ನನ್ನ ಅಪ್ಪ, ಅಮ್ಮ ಇಬ್ಬರೂ ಶಿಕ್ಷಕರಾಗಿ ದ್ದರಿಂದ ವರ್ಣಮಾಲೆ ಕಲಿಸಿದ, ತಪ್ಪಿಲ್ಲದೆ ಮುದ್ದಾಗಿ ಬರೆಯುವುದನ್ನು ಹೇಳಿಕೊಟ್ಟ ಮೊದಲ ಗುರುಗಳು ಅವರೇ. ಮನೆಯೇ ನನ್ನ ಮೊದಲ ಪಾಠಶಾಲೆ. ನಮ್ಮ ನಾಗತಿಹಳ್ಳಿಯ ಪ್ರಾಥಮಿಕ ಶಾಲೆಗೆ ಮಾವಿನಕೆರೆಯಿಂದ ಬರುತ್ತಿದ್ದ ನಂಜುಂಡಯ್ಯ ಎಂಬ ಮೇಷ್ಟ್ರು ಪಾಠದ ನಡುವೆ ಪ್ರಾಣಿಗಳ, ರಾಜ-ರಾಣಿಯರ ಕಥೆಗಳನ್ನು ಹೇಳುತ್ತಿದ್ದರು. ನಾನು ಮುಂದೆ ಕಥೆಗಾರನಾಗಿ ಕಥೆ ಕಟ್ಟುವ ಬಗೆ ಕಲಿಯಲು ಇದರಿಂದ ಪ್ರಭಾವಿತನಾಗಿರಬಹುದು.
ಎಂಟನೇ ತರಗತಿಯಲ್ಲಿದ್ದಾಗ ನನ್ನ ಕಥೆಯೊಂದು ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅದನ್ನು ತರಗತಿಯಲ್ಲಿ ಓದಿಸಿ ಮೆಚ್ಚಿದ್ದ ಇಬ್ಬರು ಶಿಕ್ಷಕರು ಎನ್ನಾರ್ ಮತ್ತು ಎಚ್.ಎ., ನನ್ನ ಕಥಾಯಾತ್ರೆಯ ಪಯಣದ ಮೊದಲ ಸ್ಟೇಷನ್‌ನಲ್ಲಿ ಬಾವುಟ ಬೀಸಿದ ಗಾರ್ಡ್‌ಗಳು ಇವರೇ ಇರಬೇಕು. ತಡವಾಗಿ ಬಂದ, ತಪ್ಪು ಮಾಡಿದ ಹುಡುಗರಿಗೆ ಕೊಡಗಳನ್ನು ಕೊಟ್ಟು ದೂರದ ಕಟ್ಟೆಯಿಂದ ನೀರು ತರಿಸಿ ಶಾಲೆಯ ಸುತ್ತ ಗಿಡ ಬೆಳೆಸುತ್ತಿದ್ದ ಪರಿಸರ ಪ್ರೇಮಿ ಮತ್ತು ನನ್ನ ಪರಮ ಶತ್ರುವಾಗಿದ್ದ ಗಣಿತವನ್ನೂ ಆಕರ್ಷಕವಾಗಿ ಬೋಧಿಸುತ್ತಿದ್ದ ವೈಜಿಎಸ್, ಮರೆಯಲಾಗದ ಮೇಷ್ಟ್ರು.
ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಸಿದವರು ನಮ್ಮೂರಿನ ಹಿರಿಯರಾದ ತಿಮ್ಮಶೆಟ್ಟಿಗೌಡರು ಮತ್ತು ಹಾರ್ಮೋನಿಯಂ ಮೂಲಕ ನಾಟಕ, ರಂಗಗೀತೆಗಳನ್ನು ಕಲಿಸಿದವರು ಅಳೀಸಂದ್ರದ ಜಯರಾಮಣ್ಣ. ನೀತಿಕಥೆಗಳನ್ನು ಹರಿಕಥೆಗಳ ಮೂಲಕ ನಿರೂಪಿಸುತ್ತಿದ್ದ ಗುರುರಾಜುಲು ನಾಯ್ಡು ಅವರು ನನಗೆ ಪರೋಕ್ಷ ಗುರುವೇ. ಲಕ್ಷ್ಮೀ ಜನಾರ್ಧನ್ ಅಯ್ಯಂಗಾರ್, ಪಿಯುಸಿಯಲ್ಲಿ “ಪಿಕ್‌ವಿಕ್ ಪೇಪರ್ಸ್’ ಎಂಬ ಉಪಪಠ್ಯ ಬೋಧಿಸುವಾಗ ನಾನೂ ಅವರಂತೆ ಇಂಗ್ಲಿಷ್ ಕಲಿಯಬೇಕೆನ್ನಿಸುತ್ತಿತ್ತು. ಬಿಎ, ಎಂಎ ತರಗತಿಗಳಲ್ಲಿ ಒಬ್ಬರಿಗಿಂತ ಒಬ್ಬರು ಎಂಬಂತೆ ಅಸಾಧಾರಣ ಅಧ್ಯಾಪಕರು.
