ಭಯಬೇಡ, ನಮಗೆ ಜವಾಬ್ದಾರಿ ಇದೆ. ನಿಮ್ಮ ಸುರಕ್ಷತೆಯ ಬಗ್ಗೆ ನಮಗೂ ಕಾಳಜಿ ಇದೆ. ಧೈರ್ಯವಾಗಿ ಚಿತ್ರ ಮಂದಿರಕ್ಕೆ ಬನ್ನಿ … ಇದು ಚಿತ್ರ ಮಂದಿರಗಳ ಒಕ್ಕೊರಲ ಮಾತು. ಇದಕ್ಕೆ ಕಾರಣ, ಚಿತ್ರ ಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನದಿಂದ ಕೊರೊನಾ ಹರಡುತ್ತದೆ ಎಂಬ ಕಾರಣ ನೀಡಿ ಸರ್ಕಾರ ಮತ್ತೆ ಶೇ 50 ಪ್ರವೇಶಾತಿ ಮಾಡಲು ಮುಂದಾಗಿರೋದು. ಚಿತ್ರರಂಗದ ಮನವಿ ಮೇರೆಗೆ ಏ.07ರವರೆಗೆ ಹೌಸ್ ಫುಲ್ ಪ್ರದರ್ಶನಕ್ಕೆ ಅವಕಾಶ ಕೊಟ್ಟಿದ್ದು, ಏ.08ರಿಂದ ಮತ್ತೆ ಶೇ 50 ಪ್ರವೇಶಾತಿ ಎಂದಿದೆ. ಆದರೆ, ಸರ್ಕಾ ರದ ಈ ನಿರ್ಧಾರ ಮತ್ತೆ ಚಿತ್ರರಂಗದ ಮಂದಿಗೆ ಅದರಲ್ಲೂ ಚಿತ್ರ ಮಂದಿರಗಳ ಬೇಸರಕ್ಕೆ ಕಾರಣವಾಗಿದ್ದು, ಶೇ 100ನ್ನೇ ಮುಂದುವರೆಸುವ ಒತ್ತಾಯ ಕೇಳಿಬಂದಿದೆ. ಅಷ್ಟಕ್ಕೂ ಸರ್ಕಾರದ ವಾದವೇನೆಂದರೆ ತುಂಬಿದ ಗೃಹಗಳಿಂದ ಸಿನಿಮಾ ಪ್ರದರ್ಶನವಾದರೆ ಕೊರೊನಾ ಹರಡುವ ಸಾಧ್ಯತೆ ಹೆಚ್ಚು ಎಂಬುದು.
ಆದರೆ, ಚಿತ್ರ ಮಂದಿರಗಳ ಮಾಲೀಕರು ಮಾತ್ರ ಈ ಮಾತನ್ನು ಒಪ್ಪುತ್ತಿಲ್ಲ. ಏಕೆಂದರೆ ಚಿತ್ರ ಮಂದಿರಗಳನ್ನು ಕೊರೊನಾ ಮುಕ್ತವಾಗಿಸಲು ಏನೆಲ್ಲಾ ಕ್ರಮ ಕೈಗೊಳ್ಳಬೇಕೋ, ಅವೆಲ್ಲವನ್ನು ಕೈಗೊಳ್ಳುತ್ತಿವೆ. ಪ್ರತಿ ಪ್ರದರ್ಶನದ ಬಳಿಕ ಸಿನಿಮಾ ಹಾಲ್ ಅನ್ನು ಸ್ಯಾನಿಟೈಸ್ ಮಾಡುವ ಜೊತೆಗೆ ಮಾಸ್ಕ್ ಇಲ್ಲದವರಿಗೆ ಟಿಕೆಟ್ ನೀಡುತ್ತಿಲ್ಲ. ಜೊತೆಗೆ ಸಾಧ್ಯವಾದಷ್ಟು ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಹೀಗೆ ಮುಂಜಾಗ್ರತಾ ಕ್ರಮದೊಂದಿಗೆ ಸಿನಿಮಾ ಪ್ರದರ್ಶನ ಮಾಡಲು ಚಿತ್ರ ಮಂದಿರಗಳ ಮಾಲೀಕರು ಸಿದ್ಧರಿದ್ದಾರೆ.
