Advertisement

ಬೆಂಗಳೂರು ಕಾರ್ಯಕ್ರಮ ರದ್ದುಮಾಡಿ ಕುತ್ತಾರು ಕೊರಗಜ್ಜಕ್ಷೇತ್ರದಲ್ಲಿ ಮುಹೂರ್ತಮಾಡಿದ ಚಿತ್ರತಂಡ

06:11 PM Jun 10, 2023 | Team Udayavani |

ಉಳ್ಳಾಲ: ಬೆಂಗಳೂರಿನಲ್ಲಿ ಚಿತ್ರದ ಮುಹೂರ್ತಕ್ಕೆ ದಿನ ನಿಗದಿಯಾದರೂ, ಚಿತ್ರತಂಡದ ಪ್ರಮುಖರಿಗೆ ಅನಾರೋಗ್ಯ ಕಾಡಿದ ಬೆನ್ನಲ್ಲೇ ತಂಡ ತಾನು ಹರಕೆ ಹೊತ್ತಿದ್ದ ಕುತ್ತಾರು ಆದಿಸ್ಥಳ ಶ್ರೀರಕ್ತೇಶ್ವರಿ ಬೆರ್ಮೆರ್ ಎಳ್ವೆರ್ ಸಿರಿಗಳು ಕೊರಗಜ್ಜ ಕ್ಷೇತ್ರದಲ್ಲಿ ಮುಹೂರ್ತವನ್ನು ಇಂದು ನಡೆಸಿದೆ.

Advertisement

ಹಾರಿಝಾನ್ ಸ್ಟುಡಿಯೋ ಸಂಸ್ಥೆ ನಿರ್ಮಿಸುತ್ತಿರುವ ಇನ್ನೂ ನಾಮಕರಣವಾಗದ ಪ್ರೊಡಕ್ಷನ್ ನಂ-2 ಚಿತ್ರದ ಮುಹೂರ್ತ ಇಂದು ಕುತ್ತಾರಿನಲ್ಲಿ ನಡೆಯಿತು. ಚಿತ್ರದ ನಿರ್ದೇಶಕರು ಹಾಗೂ ತಾಂತ್ರಿಕ ತಂಡ ಇಂದು ಸ್ವಾಮಿ ಕೊರಗಜ್ಜ ಗುಡಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ತೆಂಗಿನ ಕಾಯಿ ಒಡೆದು ಚಿತ್ರ ಶೂಟಿಂಗ್ ನ ಮುಹೂರ್ತ ಹಾಗೂ ಕ್ಲ್ಯಾಪಿಂಗ್ ನಡೆಸಿತು.

ಕೆಲ ದಿನಗಳ ಹಿಂದೆ ಸ್ಯಾಂಡಲ್ ವುಡ್ ಖ್ಯಾತ ನಟಿ ರಾಗಿಣಿ ದ್ವಿವೇದಿ ಸೇರಿದಂತೆ, ನಿರ್ದೇಶಕರು ಹಾಗೂ ನಿರ್ಮಾಪಕರು ಇದೇ ಕ್ಷೇತ್ರದ ಸಂದರ್ಶನಕ್ಕೆ ಬಂದಿದ್ದಾಗ ಚಿತ್ರ ಮಾಡುವ ಸಂದರ್ಭ ಮುಹೂರ್ತವನ್ನು ಕೊರಗಜ್ಜನ ಬಳಿಯೇ ನಡೆಸುವುದಾಗಿ ಹರಕೆ ಹೊತ್ತಿದ್ದರು. ಆದರೆ ಚಿತ್ರತಂಡದವರಿಗೆ ಮಂಗಳೂರಿಗೆ ಬರುವುದು ಕಷ್ಟ ಅಂದನಿಸಿದಾಗ, ಬೆಂಗಳೂರಿನಲ್ಲಿಯೇ ಚಿತ್ರದ ಮುಹೂರ್ತ ನಡೆಸುವುದಾಗಿ ತೀರ್ಮಾನಿಸಿ, ದಿನವನ್ನು ನಿಗದಿಪಡಿಸಿತ್ತು. ಆದರೆ ಅದೇ ದಿನ ತಂಡದಲ್ಲಿರುವ ಪ್ರಮುಖರಿಗೆ ಅನಾರೋಗ್ಯ ಉಂಟಾಗಿ ಮುಹೂರ್ತ ನಡೆಸಲು ಸಾಧ್ಯವಾಗಿರಲಿಲ್ಲ. ಇದರಿಂದ ತಂಡ ವಿಮರ್ಶೆ ನಡೆಸಿ ಹಿಂದೆ ಹೊತ್ತ ಹರಕೆಯಂತೆ  ಕುತ್ತಾರು ಕೊರಗಜ್ಜನ ಸಮ್ಮುಖದಲ್ಲೇ ಮುಹೂರ್ತ ನಡೆಸುವುದಾಗಿ ತೀರ್ಮಾನಿಸಿ ಇಂದು  ನಿರ್ದೇಶಕರು ಹಾಗು ತಾಂತ್ರಿಕ ತಂಡ ಸಾಂಕೇತಿಕವಾಗಿ  ಮುಹೂರ್ತವನ್ನು ನಡೆಸಿತು.

