ಪಣಜಿ: ಈ ಬಾರಿಯ ಚಿತ್ರೋತ್ಸವದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ವಾರ್ತಾ ಮತ್ತು ಪ್ರಸಾರ ಇಲಾಖೆ ಕಾರ್ಯದರ್ಶಿ ಅಪೂರ್ವ ಚಂದ್ರ ತಿಳಿಸಿದ್ದಾರೆ.
ಇಫಿ ಚಿತ್ರೋತ್ಸವದ ಕುರಿತಾದ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, “ಒಟ್ಟು ಹತ್ತು ಸಾವಿರಕ್ಕೂ ಹೆಚ್ಚು ಮಂದಿ ನೋಂದಾಯಿಸಿ ಭಾಗವಹಿಸಿದ್ದಾರೆ. ನಮ್ಮ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಬಂದ ಕಾರಣ ನವೆಂಬರ್ 21 ರ ಬಳಿಕ ನೋಂದಣಿಯನ್ನು ಸ್ಥಗಿತಗೊಳಿಸಲಾಯಿತುʼ ಎಂದು ಹೇಳಿದರು.
ಹತ್ತು ಸಾವಿರ ಮಂದಿ ಪ್ರತಿನಿಧಿಗಳ ಪೈಕಿ ಬಹುತೇಕ ಭಾರತದ ವಿವಿಧ ರಾಜ್ಯಗಳಿಂದ ಬಂದಿದ್ದಾರೆ. ಸುಮಾರು ೪೦ ಮಂದಿ ವಿದೇಶಿ ಪ್ರತಿನಿಧಿಗಳಿದ್ದು, ಅಮೆರಿಕ, ಬ್ರಿಟನ್, ದಕ್ಷಿಣ ಕೊರಿಯಾ ಇತ್ಯಾದಿ ದೇಶಗಳಿಂದ ಭಾಗವಹಿಸಿದ್ದಾರೆ ಎಂದು ವಿವರಿಸಿದರು.
ಈ ಬಾರಿ ಅಂತಾರಾಷ್ಟೀಯ ಸ್ಪರ್ಧೆಯ ಸಿನಿಮಾಗಳನ್ನು ನಗರದ ಮತ್ತೊಂದು ಭಾಗವಾದ ಪೂರ್ವರಿಯಂಗೆ ಏಕೆ ಹಾಕಿದ್ದೀರಿ? ಇದರಿಂದ ಸಿನಿಮಾಸಕ್ತರಿಗೆ ತೊಂದರೆಯಾಗಿದೆ ಎಂಬ ಪ್ರಶ್ನೆಗೆ, “ಈ ಬಾರಿ ಗಾಲಾ ಪ್ರೀಮಿಯರ್ ಪರಿಕಲ್ಪನೆಯನ್ನು ಜಾರಿಗೊಳಿಸಿದ್ದೇವೆ. ಇದಕ್ಕಾಗಿ ರೆಡ್ ಕಾರ್ಪೆಟ್ ಅಗತ್ಯವಿದೆ. ಪೂರ್ವರಿಯಂ ನಲ್ಲಿ ರೆಡ್ ಕಾರ್ಪೆಟ್ ಗೆ ಸೌಲಭ್ಯವಿಲ್ಲ. ಹಾಗಾಗಿ ನಾವು ಇಲ್ಲಿ (ಐನಾಕ್ಸ್) ಗಾಲಾ ಪ್ರೀಮಿಯರ್ ಗಳಿಗೆ ಅವಕಾಶ ಕಲ್ಪಿಸುವ ಸಲುವಾಗಿ ಆಂತಾರಾಷ್ಟ್ರೀಯ ಸ್ಪರ್ಧೆಯ ಸಿನಿಮಾಗಳನ್ನು ಸ್ಥಳಾಂತರಿಸಬೇಕಾಯಿತುʼ ಎಂದರು.
Related Articles
ಈ ವರ್ಷಕ್ಕೇ ಕಲಾ ಅಕಾಡೆಮಿ ದುರಸ್ತಿಗೊಳ್ಳುತ್ತದೆಂದು ನಿರೀಕ್ಷಿಸಿದ್ದೆವು. ಆದರೆ ಆಗಿಲ್ಲ. ಬಹುಶಃ ಶೀಘ್ರವೇ ಆಗಬಹುದು. ಕಲಾ ಅಕಾಡೆಮಿಯೂ ಲಭ್ಯವಾದರೆ ಈ ಸಮಸ್ಯೆ ಬಗೆಹರಿಯಬಹುದು ಎಂದರಲ್ಲದೇ, ರೆಡ್ ಕಾರ್ಪೆಟ್ ಗಾಗಿ ಆಗಾಗ್ಗೆ ಐನಾಕ್ಸ್ ಒಂದು ಮತ್ತು ಐನಾಕ್ಸ್ ಮೂರರ ನಡುವಿನ ರಸ್ತೆ ಮುಚ್ಚುವುದರ ಬಗ್ಗೆ ಗಮನಹರಿಸುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅತಿಥಿಗಳನ್ನು ಕೇಳುವವರೇ ಇಲ್ಲ !
