Advertisement

ಕೊನೆಗೂ ಡಿಕೆಶಿ ಬೆನ್ನಿಗೆ ನಿಂತ ಕಾಂಗ್ರೆಸ್‌

06:30 AM Aug 07, 2017 | |

ಬೆಂಗಳೂರು: ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಬಳಿಕ ನಡೆದ ಪ್ರತಿಭಟನೆಗಳಿಂದ ದೂರವಿದ್ದು ಅಂತರ ಕಾಯ್ದುಕೊಂಡಿದ್ದ ಕಾಂಗ್ರೆಸ್‌ ನಾಯಕರು, ಇದೀಗ ಅವರ ಬೆನ್ನಿಗೆ ನಿಲ್ಲುವ ಪ್ರಯತ್ನ ಮಾಡಿದ್ದಾರೆ. ಆದಾಯ ತೆರಿಗೆ ದಾಳಿ ಬಳಿಕವೂ ಎದೆಗುಂದದೆ ತಮ್ಮ ರಾಜಕೀಯ ಚಟುವಟಿಕೆಗಳನ್ನು ಮುಂದುವರಿಸಿದ ಶಿವಕುಮಾರ್‌ಗೆ ಮತ್ತಷ್ಟು ಧೈರ್ಯ ಹೇಳುವ ಕೆಲಸಕ್ಕೆ ಕಾಂಗ್ರೆಸ್‌ ಮುಂದಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಸೇರಿ ಪಕ್ಷದ ಹಲವು ಮುಖಂಡರು ಭಾನುವಾರ ಶಿವಕುಮಾರ್‌ ಅವರ ಮನೆಗೆ ತೆರಳಿ ಸಮಾಲೋಚನೆ ನಡೆಸಿದ್ದಾರೆ.

Advertisement

ಅಲ್ಲದೆ, “ಆದಾಯ ತೆರಿಗೆ ಇಲಾಖೆ ದಾಳಿ ರಾಜಕೀಯ ಪ್ರೇರಿತ ಷಡ್ಯಂತ್ರವಾಗಿದ್ದು, ಇದನ್ನು ರಾಜಕೀಯವಾಗಿಯೇ ಎದುರಿಸಲು ಪಕ್ಷ ನಿಮ್ಮೊಂದಿಗಿದೆ. ಈ ವಿಚಾರದಲ್ಲಿ ಆಧೀರರಾಗುವ ಅಗತ್ಯವಿಲ್ಲ’ ಎಂದು ನಾಯಕರು ಡಿ.ಕೆ.ಶಿವ ಕುಮಾರ್‌ಗೆ ಸಾಂತ್ವನ ಹೇಳುವ ಕೆಲಸ ಮಾಡಿದ್ದಾರೆ.

ಇನ್ನೊಂದೆಡೆ ಆದಿ ಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ದೂರವಾಣಿ ಮೂಲಕ ಶಿವಕುಮಾರ್‌ ಅವರನ್ನು ಸಂಪರ್ಕಿಸಿ, ಐಟಿ ದಾಳಿಯಿಂದ ಭಯಪಡುವ ಅಗತ್ಯವಿಲ್ಲ. ಸಮಾಜ ನಿಮ್ಮೊಂದಿಗೆ ಇದೆ ಎಂಬ ಭರವಸೆ ನೀಡಿದ್ದಾರೆ. ಅಲ್ಲದೆ, ನಂಜಾವಧೂತ ಶ್ರೀಗಳು ಶಿವಕುಮಾರ್‌ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ.

ಮುಖಂಡರ ದಂಡು: ಭಾನುವಾರ ಬೆಳಗ್ಗಿನಿಂದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್ಕರ್‌, ಸಚಿವರಾದ ರೋಷನ್‌ ಬೇಗ್‌, ರಮೇಶ್‌ ಜಾರಕಿಹೊಳಿ, ಎಂ.ಬಿ.ಪಾಟೀಲ್‌, ಎ.ಮಂಜು, ಶಾಸಕ ಆರ್‌.ವಿ.ದೇವರಾಜ್‌, ಕಾಂಗ್ರೆಸ್‌ ಮುಖಂಡ ಜಿ.ಎ.ಬಾವ, ಬಿಬಿಎಂಪಿ ಮೇಯರ್‌ ಜಿ.ಪದ್ಮಾವತಿ ಸೇರಿ ಕಾಂಗ್ರೆಸ್‌ ಮುಖಂಡರ ದಂಡೇ ಶಿವಕುಮಾರ್‌ ಅವರ ನಿವಾಸಕ್ಕೆ ತೆರಳಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿತು.

