ಸಿನಿಮಾ ರಂಗಕ್ಕೂ ಕಿರುತೆರೆಗೂ ಮೊದಲಿನಿಂದಲೂ ಒಂದು ಅವಿನಾಭಾವ ನಂಟಿದೆ. ಕಿರುತೆರೆಯಲ್ಲಿ ಮಿಂಚಿದ ಅದೆಷ್ಟೋ ನಟ-ನಟಿಯರು, ಕಲಾವಿದರು, ನಿರ್ಮಾಪಕ-ನಿರ್ದೇಶಕರು, ತಂತ್ರಜ್ಞರು ತಮ್ಮ ಭವಿಷ್ಯದಲ್ಲಿ ಹಿರಿತೆರೆಯತ್ತ ಮುಖ ಮಾಡಿ ಮಿಂಚಿದ್ದು, ಹಾಗೆಯೇ ಹಿರಿತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅದೆಷ್ಟೋ ಮಂದಿ ತಮ್ಮ ಭವಿಷ್ಯದಲ್ಲಿ ಕಿರುತೆರೆಯತ್ತ ಮುಖ ಮಾಡಿದಂಥ ಉದಾಹರಣೆಗಳು ಹಿರಿತೆರೆ ಮತ್ತು ಕಿರುತೆರೆಯಲ್ಲಿ ಸಾಕಷ್ಟು ಸಿಗುತ್ತವೆ.
ಒಂದು ಕಾಲದಲ್ಲಿ ಹಿರಿತೆರೆ ಮತ್ತು ಕಿರುತೆರೆ ಅಂಥ ಗೊತ್ತಿಲ್ಲದೇ ಒಂದು ವರ್ಗೀಕರಣವಿದ್ದರೂ, ಈಗ ಅದೆಲ್ಲವೂ ಮಾಯವಾಗಿದೆ. ಅವಕಾಶಗಳು, ಮಾರುಕಟ್ಟೆ, ವ್ಯಾಪಾರ-ವಹಿವಾಟು, ಪ್ರೇಕ್ಷಕರ ಸಂಖ್ಯೆ, ಸಾಮಾಜಿಕ ಪ್ರಭಾವ ಎಲ್ಲವನ್ನೂ ಪರಿಗಣಿಸಿದರೆ, ಹಿರಿತೆರೆ ಮತ್ತು ಕಿರುತೆರೆ ನಡುವೆ ಅಂಥದ್ದೇನೂ ದೊಡ್ಡ ವ್ಯತ್ಯಾಸ ಕಾಣಲಾರದು. ಅದರಲ್ಲೂ ಕಳೆದ ಒಂದು ದಶಕದಿಂದ ಬದಲಾದ ಕಾಲಘಟ್ಟದಲ್ಲಿ ಹಿರಿತೆರೆ ಮತ್ತು ಕಿರುತೆರೆಯ ನಡುವಿನ ಅಂತ ಇನ್ನಷ್ಟು ಕಡಿಮೆಯಾಗುತ್ತಿದ್ದು, ಸಿನಿಮಾದ ನಡುವೆಯೇ ಅನೇಕ ನಟ-ನಟಿಯರು, ಕಲಾವಿದರು, ನಿರ್ಮಾಪಕ-ನಿರ್ದೇಶಕರು, ತಂತ್ರಜ್ಞರು ಆಗಾಗ್ಗೆ ಸೀರಿಯಲ್, ರಿಯಾಲಿಟಿ ಶೋ, ಸ್ಪೆಷಲ್ ಇವೆಂಟ್ಸ್ ಅಂಥ ಕಿರುತೆರೆಯಲ್ಲೂ ಕಾಣಿಸಿಕೊಂಡರೆ, ಸೀರಿಯಲ್-ರಿಯಾಲಿಟಿ ಶೋಗಳ ಮೂಲಕ ಕಿರುತೆರೆಯಲ್ಲಿ ಮಿಂಚಿದವರು ಸಿನಿಮಾಗಳ ಮೂಲಕ ಹಿರಿತೆರೆಯಲ್ಲೂ ಕಾಣಿಸಿಕೊಳ್ಳುತ್ತಿರುತ್ತಾರೆ.
ಇದನ್ನೂ ಓದಿ:ಪುಷ್ಪ ಚಿತ್ರದ ಪ್ರೇರಣೆ : ಕೊಲೆ ಮಾಡಿ ವೈರಲ್ ಆಗಲು ಬಯಸಿದ್ದ ಬಾಲಕರು!
