ಮಂಗಳೂರು/ಬೆಂಗಳೂರು: ರಾಜ್ಯ ಕರಾವಳಿ ಸೇರಿದಂತೆ ದೇಶದ ವಿವಿಧೆಡೆ ಭಯೋತ್ಪಾದನ ಕೃತ್ಯಗಳನ್ನು ನಡೆಸುವ ಸಂಬಂಧ ಗಲ್ಫ್ ದೇಶಗಳಿಂದ ಶಾರೀಕ್ ಮತ್ತು ಆತನ ಸಹಚರರರಿಗೆ ಹಣಕಾಸಿನ ನೆರವು ಸಿಗುತ್ತಿತ್ತು ಎಂಬ ಆತಂಕಕಾರಿ ಮಾಹಿತಿ ಸಿಕ್ಕಿದೆ.
ಗಲ್ಫ್ ನಲ್ಲಿ ತಲೆಮರೆಸಿರುವ ಅರಾಫತ್ ಅಲಿ ಎಂಬಾತನ ನಿರ್ದೇಶನದ ಮೇರೆಗೆ ಶಾರೀಕ್ ಮತ್ತು ಆತನ ಸಹ ಚರರು ಕೆಲಸ ಮಾಡುತ್ತಿದ್ದರು. ಇವರಿಗೆ ಆತನೇ ಹಣ ಕಾಸು ನೆರವು ನೀಡುತ್ತಿದ್ದ. ಈತ ಐಎಸ್ ಪ್ರೇರಿತ ಅಲ್ ಹಿಂದ್‌ನ ಅಬ್ದುಲ್ ಮತೀನ್ ತಾಹಾ ಜತೆಗೂ ನಿಕಟ ಸಂಪರ್ಕದಲ್ಲಿ ದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಕೃತ್ಯ ಎಸಗುವ ವೇಳೆ ಆರೋಪಿ ಗಡ್ಡ ಶೇವ್ ಮಾಡಿದ್ದ. ಶಾರೀಕ್ ಓಡಾಡಿದ್ದ ಜಾಗ, ವಸ್ತುಗಳನ್ನು ಖರೀದಿ ಮಾಡಿದ್ದ ಅಂಗಡಿಗಳನ್ನು 3 ಪ್ರತ್ಯೇಕ ತನಿಖಾ ತಂಡಗಳು ಪರಿಶೀಲಿಸಿವೆ. ಶಾರೀಕ್ ಓಡಾಡಿದ ಆಟೋ, ಓಲಾ ಕ್ಯಾಬ್ ಚಾಲಕರನ್ನ ವಿಚಾರಣೆಗೆ ಒಳಪಡಿಸಲಾಗಿದೆ.
ಐಬಿಯಿಂದ ತನಿಖೆ
ಕುಕ್ಕರ್ ಬಾಂಬ್ ಸ್ಫೋಟ ಸಂಬಂಧ ಕೇಂದ್ರದ ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಅಧಿಕಾರಿಗಳು ಗೌಪ್ಯವಾಗಿ ತನಿಖೆಗಿಳಿದಿದ್ದು, ಆರೋಪಿ ಶಾರೀಕ್ ಸಂಪರ್ಕದಲ್ಲಿರುವ ಒಬ್ಬೊಬ್ಬರನ್ನೇ ಗುರುತಿಸಿ ಕೂಲಂಕಷವಾಗಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
Related Articles
ಶಾರೀಕ್‌ನ ಮೊಬೈಲ್‌ನಲ್ಲಿ ಬಳಸಿರುವ ಸಿಮ್ ಕಾರ್ಡ್ ಬಳ್ಳಾರಿ ಜಿಲ್ಲೆಯ ಸಂಡೂರಿನ ಅರುಣ್ ಕುಮಾರ್ ಗೌಳಿ ಎಂಬುವವರ ಹೆಸರಿನಲ್ಲಿರುವುದು ಪತ್ತೆಯಾದ ಬೆನ್ನಲ್ಲೇ ಅರುಣ್ ಕುಮಾರ್‌ನನ್ನು ಐಬಿ ಅಧಿಕಾರಿಗಳು ಕೂಲಂಕಷವಾಗಿ ವಿಚಾರಣೆ ನಡೆಸಿದ್ದಾರೆ. ಐಡಿ ಕಾರ್ಡ್ ಇದ್ದ ತನ್ನ ಪರ್ಸ್ 2019ರಲ್ಲಿ ಬೆಂಗಳೂರಿನಲ್ಲಿ ಕಳೆದು ಹೋಗಿತ್ತು. ಎರಡು ದಿನಗಳ ಬಳಿಕ ವ್ಯಕ್ತಿಯೊಬ್ಬ ಪರ್ಸ್ ಹಿಂದಿರುಗಿಸಿದ್ದಾಗಿ ಐಬಿ ಅಧಿಕಾರಿಗಳ ಮುಂದೆ ಅರುಣ್ ಹೇಳಿಕೆ ನೀಡಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿಗಳು ಆತನ ಸಿಮ್ ಕಾರ್ಡ್ ಪಡೆದ ಅನಂತರ ಅದನ್ನು ತಮ್ಮ ಹಾಗೂ ತಮ್ಮ ತಂಡದ ಇತರ ಸದಸ್ಯರ ಜತೆಗೆ ಮಾತುಕತೆ ನಡೆಸಲು ಬಳಸುತ್ತಿದ್ದರು. ಪ್ರಕರಣದಲ್ಲಿ ಅರುಣ್ ಪಾತ್ರ ಮೇಲ್ನೋಟಕ್ಕೆ ಕಂಡು ಬಂದಿಲ್ಲ ಎನ್ನಲಾಗಿದೆ.
