ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ 2023-24ನೇ ಸಾಲಿನ ಚುನಾವಣೆ ಶನಿವಾರ ನಡೆಯಲಿದೆ. ಕ್ರಿಸೆಂಟ್ ರಸ್ತೆಯಲ್ಲಿರುವ ಶ್ರೀ ಗುರುರಾಜ ಕಲ್ಯಾಣ ಮಂಟಪದಲ್ಲಿ ವಾಣಿಜ್ಯ ಮಂಡಳಿಯ 2023-24ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
ಬಳಿಕ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅಲ್ಲಿಯೇ ಮತದಾನ ನಡೆಯಲಿದೆ. ಸಂಜೆ 6 ಗಂಟೆಯ ಬಳಿಕ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ರಾತ್ರಿ 10 ಗಂಟೆ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ಮಂಡಳಿ ಅಧ್ಯಕ್ಷ ಸ್ಥಾನ ವಿತರಕ ವಲಯಕ್ಕೆ ಮೀಸಲಾಗಿದೆ. ವಿತರಕ ವಲಯದಿಂದ ಹಿರಿಯ ಸಿನಿಮಾ ವಿತರಕರಾದ ಮಾರ್ ಸುರೇಶ್, ಎನ್.ಎಂ. ಸುರೇಶ್ (ಎಕ್ಸ್‌ಕ್ಯೂಸ್ ಮಿ), ಎ. ಗಣೇಶ್ ಮತ್ತು ಶ್ರೀನಿವಾಸ್ ಎಚ್.ಸಿ. (ಶಿಲ್ಪಾ ಶ್ರೀನಿವಾಸ್) ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ ನಾಮಪತ್ರ ಸಲ್ಲಿಸಿ, ಚುನಾವಣಾ ಕಣದಲ್ಲಿದ್ದಾರೆ.
ಮಂಡಳಿಗೆ ಒಬ್ಬರು ಅಧ್ಯಕ್ಷರು, ವಲಯವಾರು ಮೂವರು ಉಪಾಧ್ಯಕ್ಷರು, ವಲಯವಾರು ಮೂವರು ಗೌರವ ಕಾರ್ಯದರ್ಶಿಗಳು ಮತ್ತು ಒಬ್ಬರು ಖಜಾಂಚಿ ಸೇರಿದಂತೆ, ಒಟ್ಟು 8 ಮಂದಿಯ ಪದಾಧಿಕಾರಿಗಳ ಸಮಿತಿಯಿರುತ್ತದೆ. ಈ ಬಾರಿ 8 ಪದಾಧಿಕಾರಿಗಳ ಸ್ಥಾನಕ್ಕೆ ಬರೋಬ್ಬರಿ 24 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಒಂದು ವಾರದಿಂದ ವಾಣಿಜ್ಯ ಮಂಡಳಿಯ ಚುನಾವಣೆ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದ್ದು, ಅಭ್ಯರ್ಥಿಗಳು ಸದಸ್ಯರ ಮನಗೆಲ್ಲಲು ಹಲವು ಕಸರತ್ತು ನಡೆಸಿದ್ದಾರೆ.
ಒಟ್ಟಿನಲ್ಲಿ ಈ ಬಾರಿ ಅಭ್ಯರ್ಥಿಗಳ ನಡುವೆ ತೀವ್ರ ಹಣಾಹಣಿ ನಡೆಯುತ್ತಿದ್ದು, ಅಂತಿಮವಾಗಿ ವಿಜಯಲಕ್ಷ್ಮಿಯಾರಿಗೆ ಒಲಿಯಲಿದ್ದಾಳೆ ಎಂಬುದು ಇಂದು ರಾತ್ರಿಯೊಳಗೆ ಗೊತ್ತಾಗಲಿದೆ.
ಕಣದಲ್ಲಿರುವ ಪ್ರಮುಖರು: ನಿರ್ಮಾಪಕರ ವಲಯದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಪ್ರಮೀಳಾ ಜೋಷಾಯ್, ಎಂ.ಬಿ.ಬಾಬು (ಸೂರಪ್ಪ ಬಾಬು), ಮಹದೇವ್ ಬಿ. (ಚಿಂಗಾರಿ), ರೂಪಾ ಅಯ್ಯರ್ ಸ್ಪರ್ಧಿಸಿದ್ದಾರೆ. ವಿತರಕ ವಲಯದಿಂದ ಉಪಾಧ್ಯಕ್ಷ ಸ್ಥಾನಕ್ಕೆ ನಾರಾಯಣ ರೆಡ್ಡಿ ಪಿ.(ನವಯುಗ), ವೆಂಕಟೇಶ್ ಜಿ. ಮತ್ತು ಪ್ರದರ್ಶಕರ ವಲಯದಿಂದ ಉಪಾಧ್ಯಕ್ಷ ಸ್ಥಾನಕ್ಕೆ ನರಸಿಂಹಲು ಎಂ., ಮುರಳಿ ವಿ., ರಂಗಪ್ಪ ಕೆ.ಒ. ಸ್ಪರ್ಧಿಸಿದ್ದಾರೆ. ನಿರ್ಮಾಪಕರ ವಲಯದಿಂದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಭಾ.ಮ. ಗಿರೀಶ್, ರಾಜೇಶ್ ಬ್ರಹ್ಮಾವರ್, ವೀರೇಶ್ ಕೆ.ಎಂ. ಕಣದಲ್ಲಿದ್ದಾರೆ. ವಿತರಕರ ವಲಯದಿಂದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಕೇಶವ ಬಿ.ಆರ್ .ನಾಗರಾಜ್ ಸಿ.(ನವಶಕ್ತಿ), ಪಾರ್ಥಸಾರಥಿ ಕೆ. (ಲೀಗಲ್ ಪಾರ್ಥ), ಸುಬ್ರಮಣಿ ವಿ. (ಕರಿಸುಬ್ಬು) ಸ್ಪರ್ಧೆಯಲ್ಲಿದ್ದಾರೆ. ಪ್ರದರ್ಶಕರ ವಲಯದಿಂದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಸುಂದರ್ ರಾಜು ಆರ್ ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಉಳಿದಂತೆ ಒಂದು ಖಜಾಂಚಿ ಸ್ಥಾನಕ್ಕೆ ಅಂಚೆಹಳ್ಳಿ ಶಿವಕುಮಾರ್, ಜಯಸಿಂಹ ಮುಸುರಿ ಬಿ.ಕೆ. ಮತ್ತು ದಯಾಳ್ ಪದ್ಮನಾಭನ್ ಸೇರಿದಂತೆ ಮೂವರು ನಾಮಪತ್ರ ಸಲ್ಲಿಸಿದ್ದಾರೆ. ಇದರ ಜೊತೆಗೆ ವಾಣಿಜ್ಯ ಮಂಡಳಿಯ ಕಾರ್ಯಕಾರಿ ಸಮಿತಿಯ 16 ಸ್ಥಾನಕ್ಕೆ ಬರೋಬ್ಬರಿ 40 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿ, ಚುನಾವಣಾ ಕಣದಲ್ಲಿದ್ದಾರೆ.