Advertisement

Police: ಕೊನೆಗೂ ಅಂಕಪಟ್ಟಿ ನಕಲಿ ಸಾಬೀತು!

12:05 AM Oct 21, 2023 | Team Udayavani |

ದಾವಣಗೆರೆ: ಭಡ್ತಿಗಾಗಿ ಸಹಕಾರಿ ಇಲಾಖೆ ನೌಕರನೊಬ್ಬ ಹೊರ ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾನಿಲಯದ ಹೆಸರಲ್ಲಿ ನೀಡಿದ ಅಂಕಪಟ್ಟಿ ನಕಲಿ ಎಂಬುದು ಸಾಬೀತಾಗಿದ್ದು, ನೌಕರನಿಗೆ ನೀಡಿದ ಭಡ್ತಿ ಆದೇಶವನ್ನು ಹಿಂಪಡೆದು, ಬೇರೆಡೆ ವರ್ಗಾಯಿಸಲಾಗಿದೆ. ಜತೆಗೆ ಕಾನೂನು ಕ್ರಮದತ್ತ ಇಲಾಖೆ ಹೆಜ್ಜೆ ಇರಿಸಿದೆ.

Advertisement

ಸಾರ್ವಜನಿಕ ದೂರು ಆಧರಿಸಿ ಅಂಕಪಟ್ಟಿಯ ಅಸಲಿತನ ಅರಿಯಲು ಮುಂದಾಗಿದ್ದ ಸಹಕಾರ ಇಲಾಖೆ, ಈ ವಿಚಾರವಾಗಿ ಹಲವು ತಿಂಗಳುಗಳಿಂದ ಬೆಂಬಿಡದೆ ಅನೇಕ ಬಾರಿ, ವಿವಿಧ ರೀತಿಯ ವಿಚಾರಣೆ ನಡೆಸಿ, ಇಲಾಖೆಗೆ ಸಲ್ಲಿಕೆಯಾಗಿರುವ ಅಂಕಪಟ್ಟಿ ನಕಲಿ ಎಂಬುದನ್ನು ದೃಢಪಡಿಸಿಕೊಂಡಿದೆ. ಸದ್ಯಕ್ಕೆ ನೌಕರನಿಗೆ ಹಿಂಭಡ್ತಿ ನೀಡಿ ಮುಂದಿನ ಕಠಿನ ಕಾನೂನು ಕ್ರಮಕ್ಕೆ ಮುಂದಾಗುವ ಜತೆಗೆ ಪದವೀಧರನಲ್ಲದ ಆತನ ಅವಧಿಯಲ್ಲಾದ ಎಲ್ಲ ಆಡಿಟ್‌ಗಳನ್ನು ಮರು ಲೆಕ್ಕಪರಿಶೋಧನೆಗೆ ಒಳಪಡಿಸುವ ಸಾಧ್ಯತೆಯೂ ಇದೆ.

ಸ್ಥಳೀಯವಾಗಿರುವ ವಿಶ್ವವಿದ್ಯಾನಿಲಯದ ಹೆಸರಲ್ಲಿ ನಕಲಿ ಅಂಕಪಟ್ಟಿ ನೀಡಿದರೆ ನೇರ ಪರಿಶೀಲನೆ ವೇಳೆ ಸಿಕ್ಕಿ ಬೀಳುವ ಆತಂಕದಿಂದ ನಕಲಿ ಅಂಕಪಟ್ಟಿ ತಯಾರಕರ ತಂಡಗಳು, ಹೊರ ರಾಜ್ಯದ ವಿಶ್ವವಿದ್ಯಾನಿಲಯದ ಹೆಸರಿನ ಅಂಕಪಟ್ಟಿ ನೀಡುವುದೇ ತಮಗೆ ಸುರಕ್ಷಿತ ಎಂದು ಭಾವಿಸಿದ್ದವು. ಆದರೆ ಈ ಮಾರ್ಗವೂ ಸುರಕ್ಷಿತವಲ್ಲ ಎಂಬ ಸಂದೇಶವನ್ನು ಈ ಪ್ರಕರಣ ರವಾನಿಸಿದ್ದು ನಕಲಿ ಅಂಕಪಟ್ಟಿ ಜಾಲಕ್ಕೂ ನಡುಕ ಹುಟ್ಟಿಸಿದೆ.