ಕಾಯುತ್ತಿವೆ 7 ತನಿಖಾ ತಂಡ!
ಚಿಕಿತ್ಸೆ ಪಡೆಯುತ್ತಿರುವ ಶಾರೀಕ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿಲ್ಲ. ವಿಶೇಷವೆಂದರೆ ಈತನ ಚೇತರಿಕೆಗಾಗಿ ಏಳು ತನಿಖಾ ತಂಡಗಳು ಕಾಯುತ್ತಿವೆ. ಕೇಂದ್ರ ಗೃಹ ಸಚಿವಾಲಯವೂ ಸೋಮ ವಾರ ಶಾರೀಕ್ ಕುರಿತು ವರದಿ ಪಡೆದಿದೆ. ಮತ್ತೂಂದೆಡೆ ಎನ್‌ಐಎ ತಂಡವು ಶಾರೀಕ್ ಸಂಪರ್ಕದಲ್ಲಿದ್ದ ಶಂಕಿತ ಉಗ್ರರಿಗೆ ಶೋಧ ಮುಂದು ವರಿಸಿದ್ದು, ಕೆಲವು ಮಹತ್ವದ ದಾಖಲೆಗಳು ಸಿಕ್ಕಿವೆ. ಪಿತೂರಿಗಾರನ ಬಗ್ಗೆಯೂ ಸುಳಿವು ಸಿಕ್ಕಿದ್ದು, ಸದ್ಯದಲ್ಲೇ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಗಳಿವೆ.
ಮಂಗಳೂರು, ಮೈಸೂರು, ಶಿವಮೊಗ್ಗ, ತಮಿಳು ನಾಡಿನ ಕೊಯಮತ್ತೂರು, ಕೇರಳಕ್ಕೆ ತೆರಳಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸುವಲ್ಲಿ ತೊಡಗಿದ್ದಾರೆ.
ವಾಟ್ಸ್‌ಆ್ಯಪ್ ನಲ್ಲಿ ಆದಿಯೋಗಿ
ಶಾರೀಕ್ ವ್ಯಾಟ್ಸ್‌ಆ್ಯಪ್ ಡಿಪಿಯಲ್ಲಿ ಆದಿಯೋಗಿ ಚಿತ್ರ ಹಾಕಿದ್ದ. ಮೈಸೂರಿನಲ್ಲಿ ಮೊಬೈಲ್ ತರಬೇತಿಗೆ ಹೋದಾಗಲೂ ಪ್ರೇಮ್‌ರಾಜ್ ಎಂದಿದ್ದ. ಮಂಗಳೂರಿಗೆ ಬಂದಾಗಲೂ ಆತ ಕೇಸರಿ ಶಾಲು ಹೊಂದಿದ್ದ. ಈ ಮೂಲಕ ದಾರಿ ತಪ್ಪಿಸುವ ಮತ್ತು ಸ್ಫೋಟ ವೇಳೆ ಸಾವಿಗೀಡಾದರೂ ಹಿಂದೂ ಎಂಬಂತೆ ಬಿಂಬಿಸಿಕೊಳ್ಳಲು ಯತ್ನಿಸಿದ್ದ ಎಂದು ಮೂಲಗಳು ತಿಳಿಸಿವೆ.
ಇಂದು ಗೃಹ ಸಚಿವರು,
ಡಿಜಿಪಿ ಮಂಗಳೂರಿಗೆ
ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಡಿಜಿಪಿ ಪ್ರವೀಣ್ ಸೂದ್ ಬುಧವಾರ ಮಂಗಳೂರಿಗೆ ಆಗಮಿಸಲಿದ್ದಾರೆ. ಗೃಹಸಚಿವರು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆಸ್ಪತ್ರೆ, ಸ್ಫೋಟ ನಡೆದ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.