Advertisement

ಅತ್ಯಧಿಕ ಚಿತ್ರ ನಿರ್ಮಾಣವಾಗುತ್ತಿರುವ ರಾಜ್ಯಕ್ಕೆ ಬೇಕು ಫಿಲಂ ಸಿಟಿ

12:10 AM Mar 02, 2023 | Team Udayavani |

ಭಾ.ಮ.ಹರೀಶ್‌, ಅಧ್ಯಕ್ಷರು,
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
ವರ್ಷಕ್ಕೆ 200ಕ್ಕೂ ಹೆಚ್ಚು ಸಿನೆಮಾಗಳನ್ನು ನಿರ್ಮಿಸುವ ಕನ್ನಡ ಚಿತ್ರರಂಗ ಸದ್ಯ ವಿಶ್ವವೇ ತಿರುಗಿ ನೋಡುವಂತಹ ಸಿನೆಮಾಗಳನ್ನು ನೀಡುತ್ತಿದೆ. ಸ್ಟಾರ್‌ ಸಿನೆಮಾಗಳ ಜತೆಗೆ ಕಂಟೆಂಟ್‌ ಆಧರಿತ ಸಿನಿಮಾಗಳ ಮೂಲಕವೂ ಎಲ್ಲರ ಚಿತ್ತವನ್ನು ತನ್ನ ಸೆಳೆಯುತ್ತಿರುವ ಸ್ಯಾಂಡಲ್‌ವುಡ್‌ಗೆ ದಿನದಿಂದ ದಿನಕ್ಕೆ ಹೊಸ ಪ್ರತಿಭೆಗಳು ಬರುತ್ತಿವೆ. ಎಲ್ಲ ಕ್ಷೇತ್ರದವರನ್ನು ಆಕರ್ಷಿಸುತ್ತಿರುವ ಕನ್ನಡ ಚಿತ್ರರಂಗದಲ್ಲಿ  ಅಗತ್ಯವಾಗಿ ಆಗಬೇಕಾದ ಒಂದಷ್ಟು ಬೇಡಿಕೆಗಳಿವೆ. ಈ ಬೇಡಿಕೆಗಳು ಈಡೇರಿದ್ದಲ್ಲಿ ಕನ್ನಡ ಚಿತ್ರರಂಗ ಮತ್ತಷ್ಟು ಗುಣಮಟ್ಟದ ಸಿನಿಮಾಗಳನ್ನು ನೀಡಲು ಸಾಧ್ಯ.