ಬಾಲಿವುಡ್‍ನ ಲೆಜೆಂಡರಿ ಶೇಖರ್ ಸುಮನ್ ಅವರ ಪುತ್ರ ಆಧ್ಯಾನ್ ಸುಮನ್ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಲಿದ್ದು, ಕನ್ನಡದ ಖ್ಯಾತ ನಟಿ ರಾಗಿಣಿ ದ್ವಿವೇದಿ ನಾಯಕಿಯಾಗಿ, ಖ್ಯಾತ ನಟ ದಿ| ಕಾಶಿನಾಥ್ ಅವರ ಪುತ್ರ ಅಭಿಮನ್ಯು ಕಾಶಿನಾಥ್ ಪ್ರಮುಖ ಪಾತ್ರದಲ್ಲಿ ಇರಲಿದ್ದಾರೆ.

Advertisement

ಮಹಾಂತೇಶ್ ಹಿರೇಮಠ್, ವಿಜಯ್ ಚಂದು, ಸಾಯಿಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಲಿದ್ದಾರೆ. ತಾಂತ್ರಿಕ ವಿಭಾಗದಲ್ಲಿ ಈಗಾಗಲೇ ಕನ್ನಡದಲ್ಲಿ 13 ಸಿನೆಮಾ ಹಾಗೂ ತೆಲುಗುವಿನಲ್ಲಿ ಒಂದು ಸಿನೆಮಾ ಮಾಡಿರುವ ಚಂದ್ರಶೇಖರ್ ಕೆ.ಎಸ್ ಕ್ಯಾಮರಾಮೆನ್ ಆಗಿದ್ದಾರೆ. ಸಂಗೀತ ನಿರ್ದೇಶಕರಾಗಿ ಶ್ರೀಧರ್ ಕಶ್ಯಪ್, ಎಡಿಟರ್ ಆಗಿ ಎನ್ .ಎಂ ವಿಶ್ವ, ಡೈಲಾಗ್ ರೈಟರ್ ಆಗಿ ಹರೀಶ್ ಶೃಂಗ, ರಾಘವೇಂದ್ರ ನಾಯಕ್ ಸ್ಕ್ರೀನ್ ಪ್ಲೇ  ಮಾಡುತ್ತಿದ್ದು, ಟೋನಿ ಎ ರಾಜ್  ಸಂಸ್ಥೆಯ ನಿರ್ಮಾಪಕರಾಗಿದ್ದಾರೆ.

