ಬೆಂಗಳೂರು: ಕನಕಪುರ ರಸ್ತೆಯಲ್ಲಿರುವ ದೇವಿಕಾರಾಣಿ ರೋರಿಚ್ ಎಸ್ಟೇಟ್ ಅನ್ನು ಫಿಲ್ಮಂ ಸಿಟಿಯಾಗಿ ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದರು. ಈ ಮೂಲಕ ಫಿಲ್ಮ್ ಸಿಟಿ ಯೋಜನೆಗೆ ಹೊಸ ತಿರುವು ಪಡೆದುಕೊಂಡಂತಾಗಿದೆ.
ನಗರದ ಕೆ.ಜಿ.ರಸ್ತೆಯಲ್ಲಿರುವ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯಲ್ಲಿ ಭಾನುವಾರ ನಡೆದ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ಹಾಗೂ ಸಂಸ್ಥಾಪಕರ ದಿನಾಚರಣೆಯಲ್ಲಿ ಮಾತನಾಡಿ, 600-700 ಎಕರೆ ವಿಸ್ತೀರ್ಣವಿರುವ ರೋರಿಚ್ ಎಸ್ಟೇಟ್‌ನ್ನು ಚಿತ್ರನಗರಿಯಾಗಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮೈಸೂರಿನಲ್ಲಿ ಫಿಲ್ಮ್ ಸಿಟಿ ಮಾಡುವುದಾಗಿ ಘೋಷಣೆ ಮಾಡಿದ್ದರು. ಅದಕ್ಕಾಗಿ 50 ಎಕರೆ ಸ್ಥಳ ಗುರುತಿಸಿ ಬಜೆಟ್‌ನಲ್ಲಿ ಹಣವನ್ನೂ ಮೀಸಲಿಟ್ಟಿದ್ದರು. ಈಗ ಯಡಿಯೂರಪ್ಪ ಅದನ್ನು ರಾಮನಗರ ಜಿಲ್ಲೆ ವ್ಯಾಪ್ತಿಯ ರೋರಿಚ್ ಎಸ್ಟೇಟ್‌ಗೆ ಸ್ಥಳಾಂತರ ಕುರಿತು ಘೋಷಣೆ ಮಾಡುವ ಮೂಲಕ ಮತ್ತೆ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ಇದಲ್ಲದೇ, ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಫಿಲ್ಮ್ ಸಿಟಿ ಬದಲು ರಾಮನಗರದಲ್ಲಿ ಚಲನಚಿತ್ರ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಅದಕ್ಕಾಗಿ 30 ಕೋಟಿ ರೂ. ನೀಡುವ ಭರವಸೆ ನೀಡಿದ್ದರು. ಆಗ ಫಿಲ್ಮ್ ಸಿಟಿ ಕೈ ಬಿಡಲಾಗುತ್ತದೆ ಎಂಬ ಆಕ್ಷೇಪ ಕೇಳಿ ಬಂದಿತ್ತು. ಆ ಹಿನ್ನೆಲೆಯಲ್ಲಿ ಮೈತ್ರಿ ನಾಯಕರ ವಿರೋಧ ಕಟ್ಟಿಕೊಳ್ಳದೇ ಮೈಸೂರಿನ ಫಿಲ್ಮ್ ಸಿಟಿಯನ್ನು ಮೈಸೂರಿನಲ್ಲಿಯೇ ಮಾಡುವ ಭರವಸೆ ನೀಡಿದ್ದರು.
ಈಗ ಮುಖ್ಯಮಂತ್ರಿ ಯಡಿಯೂರಪ್ಪ ರೋರಿಚ್ ಎಸ್ಟೇಟ್‌ನಲ್ಲಿ ಫೀಲ್ಮ್ ಸಿಟಿ ಮಾಡುವ ಆಲೋಚನೆ ಮಾಡಿರುವುದರಿಂದ ಸಿದ್ದರಾಮಯ್ಯರ ಫಿಲ್ಮ್ ಸಿಟಿ ಯೋಜನೆ ಹಾಗೂ ಕುಮಾರಸ್ವಾಮಿಯವರ ರಾಮನಗರ ಸಿನಿಮಾ ವಿವಿ ಯೋಜನೆಗೆ ಪರೋಕ್ಷವಾಗಿ ಬ್ರೇಕ್ ಹಾಕುವ ಪ್ರಯತ್ನ ಮಾಡಿದಂತಿದೆ.
ಗಣ್ಯರಿಂದ ಸ್ವಾಗತ: ಈ ವಿಚಾರವನ್ನು ಚಿತ್ರರಂಗದ ಅನೇಕ ಮಂದಿ ಸ್ವಾಗತಿಸಿದ್ದಾರೆ. ಈ ಯೋಜನೆ ಕಾರ್ಯಗತ ವಾದರೆ, ಚಿತ್ರರಂಗದ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುತ್ತದೆ. ರೋರಿಚ್ ಎಸ್ಟೇಟ್ ಬೆಂಗಳೂರಿಗೆ ಹತ್ತಿರ ಇರುವುದರಿಂದ ಕಲಾವಿದರು, ತಂತ್ರಜ್ಞರಿಗೆ ಉಪಯೋಗವಾಗು ತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.