Advertisement

ಪ್ರತಿ ಸರಕಾರ ಬಂದಾಲೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಚಿತ್ರರಂಗದ ನಿಯೋಗ ಸಂಬಂಧಪಟ್ಟವರನ್ನು ಭೇಟಿಯಾಗಿ ಮನವಿ ಮಾಡುತ್ತಲೇ ಬಂದಿದೆ. ಆದರೆ ಕೆಲವು ಬೇಡಿಕೆಗಳು ಮಾತ್ರ ಇನ್ನೂ ಮನವಿ ಪತ್ರದಲ್ಲಷ್ಟೇ ಇವೆಯೇ ಹೊರತು ಕಾರ್ಯರೂಪಕ್ಕೆ ಬಂದಿಲ್ಲ.  ಒಂದು ಸುಸಜ್ಜಿತ ವ್ಯವಸ್ಥೆ ಕನ್ನಡ ಚಿತ್ರರಂಗಕ್ಕೆ ಸಿಕ್ಕರೆ ಕನ್ನಡದಿಂದ ಮತ್ತಷ್ಟು ಉತ್ತಮ ಸಿನೆಮಾಗಳು ಹೊರಬರುವ ಜತೆಗೆ ಹೊಸ ಪ್ರತಿಭೆಗಳ ಭರವಸೆ ಕೂಡ ಹೆಚ್ಚಲಿದೆ.  ಕನ್ನಡ ಚಿತ್ರರಂಗಕ್ಕೆ ತುರ್ತಾಗಿ ಆಗಬೇಕಾದ ಕಾರ್ಯಗಳ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಭಾ.ಮ.ಹರೀಶ್‌ ಬೆಳಕು ಚೆಲ್ಲಿದ್ದಾರೆ. ಈ ಕೆಳಗಿನ ಚಿತ್ರರಂಗದ ಬೇಡಿಕೆಗಳನ್ನು ಎಲ್ಲ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡು ಮುಂದೆ ಅಧಿಕಾರಕ್ಕೆ ಬಂದಾಗ ಜಾರಿಗೊಳಿಸುವಂತೆ ಎಲ್ಲಾ ಪಕ್ಷಗಳನ್ನು ಕೇಳಿಕೊಂಡಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ತುರ್ತಾಗಿ ಆಗಬೇಕಾಗಿರುವುದು ಚಿತ್ರನಗರಿ (ಫಿಲಂ ಸಿಟಿ). ಯಾವುದೇ ಸರಕಾರ ಬರಲಿ, ಯಾವುದೇ ಪಕ್ಷ ಅಧಿಕಾರ ಹಿಡಿಯಲಿ. ಮೊದಲು ಚಿತ್ರನಗರಿ ನಿರ್ಮಾಣ ಅವರ ಆದ್ಯತೆಯಾಗಿರಲಿ. ಇಡೀ ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಸಿನೆಮಾಗಳು ನಿರ್ಮಾಣವಾಗುತ್ತಿರುವುದು ಕನ್ನಡ ಚಿತ್ರರಂಗದಲ್ಲಿ. ಸಿನೆಮಾದ ಚಿತ್ರೀಕರಣಕ್ಕೆ ಬೇಕಾದ ಎಲ್ಲ ಸೌಲಭ್ಯಗಳು, ಸೌಕರ್ಯಗಳು ಫಿಲಂ ಸಿಟಿಯಲ್ಲಿ ಸಿಗುವಂತಾಗಬೇಕು. ಇದರಿಂದ ಹೊರರಾಜ್ಯಗಳಿಗೆ ಹೋಗಿ ಅಲ್ಲಿನ ಫಿಲಂಸಿಟಿ, ಸ್ಟುಡಿಯೋಗಳಿಗೆ ನಿರ್ಮಾಪಕರು, ನಿರ್ದೇಶಕರು ಅಲೆಯುವುದು ತಪ್ಪುತ್ತದೆ.

ಯುಎಫ್ಒ ಮತ್ತು ಕ್ಯೂಬ್‌ ನಿರ್ಮಾಪಕರಿಗೆ ಕಂಟಕವಾಗುತ್ತಿವೆ. ಸರಕಾರವೇ ಇಲ್ಲಿನ ನಿರ್ಮಾಪಕರಿಗೆ, ಪ್ರದರ್ಶಕರಿಗೆ ಮತ್ತು ವಿತರಕರಿಗೆ ಅನುಕೂಲವಾಗುವಂತ ರೀತಿಯಲ್ಲಿ ಅತ್ಯಾಧುನಿಕ ಪರ್ಯಾಯ ವ್ಯವಸ್ಥೆಯನ್ನು ರೂಪಿಸಬೇಕು. ಇದರಿಂದ ಸರಕಾರಕ್ಕೂ ಆದಾಯ ಬರಲಿದೆ. ಜತೆಗೆ ಇಲ್ಲಿನ ಸಂಪನ್ಮೂಲ ಹೊರಹೋಗುವುದು ತಪ್ಪುತ್ತದೆ. ಬೇರೆ ಖಾಸಗಿ ಸಂಸ್ಥೆಗಳಿಂದ ಆಗುತ್ತಿರುವ ವಿಳಂಬ, ಶೋಷಣೆ ಎಲ್ಲದಕ್ಕೂ ಕಡಿವಾಣ ಬೀಳಲಿದೆ.

