Advertisement
ಬಳಿಕ ಮಾತನಾಡಿದ ಶಾಸಕ ಜೆ. ಆರ್. ಲೋಬೋ, “ಎಂಟು ವರ್ಷಗಳಿಂದ ಪುಟಾಣಿ ರೈಲು ಓಡಾಟ ಕದ್ರಿ ಪಾರ್ಕ್‌ನಲ್ಲಿ ಇರಲಿಲ್ಲ. ಇದೀಗ ಹೊಸತಾಗಿ ರೈಲನ್ನು ನಿರ್ಮಿಸಲಾಗಿದೆ. ಈಗಾಗಲೇ ಎಂಜಿನ್ ಮತ್ತು ಬೋಗಿಗಳು ಆಗಮಿಸಿದ್ದು, ಹಳಿಗಳು ಕೂಡಾ ತಯಾರಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈಲನ್ನು ಲೋಕಾರ್ಪಣೆ ಮಾಡಲಿದ್ದಾರೆ’ ಎಂದು ಹೇಳಿದರು.
ರೈಲ್ವೇ ಇಲಾಖೆ ಅಡಿಯಲ್ಲಿ ಈ ರೈಲು ನಿರ್ಮಾಣಗೊಂಡಿದೆ. ಒಟ್ಟು 1.35 ಕೋಟಿ ರೂ. ವೆಚ್ಚದಲ್ಲಿ ರೈಲು ತಯಾರಾಗಿದೆ. ಮೂರು ಬೋಗಿಗಳಿದ್ದು, ನೋಡಲು ಆಕರ್ಷಕವಾಗಿದೆ. ಬೋಗಿಗಳು ತಿಳಿ ನೀಲಿ ಬಣ್ಣ ಹೊಂದಿದ್ದರೆ, ಮುಂಭಾಗ ಕೇಸರಿ ಮತ್ತು ತಿಳಿ ಪಿಂಕ್ ಬಣ್ಣದಿಂದ ಕೂಡಿದೆ. ನೂತನ ರೈಲು ನಿರ್ಮಾಣ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಬಾಲಭವನದ ಮುಖಾಂತರ ಅನುದಾನ ಒದಗಿಸಲಾಗಿತ್ತು. ಹಳೆ ರೈಲಿನಲ್ಲಿ ಕೇವಲ ಎರಡು ಬೋಗಿಗಳಿದ್ದುವು. ಹೊಸದಾಗಿ ಬಂದಿರುವ ರೈಲಿನಲ್ಲಿ ಮೂರು ಬೋಗಿಗಳಿರುವುದು ಗಮನಾರ್ಹ. ಮೂರು ಬೋಗಿಗಳ ರೈಲು
ಕದ್ರಿ ಪಾರ್ಕ್‌ನಲ್ಲಿ 1983ರಲ್ಲಿ ಆರಂಭಿಸಿದ್ದ ಪುಟಾಣಿ ರೈಲಿನ ಓಡಾಟ 2013ರವರೆಗೆ ನಿರಾತಂಕವಾಗಿ ಸಾಗಿತ್ತು. ಆದರೆ ಈ ರೈಲು ಹಿಂದೆ ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಓಡಾಟ ನಡೆಸುತ್ತಿದ್ದು, ಅದನ್ನು ಮಂಗಳೂರಿನ ಕದ್ರಿ ಪಾರ್ಕ್‌ಗೆ ತರಲಾಗಿತ್ತು. ಹಿಂದಿನ ರೈಲು 1975 ರಲ್ಲಿ ನಿರ್ಮಾಣಗೊಂಡಿತ್ತು, ಹಳೆಯ ರೈಲಾದ್ದರಿಂದ ಸಂಪೂರ್ಣ ಹಾಳಾಗಿದ್ದ ಹಿನ್ನೆಲೆಯಲ್ಲಿ 2013ರಲ್ಲಿ ತನ್ನ ಓಡಾಟವನ್ನು ಸಂಪೂರ್ಣ ನಿಲ್ಲಿಸಿತ್ತು. ಮಕ್ಕಳಿಗೆ ಮನೋರಂಜನೆಯ
ಭಾಗವಾಗಿದ್ದ ಈ ರೈಲು ತನ್ನ ಓಡಾಟವನ್ನು ನಿಲ್ಲಿಸಿದ್ದರಿಂದ ಸಹಜವಾಗಿಯೇ ಮಕ್ಕಳು ರೈಲಿನಲ್ಲಿ ಕುಳಿತು ಪ್ರಯಾಣಿಸುವ ಖುಷಿಯನ್ನು ಕಳೆದುಕೊಂಡಿದ್ದರು. ಆದರೆ ಸದ್ಯದಲ್ಲೇ ಮತ್ತೆ ರೈಲು ಓಡಾಟ ಪುನಾರಂಭವಾಗಲಿದ್ದು, ಮಕ್ಕಳಿಗೆ ಖುಷಿ ತಂದಿದೆ.