Advertisement

ಪುತ್ತೂರಿನ ದಶಕದ ಬೇಡಿಕೆಗೆ ಸಿಗದ ಸ್ಪಂದನೆ: ಕಮಿಷನರೆಟ್‌ ವ್ಯಾಪ್ತಿಯೊಳಗೆ ಎಸ್ಪಿ ಕಚೇರಿ

12:52 AM Aug 15, 2022 | Team Udayavani |

ಪುತ್ತೂರು: ಕಾರ್ಯವ್ಯಾಪ್ತಿ ಗ್ರಾಮಾಂತರ ತಾಲೂಕಿನಲ್ಲಿ; ಕಚೇರಿ ಇರುವುದು ಮಾತ್ರ ಮಹಾನಗರದ ಕಮಿಷನರೆಟ್‌ ವ್ಯಾಪ್ತಿಯಲ್ಲಿ. ಇದು ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ) ಕಚೇರಿಯ ಸ್ಥಿತಿ!

Advertisement

ಎಸ್‌ಪಿ ಕಚೇರಿಯನ್ನು ಕಾರ್ಯವ್ಯಾಪ್ತಿಯ ತಾಲೂಕಿಗೆ ಸ್ಥಳಾಂತರಿಸಬೇಕು ಎಂಬ ಬೇಡಿಕೆಗೆ ದಶವರ್ಷ ಕಳೆದಿದೆ. ಅದಾಗ್ಯೂ ಸರಕಾರ ಗಂಭೀರವಾಗಿ ಪರಿಗಣಿಸಿಲ್ಲ. ಆದ್ದರಿಂದ ಅಪರಾಧ ಕೃತ್ಯಗಳ ಸಂದರ್ಭದಲ್ಲಿ ನಿಯಂತ್ರಣಕ್ಕೆ ಗ್ರಾಮಾಂತರ ತಾಲೂಕುಗಳು ಜಿಲ್ಲಾ ಕೇಂದ್ರ ಮಂಗಳೂರನ್ನೇ ಅವಲಂಬಿಸಬೇಕಿದೆ.

ಏನಿದು ಬೇಡಿಕೆ
ಎಸ್‌ಪಿ ಕಚೇರಿ ವ್ಯಾಪ್ತಿಯಲ್ಲಿದ್ದ ಮಂಗಳೂರು ಮಹಾನಗರವು 2010ರಲ್ಲಿ ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಗೆ ಒಳಪಟ್ಟಿತ್ತು. ಮಂಗಳೂರು ಕಂದಾಯ ವಿಭಾಗ ವ್ಯಾಪ್ತಿಯಲ್ಲಿ ಕಮಿಷನರೆಟ್‌ ಬರುವುದರಿಂದ ಎಸ್ಪಿ ಕಚೇರಿಗೆ ಆ ವ್ಯಾಪ್ತಿಯಲ್ಲಿ ಅಧಿಕಾರ ಇಲ್ಲ. ಕಮಿಷನರೆಟ್‌ ವ್ಯವಸ್ಥೆಯನ್ನು ಉದ್ಘಾಟಿಸಿದ್ದ ಅಂದಿನ ಗೃಹಸಚಿವ ಡಾ| ವಿ.ಎಸ್‌. ಆಚಾರ್ಯ ಅವರು ಎಸ್ಪಿ ಕಚೇರಿಯನ್ನು ಕಾರ್ಯವ್ಯಾಪ್ತಿಯ ಪುತ್ತೂರಿಗೆ ಸ್ಥಳಾಂತರಿಸುವ ಭರವಸೆ ನೀಡಿದ್ದರು. ಅನಂತರದ ಸರಕಾರದ ಗೃಹ ಸಚಿವರು ಕೂಡ ಇದೇ ಮಾತುಗಳನ್ನಾಡಿದ್ದರು. ಆದರೆ ಈ ಭರವಸೆ ಕಾರ್ಯರೂಪಕ್ಕೆ ಬಂದಿಲ್ಲ.

