Finance Debt: ಫೈನಾನ್ಸ್ ಸಾಲ ವಸೂಲಿಗೆ ಹೆದರಿ ಊರನ್ನೇ ಬಿಟ್ಟರು!
ಕಿರುಕುಳಕ್ಕೆ ಬೇಸತ್ತು ಗ್ರಾಮ ತೊರೆದ 80ರಷ್ಟು ಕುಟುಂಬ
Team Udayavani, Jan 11, 2025, 7:10 AM IST
ಚಾಮರಾಜನಗರ/ತುಮಕೂರು: ಮೈಕ್ರೋ ಫೈನಾನ್ಸ್‌ಗಳಿಂದ ಪಡೆದ ಅಧಿಕ ಬಡ್ಡಿಯ ಸಾಲ ತೀರಿಸಲಾಗದೇ ಚಾಮರಾಜನಗರ ತಾಲೂಕಿನ ವಿವಿಧ ಗ್ರಾಮಗಳ ಹಲವು ಕುಟುಂಬಗಳು ಊರನ್ನೇ ತೊರೆದಿದ್ದರೆ, ತುಮಕೂರು ಜಿಲ್ಲೆ ತಿಪಟೂರಿನಲ್ಲಿ ಮಹಿಳೆಯೊಬ್ಬರು ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಾಮರಾಜನಗರದ ಸಂತೆ ಮರಹಳ್ಳಿ ಹೋಬಳಿಯ ಹೆಗ್ಗವಾಡಿಪುರ, ದೇಶವಳ್ಳಿ, ಸೇರಿದಂತೆ ವಿವಿಧ ಗ್ರಾಮಗಳ ಹಲವು ಕುಟುಂಬಗಳು ಊರನ್ನೇ ತೊರೆದಿವೆ. ಈ ನಡುವೆ ಪೋಷಕರ ಸಂಕಷ್ಟ ಕಂಡು ಬೇಸತ್ತ ಬಾಲಕನೋರ್ವ ಸಾಲ ತೀರಿಸಲು ತನ್ನ ಕಿಡ್ನಿಯನ್ನೇ ಮಾರುವುದಾಗಿ ಹೇಳಿರುವುದೂ ಬೆಳಕಿಗೆ ಬಂದಿದೆ. ಸಂತೆಮರಹಳ್ಳಿ ಹೋಬಳಿಯ ಗ್ರಾಮಗಳಲ್ಲಿ ಸುಮಾರು 50 ಕುಟುಂಬ, ಚಾಮರಾಜನಗರ ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ 30ಕ್ಕೂ ಹೆಚ್ಚು ಕುಟುಂಬ ಸಾಲದ ಶೂಲಕ್ಕೆ ಹೆದರಿ ಊರು ಬಿಟ್ಟಿವೆ.
ಹಳ್ಳಿಗಳಲ್ಲಿ ಸರಿಯಾದ ಮಳೆ ಬೆಳೆ ಇಲ್ಲದೇ, ಜಮೀನು ಇಲ್ಲದೇ ಕೂಲಿ ಮಾಡುವ ಜನರು ಮಕ್ಕಳ ವ್ಯಾಸಂಗ, ಕೃಷಿ, ಮದುವೆ ಮಾಡುವ ಸಲುವಾಗಿ ಖಾಸಗಿ ಮೈಕ್ರೋ ಫೈನಾನ್ಸ್ ಗಳಲ್ಲಿ ಸಾಲ ಮಾಡುತ್ತಿರುತ್ತಾರೆ. ಮೈಕ್ರೋ ಫೈನಾನ್ಸ್‌ಗಳಲ್ಲಿ ಹೆಚ್ಚಿನ ಷರತ್ತುಗಳಿರುವುದಿಲ್ಲ. ಹೀಗಾಗಿ ಮನೆ, ಜಮೀನು ಒತ್ತೆ ಇಟ್ಟು, ಹೆಚ್ಚು ಬಡ್ಡಿಯಿದ್ದರೂ ಸಾಲ ಪಡೆಯುತ್ತಾರೆ. 2-3 ವರ್ಷಗಳಲ್ಲಿ ಸಾಲ ತೀರಿಸುವ ಒತ್ತಡ ಇರುತ್ತದೆ. ಬಡತನ, ಆದಾಯವಿಲ್ಲದೆ ಸಾಲ ತೀರಿಸಲು ಸಾಧ್ಯವಾಗುವುದಿಲ್ಲ. ಫೈನಾನ್ಸ್‌ನವರ ಕಿರುಕುಳ ತಾಳಲಾರದೇ ಊರು ಬಿಟ್ಟು ತಲೆ ಮರೆಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಸಾಲ ತೀರಿಸಲು ಕಿಡ್ನಿ ಮಾರಲೂ ಸಿದ್ಧ
ಪೋಷಕರು ಮಾಡಿದ ಸಾಲ ಪಡೆದು ತೀರಿಸಲಾಗದೇ ನೊಂದ ಹೆಗ್ಗವಾಡಿಪುರ ಗ್ರಾಮದ 13 ವರ್ಷದ ಬಾಲಕನೊಬ್ಬ ಕಿಡ್ನಿ ಮಾರಲೂ ಸಿದ್ಧನಾಗಿದ್ದ ಎಂದು ರೈತ ಮುಖಂಡ ಹೆಗ್ಗವಾಡಿಪುರ ಗ್ರಾಮದ ಎಚ್.ಸಿ. ಮಹೇಶ್‌ಕುಮಾರ್ ಉದಯವಾಣಿಗೆ ತಿಳಿಸಿದರು. ನಾನೇ ಆ ಯುವಕನಿಗೆ ಧೈರ್ಯ ಹೇಳಿದೆ. ರೈತ ಸಂಘದ ಮೂಲಕ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದವರು ಹೇಳಿದರು. ಮಲೆಮಹದೇಶ್ವರ ಬೆಟ್ಟದಲ್ಲಿ ಸಂಪುಟ ಸಭೆ ನಡೆಸುತ್ತಿರುವ ರಾಜ್ಯ ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಾಲ ಮನ್ನಾ ಮಾಡಿಸಬೇಕು ಎಂದವರು ಒತ್ತಾಯಿಸಿದರು.