ಪರಮೇಶ್ವರ್‌ ಅವರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಶಿವಕುಮಾರ್‌ ಜತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಈ
ವೇಳೆ, ಇತ್ತೀಚಿನ ರಾಜಕೀಯ ಬೆಳವಣಿಗೆಗಳು, ಆಪರೇಷನ್‌ ಕಮಲ ಭೀತಿಯಿಂದ ರಾಜ್ಯಕ್ಕೆ ಬಂದಿರುವ ಗುಜರಾತ್‌ ಶಾಸಕರಿಗೆ ರಕ್ಷಣೆ ನೀಡಿದ ಸಂದರ್ಭದಲ್ಲಿ ನಡೆದ ಐಟಿ ದಾಳಿ ಮತ್ತು ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರ, ಮುಂದಿನ ದಿನಗಳಲ್ಲಿ ಇದರ ವಿರುದಟಛಿ ಕಾಂಗ್ರೆಸ್‌ ಹೇಗೆ ತಿರುಗಿ ಬೀಳಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ಉಭಯ ನಾಯಕರು ಸಮಾಲೋಚನೆ ನಡೆಸಿದರು ಎನ್ನಲಾಗಿದೆ.

Advertisement

ಐಟಿ ದಾಳಿಗೆ ಸಂಬಂಧಿಸಿದಂತೆ ನನ್ನ ಸ್ನೇಹಿತರು, ಕುಟುಂಬದವರಿಂದ ಮಾಹಿತಿಗಳನ್ನು ಸಂಗ್ರಹಿಸಬೇಕಿದೆ.
ಅದಾದ ಬಳಿಕ ಎಲ್ಲದಕ್ಕೂ ಸೂಕ್ತ ಉತ್ತರ ಕೊಡುತ್ತೇನೆ. ಇನ್ನು ಈ ವಿಚಾರದಲ್ಲಿ ನಾನಾಗಿ ಹೈಕಮಾಂಡ್‌ ಬಳಿ ಹೋಗುವುದಿಲ್ಲ. ಅವರು ಕರೆದರೆ ಹೋಗಿ ಮಾಹಿತಿ ನೀಡುತ್ತೇನೆ.

– ಡಿ.ಕೆ.ಶಿವಕುಮಾರ್‌, ಇಂಧನ ಸಚಿವ

ಸಚಿವ ಡಿ.ಕೆ.ಶಿವಕುಮಾರ್‌ ಮೇಲಿನ ಐಟಿ ದಾಳಿಗೆ ಸಂಬಂಧಿಸಿದಂತೆ ಬಿಜೆಪಿಯವರು ಮಾಧ್ಯಮಗಳ ಮುಖಾಂತರ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅಮಿತ್‌ ಶಾ, ನರೇಂದ್ರ ಮೋದಿ ಅವರ ಕುತಂತ್ರ ಜನರಿಗೆ ಗೊತ್ತಾಗಿದೆ. ಬಿಜೆಪಿಯವರು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಮೋದಿಯವರ ಪರ ನಿಲ್ಲದಿದ್ದರೆ ಹೆದರಿಸುವ ಕೆಲಸ ನಡೆದಿದೆ. ದೇಶದಲ್ಲಿ ಗೂಂಡಾ ರಾಜ್ಯ ಸ್ಥಾಪನೆಯಾಗುತ್ತಿದೆ.
– ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಕಾರ್ಯಾಧ್ಯಕ್ಷ

ಡಿ.ಕೆ.ಶಿವಕುಮಾರ್‌ ಮೇಲಿನ ಐಟಿ ದಾಳಿ ರಾಜಕೀಯ ಪ್ರೇರಿತ ಕೃತ್ಯ. ಡಿಕೆಶಿ ಅವರು ಸಚಿವರಷ್ಟೇ ಅಲ್ಲ, ಉದ್ಯಮಿಯೂ ಹೌದು. ಉದ್ಯಮಿ ಎಂದ ಮೇಲೆ ವ್ಯವಹಾರವಿರುತ್ತದೆ ಮತ್ತು ಅದನ್ನು ಹೇಗೆ ನಿಭಾಯಿಸಬೇಕು ಎಂಬ ಬುದ್ಧಿವಂತಿಕೆಯೂ ಇರುತ್ತದೆ.
– ಜಿ.ಪದ್ಮಾವತಿ, ಬಿಬಿಎಂಪಿ ಮೇಯರ್‌

ಶಿವಕುಮಾರ್‌ ಅವರು ಏಕಾಏಕಿ ಈ ಮಟ್ಟಕ್ಕೆ ಬಂದವರಲ್ಲ. ಅದರ ಹಿಂದೆ ಸಾಕಷ್ಟು ಶ್ರಮವಿದೆ. ರಾಜಕೀಯವಾಗಿ ತಾವು
ಮೇಲೆ ಬರುವುದರ ಜತೆಗೆ ಅನೇಕರನ್ನು ಬೆಳೆಸಿದ್ದಾರೆ. ಅಂತವರ ವಿರುದ್ಧ ರಾಜಕೀಯವಾಗಿ ಷಡ್ಯಂತ್ರಗಳನ್ನು ನಡೆಸಿದರೆ ಅದನ್ನು ನಿಭಾಯಿಸುವ ಶಕ್ತಿ ಶಿವಕುಮಾರ್‌ಗೆ ಇದೆ. ಅವರೊಂದಿಗೆ ಕಾಂಗ್ರೆಸ್‌ ಪಕ್ಷವಿದೆ.

– ಲಕ್ಷ್ಮೀ ಹೆಬ್ಟಾಳ್ಕರ್‌,
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next