Advertisement

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

03:39 AM Nov 23, 2024 | Team Udayavani |

ಕುಂದಾಪುರ: ಮಕ್ಕಳ ಅಪೌಷ್ಟಿಕತೆ ನಿವಾರಣೆಗಾಗಿ ಸರಕಾರಿ ಹಾಗೂ ಅನುದಾನಿತ ಶಾಲೆ ಗಳ ಮಕ್ಕಳಿಗೆ ನೀಡಲಾಗುತ್ತಿರುವ ಮೊಟ್ಟೆಯು ಈಗ ಶಿಕ್ಷಕರಿಗೆ ಆರ್ಥಿಕ ಹೊರೆ ಉಂಟು ಮಾಡುತ್ತಿದೆ. ಸರಕಾರ ನೀಡುವ ಮೊತ್ತದಲ್ಲಿ ಮೊಟ್ಟೆ ಖರೀದಿ ಸಾಧ್ಯವಾಗದೆ ಇರುವುದೇ ಇದಕ್ಕೆ ಕಾರಣ.

Advertisement

1ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜತೆ ಈ ಮೊದಲು ಸರಕಾರ ವಾರದಲ್ಲಿ ಒಂದು ದಿನ ಮೊಟ್ಟೆ ಕೊಡುತ್ತಿತ್ತು. ಮೊಟ್ಟೆ ಸೇವಿಸದವರಿಗೆ ಬಾಳೆಹಣ್ಣು ಅಥವಾ ಕಡಲೆ ಚಿಕ್ಕಿ ಸಿಗುತ್ತಿತ್ತು. ಅದರಂತೆ ವರ್ಷದಲ್ಲಿ 46 ದಿನಗಳಿಗೆ ಅನುದಾನವೂ ನಿಗದಿಯಾಗಿತ್ತು. 8ನೇ ತರಗತಿವರೆಗೆ ಇದ್ದ ಈ ಯೋಜನೆ 2023-24ರಿಂದ 10ನೇ ತರಗತಿವರೆಗೆ ಹಾಗೂ ವರ್ಷಕ್ಕೆ 80 ದಿನಗಳ ಅವಧಿಗೆ ವಿಸ್ತರಣೆಯಾಗಿದೆ.

ಕೇಂದ್ರ, ರಾಜ್ಯ ಸರಕಾರದ ಅನುದಾನ
ಕಲ್ಯಾಣ ಕರ್ನಾಟಕದ ಬೀದರ್‌, ರಾಯಚೂರು, ಕಲಬುರಗಿ, ಯಾದ ಗಿರಿ, ಕೊಪ್ಪಳ, ಬಳ್ಳಾರಿ, ವಿಜಯನಗರ, ವಿಜಯ ಪುರ ಜಿಲ್ಲೆಗಳಿಗೆ 56 ದಿನಗಳಿಗೆ ಕೇಂದ್ರ ಪುರಸ್ಕೃತ ಯೋಜನೆಯ ಅನುದಾನ, ಉಳಿಕೆ 26 ದಿನಗಳಿಗೆ ರಾಜ್ಯ ಸರಕಾರದ ಅನುದಾನ, ಉಳಿದ 23 ಜಿಲ್ಲೆಗಳಿಗೆ 80 ದಿನಗಳಿಗೆ ರಾಜ್ಯದಿಂದ ಹಣ ಭರಿಸ ಲಾಗುತ್ತಿದೆ.

ಕಲ್ಯಾಣ ಕರ್ನಾಟಕದ 8 ಜಿಲ್ಲೆಗಳಲ್ಲಿ 1ರಿಂದ 8ನೇ ತರಗತಿ ವರೆಗಿನ 15,57,126 ಮಕ್ಕಳಿಗೆ 74.74 ಕೋ.ರೂ., ಉಳಿದ 23 ಜಿಲ್ಲೆಗಳ 30,73,430 ವಿದ್ಯಾರ್ಥಿಗಳಿಗೆ 147.52 ಕೋ.ರೂ. ಮೀಸಲಿಡಲಾಗಿದೆ. 9 ಹಾಗೂ 10ನೇ ತರಗತಿ ಮಕ್ಕಳ ವೆಚ್ಚ ಪೂರ್ಣಪ್ರಮಾಣದಲ್ಲಿ ರಾಜ್ಯ ಸರಕಾರ
ದ್ದಾಗಿದ್ದು, 31 ಜಿಲ್ಲೆಗಳ 11,98,008 ವಿದ್ಯಾರ್ಥಿಗಳಿಗೆ 57.5 ಕೋ.ರೂ. ಅನುದಾನ ಇದೆ.

