Advertisement

ಗಾಂಧಿ ಗ್ರಾಮ ಪುರಸ್ಕಾರಕ್ಕೆ ಕೊನೆಗೂ ಗ್ರಾಪಂಗಳ ಪಟ್ಟಿ ಪ್ರಕಟ

08:47 PM Sep 23, 2022 | Team Udayavani |

ಬೆಂಗಳೂರು: ಕೊನೆಗೂ 2020-21ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ಗ್ರಾಮ ಪಂಚಾಯಿತಿಗಳ ಪಟ್ಟಿಯನ್ನು ಸರ್ಕಾರ ಪ್ರಕಟಿಸಿದೆ.

Advertisement

ಪ್ರತಿ ತಾಲೂಕಿಗೆ ಒಂದರಂತೆ ಒಟ್ಟು 176 ಗ್ರಾ,ಪಂ.ಗಳನ್ನು ಆಯ್ಕೆ ಮಾಡಿ ಪ್ರತಿ ಗ್ರಾಪಂಗೆ  ತಲಾ 5 ಲಕ್ಷ ರೂ. ವಿಶೇಷ ಅನುದಾನದಂತೆ ಒಟ್ಟು 8.80 ಕೋಟಿ ರೂ.ಗಳನ್ನೂ  ಬಿಡುಗಡೆ ಮಾಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಆದೇಶ ಹೊರಡಿಸಿದೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದ ಆಯ್ಕೆ ಸಮಿತಿಯ ಮೂಲಕ ಶಿಫಾರಸು ಮಾಡಲಾದ ಪ್ರತಿ ತಾಲೂಕಿಗೆ ಒಂದರಂತೆ ಗ್ರಾಪಂಗಳನ್ನು  ರಾಜ್ಯ ಮಟ್ಟದ ಪರಾಮರ್ಶೆ ಸಮಿತಿಯ ಸಭೆಯಲ್ಲಿ ಮಂಡಿಸಿ 2020-21ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗ್ರಾ.ಪಂ.ಗಳನ್ನು ಆಯ್ಕೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

2019-20 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪ್ರತಿ ತಾಲೂಕಿಗೆ ಒಂದರಂತೆ ಒಟ್ಟು 176 ಗ್ರಾಪಂಗಳನ್ನು ಆಯ್ಕೆ ಮಾಡಲಾಗಿದ್ದು, ಕೋವಿಡ್‌-19 ಕಾರಣಕ್ಕೆ ಪುರಸ್ಕಾರ ನೀಡಲಾಗಿಲ್ಲ. 2020-21ನೇ ಸಾಲಿನ  ಗಾಂಧಿ ಗ್ರಾಮ ಪುರಸ್ಕಾರಕ್ಕೆ ಹೊಸ ತಾಲೂಕುಗಳಂತೆ ಪ್ರತಿ ತಾಲೂಕಿಗೊಂದರಂತೆ ಒಟ್ಟು 229 ಗ್ರಾಪಂಗಳನ್ನು ಆಯ್ಕೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಪರಿಶೀಲನೆಯಲ್ಲಿತ್ತು. ಆದರೆ, ಆರ್ಥಿಕ ಇಲಾಖೆಯು ಹಳೆಯ 176 ತಾಲೂಕುಗಳಿಗೆ ಮಿತಿಗೊಳಿಸಿದ್ದರಿಂದ 176 ಗ್ರಾ.ಪಂ.ಗಳನ್ನು ಆಯ್ಕೆ ಮಾಡಲಾಗಿದೆ.

ಉದಯವಾಣಿ ವರದಿ ಮಾಡಿತ್ತು

Advertisement

2019-20 ಹಾಗೂ 2020-21ನೇ ಸಾಲಿನಲ್ಲಿ ಆಯ್ಕೆಯಾದ ಗ್ರಾಮ ಪಂಚಾಯಿತಿಗಳಿಗೆ ಈವರೆಗೆ ಗಾಂಧಿ ಗ್ರಾಮ ಪುರಸ್ಕಾರ ನೀಡಿಲ್ಲ. ಪ್ರಸಕ್ತ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗ್ರಾ.ಪಂ.ಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಇಲ್ಲಿವರೆಗೆ ಆರಂಭಿಸಿಲ್ಲ ಎಂದು ಸೆ.11ರಂದು “ಉದಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಈ ವಿಷಯವನ್ನು ವಿಧಾನಪರಿಷತ್‌ ಸದಸ್ಯ ಮಂಜುನಾಥ್‌ ಭಂಡಾರಿ ಸೆ.12ರಂದು ಪ್ರಸ್ತಾಪಿಸಿದ್ದರು. 2020-21ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗ್ರಾಪಂಗಳನ್ನು ಆಯ್ಕೆ ಮಾಡುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೆ.15ರಂದು ತಿಳಿಸಿದ್ದರು. ಇದೀಗ ಪಟ್ಟಿ ಪ್ರಕಟಿಸಿ ಆದೇಶ ಹೊರಡಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next