ದೈವಲೀಲೆಯಂತೆ ಮುಹೂರ್ತ ನೆರವೇರಿಸಿದ್ದೇವೆ: ಹಿಂದೆಯೇ ಮುಹೂರ್ತದ ದಿನ ನಿಗದಿ ಮಾಡಲಾಗಿತ್ತು. ಆದರೆ ದೈವಲೀಲೆ, ಕೆಲವು ಅಡೆತಡೆಗಳಿಂದ ಅಂದು ನೆರವೇರಿಸಲು ಸಾಧ್ಯವಾಗಲಿಲ್ಲ. ತಂಡದ ಪ್ರಮುಖರಿಗೆ ಅನಾರೋಗ್ಯದ ಸಮಸ್ಯೆ ಇದ್ದುದರಿಂದ ಇಂದು ಕೂಡ ಪ್ರಯಾಣ ಅಸಾಧ್ಯವಾಗಿದೆ. ನಟಿ ರಾಗಿಣಿ ದ್ವಿವೇದಿ ಶೂಟಿಂಗ್ ಇರುವುದರಿಂದ ಬರಲು ಅನಾನುಕೂಲವಾಗಿದೆ. ಹೈದರಾಬಾದಿನಲ್ಲಿ ತೆಲುಗು ಅನೌನ್ಸ್  ಈಗಾಗಲೇ ನಡೆದಿದೆ. ಇದೀಗ ಕನ್ನಡದಲ್ಲಿ ಆಗಿದೆ, ಮುಂದೆ ಚೆನ್ನೈ, ಮುಂಬೈನಲ್ಲಿ ಮುಂದಿನ ದಿನಗಳಲ್ಲಿ ಆಗಲಿದೆ. ಹಾರಿಝಾನ್ ಸ್ಟುಡಿಯೋ ಸಂಸ್ಥೆ ಬ್ಯಾನರಿನಡಿ ಪ್ಯಾನ್ ಇಂಡಿಯಾ ಸಿನಿಮಾ, ಪ್ರಾಡಕ್ಷನ್ ನಂ-2 ಇನ್ನೂ ನಾಮಕರಣವಾಗದ ಚಿತ್ರ ನಾಲ್ಕು ಭಾಷೆಗಳಲ್ಲಿ ಮೂಡಿಬರಲಿದೆ.

ಮೂರು ತಿಂಗಳ ಹಿಂದೆ ಕುತ್ತಾರು ಕ್ಷೇತ್ರದಲ್ಲಿ ಹರಕೆ ಹೊತ್ತ ಪ್ರಕಾರ ಮೊದಲನೇ ಮುಹೂರ್ತ ಕೊರಗಜ್ಜನ ಕ್ಷೇತ್ರದಲ್ಲಿ ನಡೆದಿದೆ. ಮಾತುಕೊಟ್ಟ ರೀತಿಯಲ್ಲಿ ಮೊದಲ ಶೂಟಿಂಗ್ ಆರಂಭಿಸಲಾಗಿದೆ. 15 ದಿನಗಳಲ್ಲಿ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಚಿತ್ರದ ಟೈಟಲ್ ಲಾಂಚಿಂಗ್ ನಡೆಯಲಿದೆ. ಕ್ರೈಂ ಥಿಲ್ಲರ್ ಸಿನೆಮಾವಾಗಿದೆ ಎಂದು ನಿರ್ದೇಶಕ ಆರ್ಯನ್ ಮಾಧ್ಯಮಗಳಿಗೆ ತಿಳಿಸಿದರು.

ಈ ಸಂದರ್ಭ ನಿರ್ದೇಶಕ ಆರ್ಯನ್, ನಿರ್ಮಾಪಕ ಟೋನಿ ಎ ರಾಜ್,  ಕ್ಯಾಮರಾಮೆನ್ ಚಂದ್ರಶೇಖರ್ ಕೆ.ಎಸ್, ಎಡಿಟರ್ ಎನ್.ಎಂ ವಿಶ್ವ, ಮ್ಯಾನ್ ಲಿಯೋ ಕ್ರಿಯೇಷನ್ಸ್ ನ  ದಿವಾಕರ್, ಶ್ರೀಧರ್ ಕಶ್ಯಪ್, ಅರವಿಂದ್ ದತ್ತಾ  ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next