Advertisement

ಚಿತ್ರ ವಿಮರ್ಶೆ: ‘ಕಾಂತಾರ’ಹಂದರ ಬಲು ಸುಂದರ

09:27 AM Oct 01, 2022 | Team Udayavani |

ದಟ್ಟ ಕಾನನದ ಮಧ್ಯದ ಊರು, ಅಲ್ಲಿನ ಮುಗ್ಧ ಜನ, ಅವರನ್ನು ಕಾಯುವ ಪಂಜುರ್ಲಿ, ಗುಳಿಗ ದೈವ, ಆ ದೈವಗಳ ಕೋಲ, ನೇಮದ ಸಂಭ್ರಮ, ಇದರ ನಡುವೆಯೇ ಅರಣ್ಯ ಇಲಾಖೆ ಜೊತೆಗಿನ ಕಿತ್ತಾಟ… ಇಷ್ಟು ಅಂಶಗಳನ್ನಿಟ್ಟುಕೊಂಡು ನಿರ್ದೇಶಕ ರಿಷಭ್‌ ಶೆಟ್ಟಿ ಒಂದು ಅದ್ಭುತ ಜಗತ್ತನ್ನು “ಕಾಂತಾರ’ದಲ್ಲಿ ಕಟ್ಟಿಕೊಟ್ಟಿದ್ದಾರೆ. ಆ ಮಟ್ಟಿಗೆ “ಕಾಂತಾರ’ ಕರಾವಳಿಯ ಸೊಗಡನ್ನು ಸಾರುತ್ತಲೇ ಪ್ರೇಕ್ಷಕರಿಗೆ ಆಪ್ತವಾಗುವ ಸಿನಿಮಾ.

Advertisement

ಪರಭಾಷೆಯಲ್ಲಿ ನೇಟಿವಿಟಿ ಸಿನಿಮಾಗಳನ್ನು ಅದ್ಭುತವಾಗಿ ಕಟ್ಟಿಕೊಡುತ್ತಾರೆ, ನಮ್ಮ ಕನ್ನಡದಲ್ಲಿ ಯಾಕೆ ಆ ತರಹದ ಪ್ರಯತ್ನ ಮಾಡಲ್ಲ ಎಂದು ಆಗಾಗ ಕನ್ನಡ ಸಿನಿಮಾಗಳನ್ನು ಕುಟುಕುವವರಿಗೆ ಖಡಕ್‌ ಉತ್ತರ ನೀಡುವ ಸಿನಿಮಾ “ಕಾಂತಾರ’. ರಿಷಭ್‌ ಈ ಬಾರಿ “ಕಾಂತಾರ’ದಲ್ಲಿ ಆಯ್ಕೆ ಮಾಡಿಕೊಂಡಿರೋದು ಕರಾವಳಿ ಸಂಸ್ಕೃತಿಗಳಲ್ಲೊಂದಾದ ಭೂತಾರಾಧನೆ. ಭೂತಕೋಲ, ನೇಮ ಕರಾವಳಿ ಜನರ ಭಾವನೆಗಳಲ್ಲಿ ಇಂದಿಗೂ ಹಾಸು ಹೊಕ್ಕಾಗಿದೆ. ತಮ್ಮ ಜಮೀನನ್ನು, ಕುಟುಂಬವನ್ನು ದೈವ ಕಾಯುತ್ತದೆ ಎಂಬ ನಂಬಿಕೆಯೊಂದಿಗೆ ವರ್ಷಂಪ್ರತಿ ವಿಜೃಂಬಣೆಯಿಂದ ನಂಬಿದ ದೈವಕ್ಕೆ ನೇಮ, ಕೋಲ ನೀಡುತ್ತಾರೆ. ಇಂತಹ ಒಂದು ಸೂಕ್ಷ್ಮ ವಿಚಾರವನ್ನು ರಿಷಭ್‌ “ಕಾಂತಾರ’ದಲ್ಲಿ ಹೇಳಿದ್ದಾರೆ. ಹಾಗಂತ ಇದು ಭೂತ, ದೈವದ ಕುರಿತ ಡಾಕ್ಯುಮೆಂಟರಿಯಲ್ಲ. ಆ ಅರಿವು ರಿಷಭ್‌ಗೆ ಚೆನ್ನಾಗಿಯೇ ಇದ್ದಿದ್ದರಿಂದಲೇ ಭೂತಾರಾಧನೆಯನ್ನು ಮೂಲವಾಗಿಟ್ಟುಕೊಂಡು ಉಳಿದಂತೆ ಅದರ ಸುತ್ತ ಹಲವು ಅಂಶಗಳನ್ನು ಹೇಳುತ್ತಾ ಹೋಗಿದ್ದಾರೆ. ಒಂದು ಕಮರ್ಷಿಯಲ್‌ ಸಿನಿಮಾವನ್ನು ಕಟ್ಟಿಕೊಡುವಾಗ ಏನೆಲ್ಲಾ ಅಂಶಗಳು ಮುಖ್ಯವಾಗುತ್ತವೋ, ಆ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ.  ಹಾಗಂತ ಅವ್ಯಾವುವು ರೆಗ್ಯುಲರ್‌ ಶೈಲಿಯಲ್ಲಿ ಇಲ್ಲ. ಅದೇ ಈ ಸಿನಿಮಾದ ಪ್ಲಸ್‌ ಪಾಯಿಂಟ್‌.

