Advertisement

ShashiTharoor; ಕೊನೆಗೂ 400 ಪಾರ್…ಆದರೆ ಬೇರೆ ದೇಶದಲ್ಲಿ: ಬಿಜೆಪಿ ವಿರುದ್ದ ತರೂರ್ ವ್ಯಂಗ್ಯ

08:19 AM Jul 06, 2024 | Team Udayavani |

ಹೊಸದಿಲ್ಲಿ: ಬ್ರಿಟನ್‌ ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್‌ ಪಕ್ಷ ಭರ್ಜರಿ ಜಯ ಸಾಧಿಸಿದ ಬಳಿಕ ಕಾಂಗ್ರೆಸ್‌ ಹಿರಿಯ ನಾಯಕ ಶಶಿ ತರೂರ್ ಶುಕ್ರವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, “ಅಬ್ ಕಿ ಬಾರ್, 400 ಪಾರ್” ಎಂಬ ಮಾತು ಕೊನೆಗೂ ಮತ್ತೊಂದು ದೇಶದಲ್ಲಿ ನಡೆದಿದೆ ಎಂದು ಹೇಳಿದ್ದಾರೆ.

Advertisement

ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ನಾಯಕರು ಪಕ್ಷ 370ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದ್ದು, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದರು. ಹೀಗಾಗಿ ಅಬ್ ಕಿ ಬಾರ್ 400 ಪಾರ್ ಎಂಬ ಘೋಷವಾಕ್ಯವನ್ನು ಚುನಾವಣೆಯ ಉದ್ದಕ್ಕೂ ಹೇಳಿಕೊಂಡು ಬಂದಿದ್ದರು.

ಆದರೆ ಮತದಾನದಲ್ಲಿ ಬಿಜೆಪಿ 240 ಸ್ಥಾನಗಳನ್ನು ಗೆದ್ದು ಬಹುಮತದ ಕೊರತೆಯನ್ನು ಅನುಭವಿಸಿತು. ಎನ್‌ಡಿಎ 293 ಸ್ಥಾನಗಳೊಂದಿಗೆ ಜನಾದೇಶವನ್ನು ಪಡೆದುಕೊಂಡರೂ 400ರ ಗುರಿ ತಲುಪಲು ಸಾಧ್ಯವಾಗಲಿಲ್ಲ.

ಕಾಂಗ್ರೆಸ್ 99 ಸ್ಥಾನಗಳನ್ನು ಗಳಿಸಿದರೆ, ಇಂಡಿಯಾ ಬ್ಲಾಕ್ 234 ಸ್ಥಾನಗಳನ್ನು ಪಡೆದುಕೊಂಡಿತು. ಮತದಾನದ ನಂತರ, ಇಬ್ಬರು ಸ್ವತಂತ್ರ ಸಂಸದರು ಕಾಂಗ್ರೆಸ್‌ಗೆ ಬೆಂಬಲವನ್ನು ವಾಗ್ದಾನ ಮಾಡಿದರು. ಇದು ಇಂಡಿಯಾ ಬ್ಲಾಕ್‌ನ ಸಂಖ್ಯೆಯನ್ನು 236 ಕ್ಕೆ ಏರಿಸಿದೆ.

ಈ ಕುರಿತು ಶಶಿ ತರೂರ್ ಎಕ್ಸ್ ಪೋಸ್ಟ್‌ ಮಾಡಿದ್ದು “ಅಂತಿಮವಾಗಿ ‘ಅಬ್ ಕಿ ಬಾರ್ 400 ಪಾರ್’ ನಡೆದುದೆ – ಆದರೆ ಇನ್ನೊಂದು ದೇಶದಲ್ಲಿ!” ಎಂದು ಬಿಜೆಪಿಯನ್ನು ತಿವಿದಿದ್ದಾರೆ.

Advertisement

ಶುಕ್ರವಾರ, ಕೀರ್ ಸ್ಟಾರ್ಮರ್ ಯುಕೆಯ ಹೊಸ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ರಿಷಿ ಸುನಕ್ ನೇತೃತ್ವದ ಕನ್ಸರ್ವೇಟಿವ್‌ಗಳ 14 ವರ್ಷಗಳ ಬಳಿಕ ಅಧಿಕಾರ ಕಳೆದುಕೊಂಡಿತು.

650 ಸದಸ್ಯರ ಹೌಸ್ ಆಫ್ ಕಾಮನ್ಸ್‌ ನಲ್ಲಿ ಲೇಬರ್ ಪಕ್ಷವು 412 ಸ್ಥಾನಗಳನ್ನು ಪಡೆದುಕೊಂಡರೆ, ಕನ್ಸರ್ವೇಟಿವ್ ಪಕ್ಷ ಕೇವಲ 121 ಸ್ಥಾನಗಳನ್ನು ಗೆದ್ದಿದೆ. ಲೇಬರ್ ಪಕ್ಷವು 2019 ರ ಚುನಾವಣೆಗಿಂತ 211 ಸ್ಥಾನಗಳನ್ನು ಹೆಚ್ಚು ಪಡೆದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next