ಅಜೀಂ ಫೌಂಡೇಶನ್‌ ಸಹಭಾಗಿತ್ವ
ಸರಕಾರದ ಈ ಕಾರ್ಯಕ್ರಮಕ್ಕೆ ಈಗ ಅಜೀಂ ಪ್ರೇಮ್‌ಜೀ ಫೌಂಡೇಶನ್‌ ಕೈ ಜೋಡಿಸಿದೆ. ವಾರದಲ್ಲಿ ಉಳಿದ ನಾಲ್ಕು ದಿನ ಮೊಟ್ಟೆ ನೀಡಲು ಮುಂದೆ ಬಂದಿರುವ ಫೌಂಡೇಷನ್‌ 53,080 ಸರಕಾರಿ ಮತ್ತು ಅನುದಾನಿತ ಶಾಲೆಗಳ 55 ಲಕ್ಷ ಮಕ್ಕಳಿಗೆ ಮೊಟ್ಟೆ ನೀಡಲು ಸುಮಾರು 1,500 ಕೋಟಿ ರೂ. ನೆರವು ನೀಡಿದೆ. ಸೆ. 25ರ ಬಳಿಕ ವಾರದ ಆರೂ ದಿನ ಮಕ್ಕಳಿಗೆ ಮೊಟ್ಟೆ ನೀಡಲಾಗುತ್ತಿದೆ.

Advertisement

ದರ ನಿಗದಿ
ರಾಜ್ಯ ಸರಕಾರ ಒಂದು ಮೊಟ್ಟೆ ಖರೀದಿಗೆ ನಿಗದಿ ಮಾಡಿರುವುದು 5 ರೂ. ಮೊಟ್ಟೆ ಖರೀದಿಗೆ 5 ರೂ., ಬೇಯಿಸಲು ಇಂಧನ ವೆಚ್ಚ 50 ಪೈಸೆ, ಮೊಟ್ಟೆ ಸಿಪ್ಪೆ ಸುಲಿದದ್ದಕ್ಕೆ ಅಡುಗೆ ಸಿಬಂದಿಗೆ 30 ಪೈಸೆ, ಸಾಗಾಣಿಕೆ ವೆಚ್ಚ 20 ಪೈಸೆ ಹೀಗೆ ಒಟ್ಟು 6 ರೂ. ನಿಗದಿಯಾಗಿದೆ. ಬಾಳೆಹಣ್ಣಿಗೆ 5.80 ರೂ., ಸಾಗಾಣಿಕೆಗೆ 20 ಪೈಸೆ, ಶೇಂಗಾ ಚಿಕ್ಕಿಗೆ 5.5 ರೂ., ಇಂಧನಕ್ಕೆ 30 ಪೈಸೆ, ಸಾಗಾಣಿಕೆಗೆ 20 ಪೈಸೆ ಎಂದು ನಿಗದಿಯಾಗಿದೆ.

ಶಿಕ್ಷಕರಿಗೆ ಸಂಕಷ್ಟ
ರಾಜ್ಯದ ಕೆಲವು ಜಿಲ್ಲೆಗಳಲ್ಲಿ 5 6 ರೂ.ಗೆ ಮೊಟ್ಟೆ ದೊರೆಯುತ್ತದೆ. ಆದರೆ ಕರಾವಳಿ ಸಹಿತ ಕೆಲವೆಡೆ 6 ರೂ.ಗಿಂತ ಕಡಿಮೆಗೆ ಮೊಟ್ಟೆ ಸಿಗುವುದಿಲ್ಲ. ದರ 7 ರೂ. ದಾಟುವುದೂ ಇದೆ. ವ್ಯತ್ಯಾಸ ಆಗುವ ಮೊತ್ತವನ್ನು ಭರಿಸಲು ಇಲಾಖೆ ಯಾವುದೇ ಅನುದಾನ ನಿಗದಿ ಮಾಡಿಲ್ಲ. ಇದರಿಂದ ಬಿಸಿಯೂಟ ಜವಾಬ್ದಾರಿ ಹೊಂದಿದ ಶಾಲಾ (ಮುಖ್ಯ) ಶಿಕ್ಷಕರೇ ಇದನ್ನು ಪಾವತಿಸಬೇಕಾಗುತ್ತದೆ. 800ಕ್ಕೂ ಅಧಿಕ ಮಕ್ಕಳು ಇರುವ ಶಾಲೆಗಳಲ್ಲಿ ತಲಾ 2 ರೂ.ಗಳಂತೆ ಎಂದಾದರೂ ತಿಂಗಳಿಗೆ 38,400 ರೂ. ಆಗುತ್ತದೆ!