ಈ ಬಾರಿ ಅತಿಥಿಗಳ ನಿರ್ವಹಣೆ ಕುರಿತು ಟೀಕೆಗಳು ಕೇಳಿಬರುತ್ತಲೇ ಇವೆ. ಬುಧವಾರವೂ ಅಂಥದ್ದೇ ಪ್ರಸಂಗಗಳು ನಡೆದವು. ಮೊದಲನೆಯದಾಗಿ ಉತ್ಸವದ ಮಿಡ್ ಫೆಸ್ಟ್ ಚಿತ್ರ ಫಿಕ್ಸೇಷನ್ ನ ನಿರ್ಮಾಪಕ ಮ್ಯಾಕ್ಸ್ ಟಾಪ್ಲಿನ್ ಚಿತ್ರೋತ್ಸವಕ್ಕೆ ಇಂದು ಆಗಮಿಸಿದರು. ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಆಗಿತ್ತಾದರೂ ಅವರಿಗೆ ನೀಡಲಾಗುವ ಐಡಿ ಕಾರ್ಡ್ ಲಭ್ಯವಿರಲಿಲ್ಲ. ಉಳಿದುಕೊಂಡ ಹೋಟೆಲ್ ನಲ್ಲೂ ಕೊಟ್ಟಿರಲಿಲ್ಲ.
ಆ ಬಳಿಕ ಇಫಿ ಕೌಂಟರ್ ನಲ್ಲಿ ಬಂದು ಕೇಳಿದರೆ ಸೂಕ್ತ ಮಾಹಿತಿ ಸಿಗಲಿಲ್ಲ. ಐಡಿ ಕಾರ್ಡ್ ಇಲ್ಲದೇ ಯಾರಿಗೂ ಒಳಗೆ ಪ್ರವೇಶವಿಲ್ಲ. ಇವರು ತಮ್ಮ ವಿವರವನ್ನು ನೀಡಿದರೂ ಪ್ರಯೋಜನವಾಗಲಿಲ್ಲ. ಒಂದು ಗಂಟೆಗೆ ಒಳಗೆ ಮೀಟಿಂಗ್ ನಲ್ಲಿ ಭಾಗವಹಿಸಬೇಕಿತ್ತು. ಆದರೆ 12. 50 ರವರೆಗೂ ಐಡಿಗೆ ಅಲೆದಾಡಬೇಕಾಯಿತು. ಅಂತಿಮವಾಗಿ ಮಾಧ್ಯಮವೊಂದರ ಪ್ರತಿನಿಧಿಯ ಸಹಾಯದಿಂದ ಐಡಿ ಪಡೆಯಲು ಸಾಕು ಬೇಕಾಯಿತು.
ಇದೇ ಅನುಭವ ಮತ್ತೊಬ್ಬ ನಿರ್ದೇಶಕಿಗೆ ಆಗಿದೆ. ಮೈ ಲವ್ ಅಫೇರ್ ವಿಥ್ ಮ್ಯಾರೇಜ್ ಆನಿಮೇಷನ್ ಸಿನಿಮಾದ ನಿರ್ದೇಶಕಿ ಸಿಗ್ಮೆ ಬೌಮಾನೆಯವರ ಚಿತ್ರವೂ ಪ್ರದರ್ಶನಗೊಳ್ಳಬೇಕಿತ್ತು. ಆದರೆ ಅವರಿಗೂ ಇದೇ ಸಮಸ್ಯೆ. ಎಲ್ಲೆಲ್ಲಿ ಅಲೆದರೂ ಅವರಿಂದ ಇವರಿಗೆ ಸಮಸ್ಯೆ ವರ್ಗಾವಣೆಯಾಗುತ್ತಿತ್ತೇ ಹೊರತು ಸಮಸ್ಯೆ ಬಗೆಹರಿಯಲಿಲ್ಲ. ಅಂತಿಮವಾಗಿ ಕಾಡಿ ಬೇಡಿ ಪಡೆದುಕೊಳ್ಳುವ ಸ್ಥಿತಿ ಬಂದಿತ್ತು ಎಂದು ಮಾಧ್ಯಮಗಳಿಗೆ ವಿವರಿಸಿದ್ದಾರೆ.