ಚನ್ನಗಿರಿ: ನೆರೆಯ ಆಂಧ್ರಪ್ರದೇಶದ ಕಾಡಿನಿಂದ ಗಡಿ ಜಿಲ್ಲೆ ಚಿತ್ರದುರ್ಗಕ್ಕೆ ಬಂದು ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳಲ್ಲಿ ಅವಾಂತರ ಸೃಷ್ಟಿಸಿ ಸಾವು-ನೋವುಗಳಿಗೆ ಕಾರಣವಾಗಿದ್ದ ನರಹಂತಕ ಕಾಡಾನೆ ಕೊನೆಗೂ ಸೆರೆಸಿಕ್ಕಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿಯ ಕಗ್ಗಿ ಅರಣ್ಯಪ್ರದೇಶದಲ್ಲಿ ಗುರುವಾರ ಸಲಗವನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಆದರೆ, ಇನ್ನೊಂದು ಆನೆ ಇನ್ನೂ ಸಿಕ್ಕಿಲ್ಲ. ಇದಕ್ಕಾಗಿ ಶೋಧ ಮುಂದುವರಿದಿದೆ.
ಕಳೆದ ಆರು ದಿನಗಳ ಹಿಂದೆ ಕುಕ್ಕ ವಾಡೇಶ್ವರಿ ಉಬ್ರಾಣಿ ಅರಣ್ಯ ಪ್ರವೇಶಿಸಿದ್ದ ಎರಡು ಕಾಡಾನೆಗಳು ಅರಣ್ಯ ಇಲಾಖೆ ಸಿಬ್ಬಂದಿ ಕೈಗೆ ಸಿಗದೆ ಕಾಡಿನಲ್ಲಿ ಅವಿತುಕೊಂಡಿದ್ದವು. ಸಾಕಷ್ಟು ಜನರ ಮೇಲೆ ದಾಳಿ ಮಾಡಿದ್ದವು. ಆನೆ ದಾಳಿಗೆ ಸಿಲುಕಿ ನಾಲ್ಕಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ ಸಾಕಷ್ಟು ಬೆಳೆ ಹಾನಿಯಾಗಿದೆ. ಜನರ ನಿದ್ದೆಗೆಡಿಸಿದ್ದ ಆನೆಗಳು ನಂತರ ಉಬ್ರಾಣಿ ಅರಣ್ಯ ಪ್ರದೇಶದಲ್ಲಿ ಸೇರಿಕೊಂಡಿದ್ದವು. ಆನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ “ಆಪರೇಷನ್ ಉಬ್ರಾಣಿ’ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿತ್ತು.
ಕಗ್ಗಿ ಅರಣ್ಯದಲ್ಲಿ ಸೆರೆ: ಗುರುವಾರ ಬೆಳಗ್ಗೆ 8:30ರ ಸುಮಾರಿಗೆ ಕಗ್ಗಿ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಕಾಡಾನೆ, ನೀರನ್ನು ಅರಸಿ ಹೊರಟಿತ್ತು. ಆಗ ಅರಣ್ಯ ಇಲಾಖೆ ಸಿಬ್ಬಂದಿ, ಪಶುವೈದ್ಯರು, ಅರವಳಿಕೆ ತಜ್ಞರು, ಮಾವುತರು, ಐದು ಸಾಕು ಆನೆಗಳೊಂದಿಗೆ ಕಾಡಾನೆಯನ್ನು ಬೆನ್ನಟ್ಟಿದರು. ಬೆಳಗ್ಗೆ 10:15ರ ಸುಮಾರಿಗೆ ಕಾಡಾನೆ ಪರಾರಿಯಾಗಲು ಯತ್ನಿಸಿತಾದರೂ ಸ್ಥಳದಲ್ಲಿದ್ದ ಅರವಳಿಕೆ ತಜ್ಞರು ಕಾಡಾನೆ ಮೇಲೆ ಅರವಳಿಕೆ ಚುಚ್ಚುಮದ್ದು ಹಾರಿಸಿದರು. ಇದರಿಂದ ಸ್ವಲ್ಪ ದೂರದವರೆಗೆ ಓಡಿದ ಆನೆ ಕೊನೆಗೆ ಪ್ರಜ್ಞೆ ತಪ್ಪಿ ಬಿತ್ತು. ತಕ್ಷಣ ದೊಡ್ಡ ಹಗ್ಗದಿಂದ ಕಾಡಾನೆಯನ್ನು ಬಿಗಿದು ಸಾಕು ಆನೆಗಳ ಸಹಾಯದಿಂದ ಲಾರಿಯ ಒಳಗೆ ಸೇರಿಸಲಾಯಿತು. ಸೆರೆ ಸಿಕ್ಕ ಆನೆಯನ್ನು ಗಾಜನೂರಿನ ಸಕ್ರೆಬೈಲು ಅರಣ್ಯ ಪ್ರದೇಶಕ್ಕೆ ಕಳುಹಿಸಲಾಗಿದೆ. ಮತ್ತೂಂದು ಕಾಡಾನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಕಾಡಾನೆಯನ್ನು ಸೆರೆ ಹಿಡಿಯುವುದು ಸಿಬ್ಬಂದಿಗೆ ಕಠಿಣ ಕೆಲಸವಾಗಿದ್ದು, ಪುಂಡಾನೆ ಸೆರೆಗೆ ಸತತ ಪ್ರಯತ್ನ ನಡೆದಿದೆ.
ಈ ಯಶಸ್ಸಿಗೆ ತಂಡದಲ್ಲಿ ಕಾರ್ಯ ನಿರ್ವಹಿಸಿದ ಪ್ರತಿಯೊಬ್ಬರ ಶ್ರಮವಿದೆ. ಮೈಸೂರಿನ ಅಭಿಮನ್ಯು ಸೇರಿದಂತೆ ಉಳಿದ ಐದು
ಸಾಕು ಆನೆಗಳ ಸಹಕಾರವೂ ಸಾಕಷ್ಟಿದೆ. ಸದ್ಯ ಕಗ್ಗಿ ಅರಣ್ಯ ಪ್ರದೇಶದಲ್ಲಿ ಮತ್ತೂಂದು ಕಾಡಾನೆ ಕಣ್ಮರೆಯಾಗಿದ್ದು, ಅದನ್ನು ಕೂಡಾ ಸೆರೆ ಹಿಡಿಯುವ ಮೂಲಕ “ಆಪರೇಷನ್ ಉಬ್ರಾಣಿ ಕಾರ್ಯಾಚರಣೆ’ಯನ್ನು ಯಶಸ್ವಿಗೊಳಿಸಲಾಗುವುದು.
– ದಿನೇಶ್
ಚನ್ನಗಿರಿ ವಲಯ ಅರಣ್ಯಾಧಿಕಾರಿ