ತತ್‌ಕ್ಷಣ ಸ್ಪಂದನೆಗೆ ಅನುಕೂಲ
ಮಂಗಳೂರಿನ ಅನಂತರದ ಎರಡನೇ ಅತೀ ದೊಡ್ಡ ಪಟ್ಟಣವಾಗಿರುವ ಪುತ್ತೂರಿನ ಗಡಿ ಭಾಗದಲ್ಲಿ ಬೆಳ್ತಂಗಡಿ, ಬಂಟ್ವಾಳ, ಸುಳ್ಯ, ಕಡಬ ತಾಲೂಕುಗಳಿವೆ. ಫರಂಗಿಪೇಟೆಯಿಂದ ಸಂಪಾಜೆ, ಚಾರ್ಮಾಡಿ ಘಾಟಿ ಹಾಗೂ ಕೇರಳ ಗಡಿಭಾಗದ ಈಶ್ವರಮಂಗಲ, ಪಾಣಾಜೆ, ವಿಟ್ಲ ಭಾಗಗಳು ಬರುತ್ತವೆ. ಪುತ್ತೂರು ಕೇಂದ್ರ ಸ್ಥಾನವಾದರೆ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಈ ಎಲ್ಲ ತಾಲೂಕಿನ ವ್ಯಾಪ್ತಿಗೆ ಹೆಚ್ಚು ಪ್ರಯೋಜನ ದೊರೆಯಲಿದೆ.

ಈಗಿನ ಸಮಸ್ಯೆ ಏನು?
ಮಂಗಳೂರಿನಿಂದ ಹೊರಭಾಗದ ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ಹಾಗೂ ಕಡಬ ಈ ಗ್ರಾಮಾಂತರ ತಾಲೂಕುಗಳು ದ.ಕ. ಎಸ್‌ಪಿ ವ್ಯಾಪ್ತಿಗೆ ಬರುತ್ತವೆ. ಈ ಭಾಗದಲ್ಲಿ ಅಹಿತಕರ ಘಟನೆಗಳು ನಡೆದರೆ ಪೊಲೀಸ್‌ ಉನ್ನತಾಧಿಕಾರಿಗಳು ಮಂಗಳೂರಿನಿಂದ ಬರಬೇಕು. ಈ ಭಾಗದ ಠಾಣೆಗಳ ಅಧಿಕಾರಿಗಳು ಎಸ್‌ಪಿ ಸಭೆಗೆ ಮಂಗಳೂರಿಗೆ ಹೋಗಬೇಕು. ಒಂದು ವೇಳೆ ಎಸ್‌ಪಿ ಕಚೇರಿ ಕಾರ್ಯವ್ಯಾಪ್ತಿ ಸ್ಥಾನದೊಳಗಿದ್ದರೆ ತತ್‌ಕ್ಷಣ ಸ್ಪಂದನೆ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಪುತ್ತೂರಿಗೆ ಮಂಗಳೂರಿನಿಂದ ಬರಲು 50 ಕಿ.ಮೀ. ದೂರ ಕ್ರಮಿಸಬೇಕು. ಅಲ್ಲಿಂದ ತಲುಪುವಾಗಲೇ ಇಲ್ಲಿ ಅಪರಾಧ ಕೃತ್ಯ ಒಂದು ಹಂತ ದಾಟಿ ಇರುತ್ತದೆ.

Advertisement

ಡಿಆರ್‌ ಸ್ಥಳಾಂತರ ಸವಾಲು
ಎಸ್‌ಪಿ ಕಚೇರಿ ಜತೆಗೆ ಜಿಲ್ಲಾ ಸಶಸ್ತ್ರ ಮೀಸಲು ದಳ (ಡಿಆರ್‌) ಕೂಡ ಸ್ಥಳಾಂತರ ಆಗಬೇಕಾಗಿರುವ ಕಾರಣ ಅದರ ವಿಚಾರದಲ್ಲಿ ಪರಿಶೀಲನೆ ನಡೆಯುತ್ತಿದೆ. ಅದಕ್ಕೆ ಸೂಕ್ತ ವ್ಯವಸ್ಥೆ ಆಗಬೇಕಿದೆ.

ಈಗಾಗಲೇ ಎಸ್‌ಪಿ ಕಚೇರಿ, ಡಿಆರ್‌ಗೆ ಪುತ್ತೂರಿನಲ್ಲಿ ಜಾಗ ಮೀಸಲಿರಿಸಲಾಗಿದೆ. ಡಿಆರ್‌ ಸ್ಥಳಾಂತರಕ್ಕೆ ಸಂಬಂಧಿಸಿ ತಾಂತ್ರಿಕ ಸಮಸ್ಯೆ ಪರಿಹಾರ ಆಗಬೇಕಿದೆ ಎಂದು ಕೆಲವು ದಿನಗಳ ಹಿಂದೆ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದರು.