ಪ್ರತಿ ವರ್ಷ ಸರಕಾರ ಸಿನೆಮಾಗಳಿಗೆ ನೀಡುವ ಸಹಾಯಧನ (ಸಬ್ಸಿಡಿ) ಪ್ರಮಾಣವನ್ನು ಮತ್ತು ಅದಕ್ಕೆ ಸಹಾಯಧನ ಪಡೆಯುವ ಸಿನೆಮಾಗಳ ಸಂಖ್ಯೆಯನ್ನೂ ಹೆಚ್ಚಿಸಬೇಕು. ಇದರಿಂದ ಕಡಿಮೆ ಬಜೆಟ್‌ನಲ್ಲಿ ಸಿನೆಮಾ ನಿರ್ಮಿಸುವ ನಿರ್ಮಾಪಕರಿಗೆ ಅನುಕೂಲವಾಗಲಿದೆ. ಅಲ್ಲದೆ ಆಯಾಯ ವರ್ಷದ ಸಹಾಯಧನವನ್ನು ನೀಡಲು ವರ್ಷಗಟ್ಟಲೆ ವಿಳಂಬ ಮಾಡದೆ, ಆಯಾ ವರ್ಷವೇ ನೀಡುವಂತಾಗಬೇಕು.

Advertisement

ಕನ್ನಡ ಚಿತ್ರರಂಗದ ಹಿರಿಯ ಅಶಕ್ತ ಕಲಾವಿದರು, ತಂತ್ರಜ್ಞರು ಮತ್ತು ಕಾರ್ಮಿಕರಿಗೆ ಮಾಸಾಶನ ನೀಡಲು ಕ್ರಮ ಕೈಗೊಳ್ಳಬೇಕು. ಚಲನಚಿತ್ರ ಅಕಾಡೆಮಿ ವತಿಯಿಂದ ನೀಡಲಾಗುವ ಪರಿಹಾರ ಧನ / ಸಹಾಯ ಧನದ ಮೊತ್ತವನ್ನು ಇನ್ನಷ್ಟು ಹೆಚ್ಚಿಸಬೇಕು.

ಸರಕಾರ ಈಗಾಗಲೇ ಘೋಷಿಸಿರುವ ಜನತಾ ಚಿತ್ರಮಂದಿರಗಳನ್ನು ಪ್ರತಿ ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಸ್ಥಾಪನೆಯಾಗಲು ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು. ಅದಕ್ಕೆ ಬೇಕಾದ ಸಂಪನ್ಮೂಲಗಳನ್ನು ಒದಗಿಸಬೇಕು.

ಕನ್ನಡ ಚಿತ್ರರಂಗದ ಎಲ್ಲ ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಕಾರ್ಮಿಕರು ಎಲ್ಲರ ಬಳಕೆಗೂ ಅನುಕೂಲವಾಗುವಂತ ಸಮುದಾಯ ಭವನ ನಿರ್ಮಾಣವಾಗಬೇಕಾಗಿದೆ. ಅದಕ್ಕೆ ಸೂಕ್ತವಾದ ಜಾಗ ಕಲ್ಪಿಸಿದರೆ, ಚಿತ್ರರಂಗದ ವತಿಯಿಂದ ಆ ಸಮುದಾಯ ಭವನವನ್ನು ನಾವೇ ನಿರ್ಮಿಸಲು ತಯಾರಿದ್ದೇವೆ.

ಕನ್ನಡದ ಬಿಗ್‌ ಬಜೆಟ್‌ ಸಿನಿಮಾಗಳು ಪೈರಸಿ ಆಗುವುದನ್ನು ಮತ್ತು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುವುದನ್ನು ತಡೆಯಲು ಸೈಬರ್‌ ಕಾನೂನನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು.

ಕರ್ನಾಟಕ ಸರಕಾರದಿಂದ ಕೊಡಲಾಗುವ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳನ್ನು ಪಾರದರ್ಶಕವಾಗಿ ನಿಗದಿತ ಸಮಯಕ್ಕೆ ಕೊಡುವಂತಾಗಬೇಕು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next