ಎಲ್ಲವನ್ನೂ ಬದಲಾಯಿ ಸಿಬಿಟ್ಟಿತು ಕಳೆದೊಂದು ದಶಕ: ಸುಮಾರು ಒಂದು ದಶಕದ ಹಿಂದಿನ ವಾತಾವರಣ ಬೇರೆಯದ್ದೇ ಆಗಿತ್ತು. ಸಾಮಾನ್ಯವಾಗಿ ಸಿನಿಮಾದಲ್ಲಿ ನಟಿಯರಾಗಿ ಕಾಣಿಸಿಕೊಂಡು, ತಮ್ಮದೇ ಆದ ಛಾಪು ಮೂಡಿಸಿದ್ದ ಬಹುತೇಕ ನಟ-ನಟಿಯರು ಕಿರುತೆರೆಯಲ್ಲಿ ಕಾಣಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಅದರಲ್ಲೂ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ನಟ-ನಟಿಯರನ್ನಂತೂ ಕಿರುತೆರೆಯಲ್ಲಿ ಸೀರಿಯಲ್, ರಿಯಾಲಿಟಿ ಶೋ, ಇವೆಂಟ್ಸ್ ಗಳಲ್ಲಿ ನೋಡುವುದು ದೊಡ್ಡ ವಿಷಯವೇ ಆಗಿತ್ತು. ಹಾಗೇ ಕಿರುತೆರೆ ಅಂದ್ರೆ, ಮೂಗು ಮುರಿಯುತ್ತಿದ್ದವರ ಸಂಖ್ಯೆಗೇನೂ ಕಡಿಮೆಯಿರಲಿಲ್ಲ. ಆದರೆ ಈಗ ಹಾಗಲ್ಲ, ಕಾಲ ಎಲ್ಲವನ್ನೂ ಬದಲು ಮಾಡಿದೆ. ಹಾಗೆಯೇ ಕಿರುತೆರೆಯೂ ಬದಲಾಗುತ್ತಿದೆ. ಹೆಸರಿಗೆ ಕಿರುತೆರೆ ಅಂತಿದ್ದರೂ, ಅದರ ಅರ್ಥ, ವ್ಯಾಪ್ತಿ, ವಿಸ್ತಾರ ಎಲ್ಲವೂ ಹಿರಿದಾಗುತ್ತಿದೆ. ಹೀಗಾಗಿ ಕಿರುತೆರೆ ಅಂದ್ರೆ, ಇಂದು ಹಿರಿತೆರೆಯವರಿಗೂ ಫೇವರೆಟ್ ಅನ್ನುವಂತಾಗಿದೆ.
ಸೀರಿಯಲ್ ಆದ್ರೂ ಸರಿ, ರಿಯಾಲಿಟಿ ಶೋ ಆದ್ರೂ ಸೈ: ಇನ್ನು ಕನ್ನಡದ ಮಟ್ಟಿಗೆ ಹೇಳುವುದಾದರೆ, ಈಗಿನ ಬಹುತೇಕ ಎಲ್ಲ ಸ್ಟಾರ್ ನಟ-ನಟಿಯರು ಕೂಡ ಒಂದಲ್ಲ ಒಂದು ರೀತಿ ಹಿರಿತೆರೆಯ ಜೊತೆಗೆ ಕಿರುತೆರೆಯಲ್ಲೂ ನಂಟು ಇಟ್ಟುಕೊಂಡು ಬಂದಿದ್ದಾರೆ. ಈಗಾಗಲೇ ಸುದೀಪ್, ಶಿವರಾಜಕುಮಾರ್, ರವಿಚಂದ್ರನ್, ಗಣೇಶ್, ರಮೇಶ್ ಅರವಿಂದ್, ವಿಜಯ ರಾಘವೇಂದ್ರ, ರಚಿತಾ ರಾಮ್, ಹರಿಪ್ರಿಯಾ, ಪ್ರಿಯಾಮಣಿ, ಮೇಘನಾ ರಾಜ್, ರಕ್ಷಿತಾ ಹೀಗೆ ಅನೇಕ ಸ್ಟಾರ್ ನಟ-ನಟಿಯರು ಕಿರುತೆರೆಯ ರಿಯಾಲಿಟಿ ಶೋಗಳು ಮತ್ತು ಸ್ಪೆಷಲ್ ಇವೆಂಟ್ಸ್‌ಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ರೂಪಿಕಾ, ಮೇಘಶ್ರೀ, ಅಖೀಲಾ ಪ್ರಕಾಶ್, ಐಶ್ವರ್ಯಾ ಸಿಂಧೋಗಿ, ಸ್ಮಿತಾ ಪಾಟೀಲ್ ಸೇರಿದಂತೆ ಇನ್ನು ಅನೇಕ ನಟಿಯರು ಸಿನಿಮಾದ ಜೊತೆ ಜೊತೆಯಲ್ಲೇ ಸೀರಿಯಲ್‌ಗಳ ಮೂಲಕವೂ ಕಿರುತೆರೆಯಲ್ಲಿ ತಮ್ಮದೇ ಆದ ವೀಕ್ಷಕ ಬಳಗವನ್ನು ಸೃಷ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹಿರಿತೆರೆಯಿರಲಿ, ಕಿರುತೆರೆಯಿರಲಿ ತಮಗೆ ಖುಷಿಕೊಡುವಂಥ ಕೆಲಸ, ಜನಮನ್ನಣೆ ಸಿಗುವಂಥ ವೇದಿಕೆ, ಸೂಕ್ತ ಸಂಭಾವನೆ ಸಿಗಬೇಕು ಎಂಬುದು ಬಹುತೇಕ ಕಲಾವಿದರ ಕನಿಷ್ಟ ನಿರೀಕ್ಷೆ. ಈ ನಿರೀಕ್ಷೆಯನ್ನು ಇಂದು ಹಿರಿತೆರೆ, ಕಿರುತೆರೆ ಬಹುತೇಕ ಸಮಾನವಾಗಿ ಪರಿಪೂರ್ಣಗೊಳಿಸುವುದರಿಂದ, ಯಾವುದರಲ್ಲೂ ವ್ಯತ್ಯಾಸ ಕಾಣಲಾಗುವುದಿಲ್ಲ.
ಜಿ.ಎಸ್.ಕಾರ್ತಿಕ ಸುಧನ್