ಸಿನಿಮಾ ಮೂಡ್ ಹಾಳಾಗುತ್ತೆ: ಶೇಕಡಾ ನೂರು ಪ್ರವೇಶಾತಿ ನೀಡಿದ ಕೂಡಲೇ ಇಡೀ ಚಿತ್ರ ಮಂದಿರ ತುಂಬಿ ತುಳುಕುತ್ತದೆ ಎಂದಲ್ಲ. ಆದರೆ, ಸಿನಿಮಾ ನೋಡಲು ಪ್ರೇಕ್ಷಕರಿಗೊಂದು ಮೂಡ್ ಬೇಕು. ತುಂಬಿದ ಗೃಹದ ಪ್ರದರ್ಶನ ಎಂಬ ಪದವೇ ಕೇಳಲು ತುಂಬಾ ಆಕರ್ಷಕ. ಆದರೆ, ಶೇ 50 ಪ್ರವೇಶಾತಿ ಎಂದರೆ ಅಲ್ಲಿಗೆ ಸಿನಿಮಾ ಪ್ರೇಮಿಯ ಮೂಡ್ ಬದಲಾಗುತ್ತದೆ. ಸಣ್ಣದೊಂದು ಭಯ ಆವರಿಸಿಕೊಳ್ಳುತ್ತದೆ. ಇದು ನೇರವಾಗಿ ಚಿತ್ರ ಮಂದಿರಗಳ ಮೇಲೆ ಪರಿಣಾಮ ಬೀರುತ್ತದೆ. ಸಿನಿಮಾ ಬಿಡುಗಡೆ ಅನ್ನೋದು ಒಂದು ಸರ್ಕಲ್ ಇದ್ದಂತೆ. ಒಮ್ಮೆ ಪ್ರೇಕ್ಷಕನ ಮೂಡ್ ಹಾಳಾದರೆ, ಅದು ಚಿತ್ರ ಮಂದಿರಗಳ ಮೇಲೆ ಪರಿಣಾಮ ಬೀರುತ್ತದೆ, ಅಲ್ಲಿಂದ ವಿತರಕನ ಮೇಲೆ, ವಿತರಕನಿಂದ ನಿರ್ಮಾಪಕನಿಗೆ, ನಿರ್ಮಾಪಕನಿಂದ ಹೀರೋ ಹಾಗೂ ಇತರ ಕಲಾವಿದರಿಗೆ…ಹೀಗೆ ಒಂದು ಸರ್ಕಲ್‌ಗೆ ತೊಂದರೆಯಾಗುತ್ತದೆ. ಅದೇ ಕಾರಣದಿಂದ ಚಿತ್ರ ಮಂದಿರಗಳು ಮಾತ್ರ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿವೆ.
ತಾವು ವಹಿಸುತ್ತಿರುವ ಮುನ್ನೆಚ್ಚರಿಕೆಯ ಬಗ್ಗೆ ಮಾತನಾಡುವ ಮೈಸೂರಿನ ಡಿಆರ್‌ಸಿ ಚಿತ್ರ ಮಂದಿರದ ಚೇತನ್, “ನಾವು ಮಾಸ್ಕ್ ಇಲ್ಲದೇ ಯಾರನ್ನೂ ಒಳಗೆ ಬೀಡೋದಿಲ್ಲ. ಜೊತೆಗೆ ಹ್ಯಾಂಡ್ ಸ್ಯಾನಿಟೈಸ್ ಇಟ್ಟಿದ್ದೇವೆ. ನಮ್ಮಲ್ಲಿ ದಿನಕ್ಕೆ 20 ಶೋ ನಡೆಯುತ್ತವೆ. ಪ್ರತಿ ಶೋ ಆದ ಬಳಿಕವೂ ನಾವು ಸಿನಿಮಾ ಹಾಲ್ ಅನ್ನು ಸ್ಯಾನಿಟೈಸ್ ಮಾಡುತ್ತೇವೆ. ಅದಕ್ಕಾಗಿ ಹೌಸ್ ಕೀಪಿಂಗ್ ನಲ್ಲಿ ಹೆಚ್ಚಿನ ಕೆಲಸಗಾರರನ್ನು ನೇಮಿಸಿದ್ದೇವೆ’ ಎನ್ನುತ್ತಾರೆ.