ಸೈಬರ್‌ ಠಾಣೆ
ಎಸ್‌ಪಿ ಕಚೇರಿ ಪುತ್ತೂರಿಗೆ ಸ್ಥಳಾಂತರವಾದಲ್ಲಿ ಗ್ರಾಮಾಂತರ ತಾಲೂಕುಗಳಲ್ಲಿ ಅಪರಾಧ ಪತ್ತೆ, ಕಾನೂನು ಸುವ್ಯವಸ್ಥೆ ಕಾಪಾಡಲು ಅನುಕೂಲವಾಗಲಿದೆ. ತನ್ನ ಕಾರ್ಯ ವ್ಯಾಪ್ತಿಯಲ್ಲೇ ಇದ್ದು ಗಮನಹರಿಸಲು ಸಾಧ್ಯವಿದೆ. ಎಸ್ಪಿ ಕಚೇರಿ ಸ್ಥಳಾಂತರದೊಂದಿಗೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯೂ ಲಭ್ಯವಾಗುತ್ತದೆ. ಈ ಸಿಬಂದಿ ಬೀಟ್‌ ಪೊಲೀಸ್‌ ಆಗಿಯೂ ಕಾರ್ಯ ನಿರ್ವಹಿಸಬಹುದು. ಭವಿಷ್ಯದಲ್ಲಿ ಸೈಬರ್‌ ಪೊಲೀಸ್‌ ಠಾಣೆ ಪುತ್ತೂರಿನಲ್ಲಿ ಕಾರ್ಯ ನಿರ್ವಹಿಸಬಹುದು. ಮಂಗಳೂರಿನಿಂದಲೇ ನಿರ್ವಹಿಸಬೇಕಾದ ಕಾರ್ಯದೊತ್ತಡ ಕಡಿಮೆಯಾಗಲಿದೆ.

ಕೇರಳದ ಗಡಿಗೆ
ತಾಗಿರುವ ತಾಲೂಕು
ಪುತ್ತೂರು, ಸುಳ್ಯ, ಬಂಟ್ವಾಳ ತಾಲೂಕಿನ ಅನೇಕ ಗ್ರಾಮಗಳು ಕೇರಳದ ಗಡಿಗೆ ತಾಗಿಕೊಂಡಿವೆ. ಸಾರಡ್ಕ, ಪಾಣಾಜೆ, ಈಶ್ವರಮಂಗಲ, ಜಾಲೂÕರು ಚೆಕ್‌ಪೋಸ್ಟ್‌ಗಳಿದ್ದು ಅವು ಕೇರಳದ ಸಂಪರ್ಕ ರಸ್ತೆಗಳಾಗಿವೆ. ಗಾಂಜಾ, ಕೊಲೆ ಸೇರಿದಂತೆ ಅಪರಾಧ ಪ್ರಕರಣಗಳಲ್ಲಿ ಕೇರಳದ ಸಂಪರ್ಕ ಇರುವ ಕಾರಣ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಪುತ್ತೂರಿಗೆ ಬರುವುದು ಹೆಚ್ಚು ಸೂಕ್ತ. ಗಡಿ ಪ್ರದೇಶದ ರಕ್ಷಣ ಬೇಲಿ ಇನ್ನಷ್ಟು ಗಟ್ಟಿಯಾಗಲು ಇದು ಅಗತ್ಯ.

ಪ್ರಯತ್ನ ನಡೆಯುತ್ತಿದೆ
ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಸರಕಾರದ ಹಂತದಲ್ಲಿ ಪ್ರಯತ್ನ ನಡೆಯುತ್ತಿದೆ. ಅಗತ್ಯ ಜಾಗ ಕಾದಿರಿಸಲಾಗಿದೆ. ಡಿಆರ್‌ ಸ್ಥಳಾಂತರ ಪ್ರಕ್ರಿಯೆಗೆ ಸಮ್ಮತಿ ದೊರೆತಲ್ಲಿ ಎಸ್ಪಿ ಕಚೇರಿ ಪುತ್ತೂರಿನಿಂದ ಕಾರ್ಯ ನಿರ್ವಹಿಸಲಿದೆ.
– ಸಂಜೀವ ಮಠಂದೂರು,
ಪುತ್ತೂರು ಶಾಸಕ

– ಕಿರಣ್‌ ಪ್ರಸಾದ್‌ ಕುಂಡಡ್ಕ

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next