ಏನಿದು ಪ್ರಕರಣ?
ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಸಹಕಾರ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿರುವ ಪ್ರಥಮ ದರ್ಜೆ ಸಹಾಯಕನೋರ್ವ ತಾನು ಉತ್ತರ ಪ್ರದೇಶ ರಾಜ್ಯ ಮೀರತ್‌ನ ಪ್ರತಿಷ್ಠಿತ ಚೌಧರಿ ಚರಣ್‌ಸಿಂಗ್‌ ವಿವಿಯೊಂದರಲ್ಲಿ ಬಿಕಾಂ ಪದವಿ ಪಡೆದಿರುವುದಾಗಿ ಅಂಕಪಟ್ಟಿ ಸಲ್ಲಿಸಿದ್ದ. ಅಂಕಪಟ್ಟಿ ಆಧಾರದ ಮೇಲೆ ಇಲಾಖೆ ಆತನನ್ನು ಪದವೀಧರ ಎಂದು ಗುರುತಿಸಿ, ಇಲಾಖೆ ಆತನ ನೇಮಕಾತಿ ವೃಂದ ಬದಲಾವಣೆ ಮಾಡಿ ಭಡ್ತಿ ನೀಡಿತ್ತು. ಅಂದರೆ ಪ್ರಥಮ ದರ್ಜೆ ಸಹಾಯಕ ವೃಂದದಿಂದ ಲೆಕ್ಕಪರಿ ಶೋಧಕ ವೃಂದಕ್ಕೆ ಬದಲಾಯಿಸಿ ಆದೇಶ ಹೊರಡಿಸಿತ್ತು.

ಅಂಕಪಟ್ಟಿಯ ಅಸಲಿಯತ್ತನ್ನು ಹೊರ ರಾಜ್ಯದ ವಿವಿಗೆ ಪತ್ರ ಬರೆದು ಪರೀಕ್ಷಿಸಿ ಖಚಿತಪಡಿಸಿಕೊಳ್ಳಲಾಗಿತ್ತು. ಆದರೆ ಕೆಲವು ತಿಂಗಳ ಬಳಿಕ ಇದೇ ನೌಕರನ ವಿರುದ್ಧ ನಕಲಿ ಅಂಕಪಟ್ಟಿ ಸಲ್ಲಿಕೆಯಾಗಿದೆ ಎಂಬ ಸಾರ್ವಜನಿಕ ದೂರು ಬಂದಾಗ ಇಲಾಖೆ ಮತ್ತೂಮ್ಮೆ ಪರಿಶೀಲನೆಗೆ ಮುಂದಾಯಿತು. ಅಂಕಪಟ್ಟಿಯ ಅಸಲಿತನ ಪರಿಶೀಲನೆಗಾಗಿ ಹೊರ ರಾಜ್ಯದ ವಿವಿಗೆ ಪತ್ರ ಬರೆಯಲಾಯಿತು. ಆಗ ಅಲ್ಲಿಂದ ಈ ಕ್ರಮಾಂಕದ ವಿದ್ಯಾರ್ಥಿಯ ಮಾಹಿತಿ ನಮ್ಮಲ್ಲಿ ಇಲ್ಲ ಎಂಬ ಉತ್ತರ ಬಂದಿತು. ಒಂದೇ ವಿವಿಯಿಂದ ಎರಡು ಬಾರಿ ವಿಭಿನ್ನ ಉತ್ತರ ಬಂದಿತ್ತು.

Advertisement

ಉನ್ನತ ತನಿಖೆ ಸಾಧ್ಯತೆ
ಸಹಕಾರ ಇಲಾಖೆಯಲ್ಲಿ ಬೆಳಕಿಗೆ ಬಂದ ನಕಲಿ ಅಂಕಪಟ್ಟಿ ಪ್ರಕರಣ ಕುರಿತು ಉನ್ನತ ಮಟ್ಟದ ತನಿಖೆ ನಡೆದು, ಈ ಪ್ರಕರಣದ ಮೂಲಕವೇ ಪೊಲೀಸರು ನಕಲಿ ಅಂಕಪಟ್ಟಿ ಜಾಲವನ್ನು ಜಾಲಾಡುವ ಸಾಧ್ಯತೆ ಇದೆ.

 ಎಚ್‌.ಕೆ. ನಟರಾಜ

 

Advertisement

Udayavani is now on Telegram. Click here to join our channel and stay updated with the latest news.

Next