ಇಲ್ಲೊಂದು ಭೂತವಿದೆ, ಜೊತೆಗೊಬ್ಬ ಧಣಿ ಇದ್ದಾನೆ. ಆ ಭೂತ ಹಾಗೂ ಧಣಿ.. ಇಬ್ಬರಿಗೂ ಒಂದೊಂದು ಫ್ಲ್ಯಾಶ್‌ಬ್ಯಾಕ್‌ ಇದೆ. ಇಡೀ ಸಿನಿಮಾ ಆರಂಭವಾಗುವುದು ಹಾಗೂ ಸಿನಿಮಾದ ಮೂಲ ಹಂದರ ಕೂಡಾ ಇದೇ. ನಿರ್ದೇಶಕ ರಿಷಭ್‌ ಶೆಟ್ಟಿ ಸಿನಿಮಾವನ್ನು ಎಷ್ಟು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆಂದರೆ ಒಂದು ಕ್ಷಣವೂ ಪ್ರೇಕ್ಷಕ ಖಾಲಿ ಕೂರುವಂತಿಲ್ಲ. ಪ್ರತಿ ದೃಶ್ಯಗಳಲ್ಲೂ ಪ್ರೇಕ್ಷಕನನ್ನು ತನ್ನ ಜೊತೆ ಕುತೂಹಲದಿಂದ ಹೆಜ್ಜೆ ಹಾಕುವಂತೆ ಮಾಡಿದ್ದಾರೆ. ಇದೇ ಈ ಸಿನಿಮಾದ ನಿಜವಾದ ಗೆಲುವು ಎನ್ನಬಹುದು. ಕ್ಷಣ ಕ್ಷಣವೂ ಹೊಸದನ್ನು ತೆರೆದುಕೊಳ್ಳುತ್ತಾ, ಹಳೆಯದರ ಬಗ್ಗೆ ಕ್ಲಾéರಿಟಿ ಕೊಡುತ್ತಾ ಚಿತ್ರಮುಂದೆ ಸಾಗುತ್ತದೆ. ಅಷ್ಟರ ಮಟ್ಟಿಗೆ ರಿಷಭ್‌ ಪೂರ್ವತಯಾರಿ ಮಾಡಿಕೊಂಡಿದ್ದಾರೆ. ಮೊದಲೇ ಹೇಳಿದಂತೆ ಇದು ಕರಾವಳಿಯ ಕಥೆ. ಇಲ್ಲಿ ಭೂತದ ನೇಮ, ಅದರ ಆಚರಣೆ, ಭಂಡಾರ ಇಳಿಸಿಕೊಡುವ ಮನೆ, ಭೂತ ನರ್ತಕ, ಪಾಡªನ, ಕಂಬಳ… ಹಲವು ಅಂಶಗಳು ಬರುತ್ತವೆ. ಕರಾವಳಿ ಸಂಸ್ಕೃತಿಯ ಪರಿಚಯವಿದ್ದವರಿಗೆ ಈ ಚಿತ್ರ ಬೇಗನೇ ಕನೆಕ್ಟ್ ಆದರೆ, ಮಿಕ್ಕವರ ಕುತೂಹಲ ಹೆಚ್ಚಿಸುತ್ತಾ ಸಾಗುತ್ತದೆ.

ಇನ್ನು, ಚಿತ್ರದ ಮೇಕಿಂಗ್‌ ಬಗ್ಗೆ ಹೇಳುವುದಾದರೆ, ಕರಾವಳಿ ಸೊಗಡನ್ನು ತೋರಿಸಲು ಏನೆಲ್ಲಾ ಅಂಶಗಳು ಬೇಕೋ, ಅವೆಲ್ಲವನ್ನು ರಿಷಭ್‌ ಒಂದೇ ಸೂರಿನಡಿ ನೈಜವಾಗಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿ ಸಂಭಾಷಣೆ ಮಜಾ ಕೊಡುತ್ತದೆ. ಸಿನಿಮೇಟಿಕ್‌ ಎನಿಸದೇ ಸರಾಗವಾಗಿ ಸಾಗುವ ಸಂಭಾಷಣೆ ನಗೆ ಉಕ್ಕಿಸುತ್ತದೆ. ಚಿತ್ರದಲ್ಲಿ ಪ್ರಕೃತಿ ಹಾಗೂ ಮನುಷ್ಯನ ನಡುವಿನ ಸಂಘರ್ಷದ ಕಥೆ ಇದೆ. ಹಾಗಂತ ಅದನ್ನು ಅತಿಯಾಗಿ ಎಳೆದಾಡದೇ, ತುಂಬಾ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ.