ಇದು ಕೇವಲ ಡಿಆ ರ್‌ಸಿ ಚಿತ್ರ ಮಂದಿರವೊಂದರ ಮಾತಲ್ಲ, ರಾಜ್ಯದ ಎಲ್ಲಾ ಚಿತ್ರಮಂದಿರಗಳು ಇದೇ ಮುನ್ನೆಚ್ಚರಿಕೆಯೊಂದಿಗೆ ಕಾರ್ಯ ನಿರ್ವಹಿಸುತ್ತಿವೆ. ಹುಬ್ಬಳ್ಳಿ, ದಾವಣಗೆರೆ, ಗುಲ್ಬರ್ಗ, ಗದಗ, ಶಿವಮೊಗ್ಗ, ಮಂಗಳೂರು… ಹೀಗೆ ಪ್ರತಿ ಚಿತ್ರ ಮಂದಿರಗಳು ಕೊರೊನಾ ಮುಕ್ತ ವಾತಾವರಣ ನಿರ್ಮಿಸಲು ಮುಂದಾಗಿವೆ ಮತ್ತು ಆ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿವೆ.
ಮಾಸ್ಕ್ ಇಲ್ಲದವರಿಗೆ ಟಿಕೇಟ್ ಇಲ್ಲ
ಮಾಸ್ಕ್ ಇಲ್ಲದವರಿಗೆ ಟಿಕೆಟ್ ಕೊಡೋದಿಲ್ಲ. ಜೊತೆಗೆ ಪ್ರತಿ ಶೊ ಬಳಿಕ ಸ್ಯಾನಿಟೈಸ್ ಮಾಡುತ್ತೇವೆ. ಹ್ಯಾಂಡ್‌ಸ್ಯಾನಿಟೈಸ್ ಮೆಷಿನ್ ಅಳವಡಿಸಿದ್ದೇವೆ. ಪ್ರೇಕ್ಷಕರು ಕೊರೊನಾ ಮುಕ್ತರಾಗಿ ಸಿನಿಮಾ ನೋಡಲು ಮೊದಲ ಆದ್ಯತೆ ನೀಡುತ್ತಿದ್ದೇವೆ.
- ವ್ಯವಸ್ಥಾಪಕರು, ಸಂತೋಷ್ ಚಿತ್ರ ಮಂದಿರ, ಕೆ.ಜಿ. ರಸ್ತೆ
ಆನ್‌ಲೈನ್ ಟಿಕೇಟ್‌ಗೆ ಆದ್ಯತೆ
ಕೋವಿಡ್ ಲಾಕ್‌ಡೌನ್ ನಂತರ ಥಿಯೇಟರ್ ಓಪನ್ ಆದಾಗಿನಿಂದ ಇಲ್ಲಿಯವರೆಗೂ, ಪ್ರೇಕ್ಷಕರ ಹಿತದೃಷ್ಟಿಯಿಂದ ಆದಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ. ಆಡಿಯನ್ಸ್‌ನ ಥರ್ಮಲ್ ಸ್ಕ್ರೀನಿಂಗ್ ಮೂಲಕ ತಪಾಸಣೆ ಮಾಡಿ ಥಿಯೇಟರ್ ಒಳಗೆ ಬಿಡುತ್ತಿದ್ದೇವೆ. ಪ್ರತಿ ಶೋದಲ್ಲೂ ಎರಡು ಇಂಟರ್‌ವಲ್ ನೀಡಲಾಗುತ್ತಿದ್ದು, ಶೋ ಮುಗಿದ ಬಳಿಕ ಸ್ಯಾನಿಟೈಸ್ ಮಾಡಲಾಗುತ್ತಿದೆ. ಮಾಸ್ಕ್ ಧರಿಸದಿದ್ದರೆ ಥಿಯೇಟರ್‌ನಲ್ಲಿ ಪ್ರವೇಶ ನೀಡುವುದಿಲ್ಲ. ಆದಷ್ಟು ಆನ್ ಲೈನ್ ಟಿಕೇಟ್ ಬುಕ್ಕಿಂಗ್‌ಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಕೋವಿಡ್ ಕುರಿತು ನಾವೂ ಜನಜಾಗೃತಿ ಮೂಡಿಸುತ್ತಿದ್ದೇವೆ.