ತಮ್ಮ ಕೃತಿಗಳ ಮೂಲಕ ಗುರುವಾದವರು: ಕುವೆಂಪು, ಕಾರಂತ, ತ್ರಿವೇಣಿ, ಗೊರೂರು, ಮಾಸ್ತಿ, ಲಂಕೇಶ್, ತೇಜಸ್ವಿ, ದೇವನೂರು, ಅನಂತಮೂರ್ತಿ, ಭೈರಪ್ಪ, ಟಾಗೋರ್, ಶೇಕ್ಸ್ ಪಿಯರ್, ಚಿನುವಾ ಅಚಿಬೆ, ಟಾಲ್ಸ್ ಟಾಯ್, ಹೆಮ್ಮಿಂಗ್ ವೇ, ಮಾರ್ಕ್ವೇಜ್… ಮುಂತಾದವರು. ಈ “ಸಾಹಿತ್ಯಿಕ ಗುರು’ಗಳ ಪಟ್ಟಿ ಬಹಳ ದೊಡ್ಡದು. ನಾನು ಸಿನಿಮಾ ಮಾಡಲು ಕಲಿತಿದ್ದೂ ಪುಸ್ತಕ ಮತ್ತು ಸಿನಿಮಾಗಳ ಮೂಲಕವೇ. ಒಂದು ಅರ್ಥದಲ್ಲಿ ಸಾಮಾನ್ಯ ಪ್ರೇಕ್ಷಕನೇ ನನ್ನ ಸಿನಿಮಾಗಳ ಮತ್ತು ಸಾಮಾನ್ಯ ಓದುಗನೇ ನನ್ನ ಸಾಹಿತ್ಯ ಸೃಷ್ಟಿಯ ನಿಜಗುರುದ್ವಯರು. ಜನಪರ ಸಿದ್ಧಾಂತಗಳನ್ನು ತಿಳಿಸಿ ಬೆಳೆಸಿದ ಗುರುಗಳೆಂದರೆ ವಚನಕಾರರು, ಮಾರ್ಕ್ಸ್, ಗಾಂಧಿ, ಅಂಬೇಡ್ಕರ್, ಲೋಹಿಯಾ, ಎಂಡಿಎನ್, ಅಣ್ಣಾ ಹಜಾರೆ, ಮೇಧಾಪಾಟ್ಕರ್… ನಿಸ್ಸಂಶಯ. ಇವರೆಲ್ಲ ನನ್ನ ಸೈದ್ಧಾಂತಿಕ ಗುರುಗಳು. ಸಲುಗೆಯಿಂದ ವ್ಯಂಗ್ಯವಾಗಿ ಗೆಳೆಯರನ್ನು “ಏನ್ ಗುರೂ’ ಎನ್ನುತ್ತೇವೆ. ಹಾಗೆ ಕರೆಯುವಾಗ ಅವನು ನನಗಿಂತ ತಿಳಿದವನು ಎಂಬ ಭಾವನೆ ಇದ್ದೀತು. ನನಗೂ ಅಂಥ ಗೆಳೆಯರುಂಟು. ಕೆಲವರು ಒಳ್ಳೆಯದನ್ನು ಕಲಿಸಿದ್ದಾರೆ ಕೂಡಾ. ಅರಿವನ್ನು ಪಡೆಯುವ ಆಕರಗಳು – ಮೂರ್ತ ಅಮೂರ್ತ ಯಾವ ಸ್ವರೂಪದಲ್ಲೇ ಇರಲಿ -ಅವೆಲ್ಲ ಗುರುವಿನ ಸಂಕೇತವೇ. ಈ ಅರಿವಿನ ಋಣದ ಗಣಿ ಅನಂತವಾದದ್ದು ಮತ್ತು ತೀರಿಸಲಾಗದ್ದು. ಮನುಕುಲ ಚಿರಕಾಲವೂ ಗೌರವಿಸಬೇಕಾದ್ದು. ಯಾಕೆಂದರೆ ಗುರುವೆಂಬುದು, ಅರಿವೆಂಬುದು ತಲೆಮಾರುಗಳ ಬೆಸೆದು ಬದುಕಿಸುವ ಕೊಂಡಿ.
-ನಾಗತಿಹಳ್ಳಿ ಚಂದ್ರಶೇಖರ, ಪ್ರಸಿದ್ಧ ಸಾಹಿತಿಗಳು, ಸಿನಿಮಾ ನಿರ್ದೇಶಕರು