ಆತಂಕ
ವಾರದ ಆರು ದಿನ ಮೊಟ್ಟೆ ತಿಂದರೆ ಕೆಲವು ಮಕ್ಕಳಿಗೆ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಹಾಗೆಂದು ವಿತರಿಸದೆ ಇರುವಂತಿಲ್ಲ. ಲೆಕ್ಕ ಪಕ್ಕಾ ಇರಬೇಕು. ಕೆಲವು ಮಕ್ಕಳು ಮೊಟ್ಟೆ ಬೇಡ, ಚಿಕ್ಕಿ ಬೇಕು ಎಂದು ಹೇಳಿದ್ದರೂ ಇತರ ಮಕ್ಕಳಿಗೆ ನೀಡುವಾಗ ಬೇಕು ಎನ್ನುತ್ತಾರೆ. ಇದೂ ಲೆಕ್ಕ ತಪ್ಪಿಸುತ್ತದೆ! 800 ಮಕ್ಕಳಿರುವ ಶಾಲೆಯಲ್ಲಿ ಮೊಟ್ಟೆ ಸುಲಿಯುವ ಸಲುವಾಗಿ ಬಿಸಿಯೂಟ ಒಂದು ತಾಸು ತಡವಾಗುವುದೂ ಇದೆ. ಗ್ರಾಮಾಂತರದಲ್ಲಿ ಮೊಟ್ಟೆ ವಾಹನ ಲೈನ್‌ ಸೇಲ್‌ಗೆ ಬರುವುದಿಲ್ಲ. ಸ್ಥಳೀಯವಾಗಿ ಖರೀದಿ ದುಬಾರಿ. ಇದರಿಂದ ಕಡಿಮೆ ಪ್ರಮಾಣದ ಮಕ್ಕಳಿದ್ದರೂ ಶಿಕ್ಷಕರು ಕೈಯಿಂದ ಹಣ ಪಾವತಿಸಲೇಬೇಕು. ಸಾಗಾಟವೂ ಜಾಗರೂಕತೆಯಿಂದ ನಡೆಯಬೇಕು.

ಮೊಟ್ಟೆ ಖರೀದಿ ದರ ವ್ಯತ್ಯಯವಾಗುತ್ತಿರುವುದು ಗಮನಕ್ಕೆ ಬಂದಿದೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ದರ ಇದೆ. ಆದರೆ ಈವರೆಗೆ ಇಲಾಖಾ ಹಂತದಲ್ಲಿ ಬೇಡಿಕೆ ಬಂದಿಲ್ಲ. ಸರಕಾರ ನೀಡುವ ದರ ಕಡಿಮೆಯಾಗುವ ಜಿಲ್ಲೆಗಳಿಂದ ನಮಗೆ ಪ್ರಸ್ತಾವನೆ ಬಂದ ಕೂಡಲೇ ಸರಕಾರಕ್ಕೆ ಅನುದಾನಕ್ಕೆ ಬರೆಯಲಾಗುವುದು. ಉತ್ತಮ ಯೋಜನೆ ಯಶಸ್ವಿಯಾಗಲು ಸರಕಾರ ಖರೀದಿ ದರದ ವ್ಯತ್ಯಾಸದಲ್ಲಿ ಆಗುವ ಅನುದಾನ ಭರಿಸಲು ಮುಂದಾಗುತ್ತದೆ.
– ಪುಷ್ಪಲತಾ ಎಚ್‌.ಕೆ. ಜಂಟಿ ನಿರ್ದೇಶಕಿ, ಪಿಎಂ ಪೋಷಣ್‌ ವಿಭಾಗ ಶಿಕ್ಷಣ ಇಲಾಖೆ, ಬೆಂಗಳೂರು

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next