“ಕಾಂತಾರ’ದ ಪ್ರಮುಖ ಹೈಲೈಟ್‌ ಎಂದರೆ ಅದು ಕ್ಲೈಮ್ಯಾಕ್ಸ್‌. ಸಿನಿಮಾದ ಕೊನೆಯ ಇಪ್ಪತ್ತು ನಿಮಿಷ ರಿಷಭ್‌ ಪ್ರೇಕ್ಷಕರನ್ನು ರೋಮಾಂಚನಗೊಳಿಸಿ ಸೀಟಿನಂಚಿನಲ್ಲಿ ಕೂರುವಂತೆ ಮಾಡುತ್ತಾರೆ. ಆರಂಭದಿಂದ ನೋಡಿಕೊಂಡು ಬಂದಿದ್ದು, ಒಂದು ತೂಕವಾದರೆ, ಕೊನೆಯ 20 ನಿಮಿಷ ಮತ್ತೂಂದು ತೂಕ. ಬಹುಶಃ ರಿಷಭ್‌ ಬಿಟ್ಟರೆ ಇದರಲ್ಲಿ ಮತ್ತೂಬ್ಬರನ್ನು ಊಹಿಸಿಕೊಳ್ಳೋದು ಕೂಡಾ ಕಷ್ಟ. ಇಡೀ ಸಿನಿಮಾವನ್ನು ಆವರಿಸಿಕೊಂಡಿರೋದು ರಿಷಭ್‌.

Advertisement

ನಿರ್ದೇಶಕರಾಗಿ ಅವರು ಎಷ್ಟು ನೀಟಾಗಿ ಸಿನಿಮಾ ಕಟ್ಟಿಕೊಟ್ಟಿದ್ದಾರೋ, ನಟರಾಗಿ ಮತ್ತೂಂದು ಆಯಾಮಕ್ಕೆ ತೆರೆದುಕೊಂಡಿದ್ದಾರೆ. ಆ ಮಟ್ಟಿನ ಫ‌ರ್‌ಫಾರ್ಮೆನ್ಸ್‌ ಮೂಲಕ ರಿಷಭ್‌ ಇಲ್ಲಿ ಆಪ್ತರಾಗುತ್ತಾರೆ. ಶಿವನ ಪಾತ್ರಕ್ಕೆ ಅವರು ತೆರೆದುಕೊಂಡಿರುವ ರೀತಿ, ನಡೆ-ನುಡಿ, ಬಾಡಿಲಾಂಗ್ವೆಜ್‌ ಎಲ್ಲವೂ ಸೂಪರ್‌. ಅದರಲ್ಲೂ ಕ್ಲೈಮ್ಯಾಕ್ಸ್‌ನಲ್ಲಂತೂ ರಿಷಭ್‌ ಇಡೀ ಸಿನಿಮಾನ್ನು ಮತ್ತೂಂದು ಲೆವೆಲ್‌ಗೆ ಕೊಂಡೊಯ್ಯಿದಿದ್ದಾರೆ. ನಾಯಕಿ ಸಪ್ತಮಿ ಕೂಡಾ ಇದ್ದಷ್ಟು ಹೊತ್ತು ಚೆಂದ. ಉಳಿದಂತೆ ಅಚ್ಯುತ್‌, ಕಿಶೋರ್‌, ಪ್ರಕಾಶ್‌ ತುಮಿನಾಡು ಸೇರಿದಂತೆ ಇತರರು “ಕಾಂತಾರ’ದ ಬೇರುಗಳು.

ಇನ್ನು, ರಿಷಭ್‌ ಕನಸಿಗೆ ಜೀವ ತುಂಬುವಲ್ಲಿ ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ಅವರ ಹಿನ್ನೆಲೆ ಸಂಗೀತ ಪ್ರಮುಖ ಪಾತ್ರ ವಹಿಸಿದೆ. ಕಥೆಯ ಆಶಯವನ್ನು ಅಜನೀಶ್‌ ಅರಿತಿದ್ದು ತೆರೆಮೇಲಿನ “ಸದ್ದ’ಲ್ಲಿ ಎದ್ದು ಕಾಣುತ್ತಿದೆ.

 ರವಿಪ್ರಕಾಶ್‌ ರೈ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next