ನರಸಿಂಹಲು, ಮಾಲೀಕರು, ವೈಭವಿ ಮತ್ತು ವೈಷ್ಣವಿ ಥಿಯೇಟರ್ ಮಾಲೀಕರು
ಗೈಡ್ ಲೈನ್ಸ್ ಫಾಲೋ ಮಾಡ್ತೀವಿ
ಕೋವಿಡ್ ಭಯ ಎಲ್ಲ ಕಡೆ ಇರುವುದರಿಂದ ನಾವು ಕೂಡ ಬೇರೆ ದಾರಿಯಿಲ್ಲದೆ ಸರ್ಕಾರದ ಗೈಡ್ ಲೈನ್ಸ್ ಫಾಲೋ ಮಾಡಬೇಕಾಗುತ್ತದೆ. ಲಾಕ್‌ಡೌನ್ ತೆರೆವಾದ ನಂತರ ನಾವು ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಸರ್ಕಾರದ ಗೈಡ್ ಲೈನ್ಸ್ ಪ್ರಕಾರವೇ ಪ್ರೇಕ್ಷಕರ ಪ್ರವೇಶಾತಿ ನೀಡಲಾಗುತ್ತಿದೆ. ಸ್ಟಾರ್ ಸಿನಿಮಾಗಳು ರಿಲೀಸ್ ಆದಾಗ, ವೀಕೆಂಡ್‌ನಲ್ಲಿ ಥಿಯೇಟರ್‌ನವರಿಗೆ ಪ್ರೇಕ್ಷಕರ ನಿರ್ವಹಣೆ ಸ್ವಲ್ಪ ಕಷ್ಟವಾಗುತ್ತದೆ. ಆದರೆ, ಪ್ರೇಕ್ಷಕರು ಕೂಡ ನಮಗೆ ಸಹಕರಿಸುತ್ತಿದ್ದಾರೆ. ಪ್ರೇಕ್ಷಕರ ಸುರಕ್ಷತೆಗೆ ಏನು ಮಾಡಬೇಕೋ, ಅದೆಲ್ಲವನ್ನೂ ಮಾಡಿದ್ದೇವೆ. ಪ್ರೇಕ್ಷಕರು ಕೂಡ ಅವರ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು ಬಂದು ಸಿನಿಮಾ ನೋಡುತ್ತಿದ್ದಾರೆ.
- ಓದುಗೌಡರ್, ಅಧ್ಯಕ್ಷರು, ಉತ್ತರ ಕರ್ನಾಟಕ ಪ್ರದರ್ಶಕರ ಮಹಾಮಂಡಳ
ಅಗತ್ಯ ಸುರಕ್ಷತಾ ಕ್ರಮ ಇದೆ
ಜನ ಸಿನಿಮಾಗಳಿಗೆ ಬರಲು ಹಿಂದೇಟು ಹಾಕುತ್ತಿರುವ ಈ ಸಂದರ್ಭದಲ್ಲಿ ಮತ್ತೆ ಸರ್ಕಾರ ಶೇ 50 ಮಾಡಿದರೆ ಚಿತ್ರ ಮಂದಿರ ನಡೆ ಸೋದು ಕಷ್ಟ. ನಮಗೂ ಪ್ರೇಕ್ಷಕರ ಬಗ್ಗೆ ಕಾಳಜಿ ಇದೆ. ಮಾಸ್ಕ್, ಸ್ಯಾನಿಟೈಸ್, ಕ್ಲೀನಿಂಗ್, ಥರ್ಮ ಲ್ ಸ್ಕ್ರೀನಿಂಗ್… ಹೀಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದೇವೆ.
- ಯಾದವ್, ನರ್ತಕಿ ಚಿತ್ರ ಮಂದಿರ, ಕೆ.ಜಿ. ರಸ್ತೆ