ಫೈನಾನ್ಸ್ ಕಿರುಕುಳ: ಮಹಿಳೆ ಆತ್ಮಹತ್ಯೆ
ತುಮಕೂರು: ಮೈಕ್ರೋ ಫೈನಾನ್ಸ್‌ನಿಂದ ಸಾಲ ಪಡೆದಿದ್ದ ಮಹಿಳೆ, ಕಿರುಕುಳಕ್ಕೆ ಬೇಸತ್ತು ವೀಡಿಯೋ ಮಾಡಿ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿಪಟೂರಿನ ಗಾಂಧಿನಗರದಲ್ಲಿ ನಡೆದಿದೆ. ಸಾಧಿಕ ಬೇಗಂ (42) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಸಾಲಗಾರರಿಂದ ಟೆನ್ಶನ್ ಆಗ್ತಿದೆ. ಜೀವನವೇ ಬೇಜಾರಾಗಿದೆ. ಮಗನನ್ನ ಚೆನ್ನಾಗಿ ನೋಡ್ಕೊಳ್ಳಿ ಎಂದು ಸಾಧಿಕ ಅವರು ವೀಡಿಯೋ ಮಾಡಿ ಮನೆಯಿಂದ ಕಾಣೆಯಾಗಿದ್ದರು. ಪತಿ ಸಯಿದಾ ನಯಾಜ್ ಪತ್ನಿಗಾಗಿ ಹುಡುಕಾಟ ನಡೆಸಿ ತಿಪಟೂರು ನಗರ ಠಾಣೆಗೆ ದೂರು ನೀಡಿದ್ದರು. ಗುರುವಾರ ಹೇಮಾವತಿ ನಾಲೆಯಲ್ಲಿ ಶವ ಪತ್ತೆಯಾಗಿದೆ. ಕಿಬ್ಬನಹಳ್ಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ರಾಜ್ಯಾಧ್ಯಕ್ಷ ಚುನಾವಣೆ ಸ್ಪರ್ಧೆಗೆ ನಾನೂ ಸಿದ್ಧ: ಬಿ.ವೈ.ವಿಜಯೇಂದ್ರ ತಿರುಗೇಟು
BJP; ಭಿನ್ನರಿಗೆ ವರಿಷ್ಠರ ಬುಲಾವ್: ರೆಡ್ಡಿ,ರಾಮುಲುಗೂ ಆಹ್ವಾನ
ಶ್ರದ್ಧೆ ಇದ್ದವರಿಗೆ ಮಾತ್ರ ಜಾತ್ರೆಗಳಲ್ಲಿ ವ್ಯಾಪಾರಕ್ಕೆ ಅವಕಾಶ: ಸಚಿವರಿಗೆ ಮನವಿ
ಕಂದಾಯ ಸೈಟ್, ಮನೆಗೆ ಬಿ-ಖಾತೆ ರೀತಿ ದಾಖಲೆ
MUDA Case: ಡಿ.ಕೆ.ಶಿವಕುಮಾರ್ ಮುಖದಲ್ಲಿ ಮಂದಹಾಸ: ಬಿ.ವೈ.ವಿಜಯೇಂದ್ರ ವ್ಯಂಗ್ಯ
MUST WATCH
ಹೊಸ ಸೇರ್ಪಡೆ
BJP: ರಾಜ್ಯಾಧ್ಯಕ್ಷ ಚುನಾವಣೆ ಸ್ಪರ್ಧೆಗೆ ನಾನೂ ಸಿದ್ಧ: ಬಿ.ವೈ.ವಿಜಯೇಂದ್ರ ತಿರುಗೇಟು
Kotekar Robbery Case: ದರೋಡೆ ಯೋಜನೆಯ ಹಿಂದೆ ಒಬ್ಬನಲ್ಲ; ಇಬ್ಬರು ಸೂತ್ರಧಾರರು?
Horoscope: ಪರಿಹಾರವಿಲ್ಲದ ಸಮಸ್ಯೆ ಇಲ್ಲ ಎಂಬುದು ನೆನಪಿರಲಿ
India-China: ಮಾನಸ ಸರೋವರ ಯಾತ್ರೆ ಪುನಾರಂಭಕ್ಕೆ ಭಾರತ-ಚೀನಾ ಸಮ್ಮತಿ
Ullala: ಬಿದ್ದು ಸಿಕ್ಕಿದ್ದ 2.5 ಲ.ರೂ. ಮೌಲ್ಯದ ಚಿನ್ನಾಭರಣ ಮರಳಿಸಿದ ಯುವಕ!