಅತೀ ಹೆಚ್ಚು 69 ರೈತರು ಸಾವಿನ ಮೊರೆ ಹೋಗಿದ್ದಾರೆ. ಇನ್ನು ಅತಿ ಸಣ್ಣ ಜಿಲ್ಲೆಯಾಗಿರುವ ಯಾದಗಿರಿಯಲ್ಲಿ 68 ಜನ ಜೀವ ಕಳೆದುಕೊಂಡಿದ್ದಾರೆ. ಇನ್ನುಳಿದಂತೆ ವಿಜಯನಗರ -37, ಬೀದರ -36, ಕೊಪ್ಪಳ -30, ಬಳ್ಳಾರಿ -19 ಮತ್ತು ರಾಯಚೂರು ಜಿಲ್ಲೆಯಲ್ಲಿ -18 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೀದರದಲ್ಲಿ ಕಳೆದ 15 ತಿಂಗಳಲ್ಲಿ 39 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬಕ್ಕೆ ಆಧಾರವಾಗಿದ್ದವರನ್ನು ಕಳೆದುಕೊಂಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಭಾಲ್ಕಿ ತಾಲೂಕಿನಲ್ಲಿ ಅತಿ ಹೆಚ್ಚು 11 ಜನ, ಅನಂತರ ಬೀದರನಲ್ಲಿ 7, ಹುಮನಾಬಾದ್‌, ಚಿಟಗುಪ್ಪ, ಔರಾದನಲ್ಲಿ ತಲಾ 5, ಹುಲಸೂರು ಮತ್ತು ಕಮಲನಗರ ತಾಲೂಕಿನಲ್ಲಿ ತಲಾ 2 ಕೃಷಿಕರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಯುವ ಸಮೂಹ ಕೃಷಿಯಿಂದ ವಿಮುಖವಾಗುತ್ತಿರುವ ದಿನಗಳಲ್ಲಿ ಅನ್ನದಾತರು ಆತ್ಮಹತ್ಯೆ ದಾರಿ ಹಿಡಿಯುತ್ತಿರುವ ಬೆಳವಣಿಗೆ ಕೃಷಿ ವಲಯದ ಮೇಲೆ ಪರಿಣಾಮ ಬೀರುವಂತೆ ಮಾಡುತ್ತಿದೆ. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಪರಿಹಾರವೇನೋ ನೀಡುತ್ತಿದೆ ಆದರೆ ಕೃಷಿಕರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಿಲ್ಲ. ಸರಕಾರ, ಆಡಳಿತ ಸಂಕಷ್ಟಕ್ಕೆ ಸಿಲುಕುವ ರೈತರಿಗೆ ತತ್‌ಕ್ಷಣ ಸ್ಪಂದಿಸುವ ಕೆಲಸ ಮಾಡಬೇಕಿದೆ. ಮಾರುಕಟ್ಟೆಯಲ್ಲಿ ದರ ಕುಸಿತವಾದಾಗ ಕೃಷಿಕರ ಕೈಹಿಡಿಯವ ಕೆಲಸವನ್ನು ಸರಕಾರ ಮಾಡಬೇಕು. ಆಗ ಮಾತ್ರ ರೈತರು, ಕೃಷಿಯನ್ನು ಉಳಿಸಿಕೊಳ್ಳಲು ಸಾಧ್ಯ.

Advertisement

“ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳೆದ 15 ತಿಂಗಳಲ್ಲಿ 277 ರೈತರು ಆತ್ಮಹತ್ಯೆಗೆ ಶರಣಾಗಿರುವುದು ಆಘಾತ ಮೂಡಿಸುತ್ತಿದೆ. ಇದಕ್ಕೆ ಪ್ರಕೃತಿಯ ಮುನಿಸು ಜತೆಗೆ ಸರಕಾರಗಳ ಕೃಷಿಕರ ಬಗೆಗಿನ ನಿರ್ಲಕ್ಷ್ಯ ಧೋರಣೆಯೂ ಕಾರಣ. ಸರಕಾರಗಳು ರೈತರು ಸಂಕಷ್ಟದಲ್ಲಿದ್ದವರ ನೆರವಿಗೆ ಧಾವಿಸಿ ಸಾಲದಿಂದ ಋಣ ಮುಕ್ತವಾಗಿ ಮಾಡಬೇಕು. ಮಾರುಕಟ್ಟೆಯಲ್ಲಿ ನ್ಯಾಯಯುತವಾಗಿ ರೈತರ ಬೆಳೆಗೆ ಬೆಂಬಲ ಬೆಲೆ ದೊರಕುವಂತೆ ಸರಕಾರ ಮಾಡಿದರೆ ರೈತರ ಆತ್ಮಹತ್ಯೆ ತಡೆಗಟ್ಟಲು ಸಾಧ್ಯ.”  – ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾಧ್ಯಕ್ಷ, ರೈತ ಸಂಘ, ಬೀದರ


-ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next