ರೂರ್ಕೆಲಾ: ಎಫ್ಐಎಚ್ ಪ್ರೊ ಲೀಗ್ ಹಾಕಿ ಕೂಟದಲ್ಲಿ ಭಾರತದ ಶ್ರೇಷ್ಠ ಆಟ ಮುಂದುವರಿಸಿದೆ. ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತೀಯ ತಂಡವು ಸೋಮವಾರ ನಡೆದ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಜರ್ಮನಿ ತಂಡವನ್ನು 6-3 ಗೋಲುಗಳಿಂದ ಭರ್ಜರಿಯಾಗಿ ಸೋಲಿಸಿದೆ.
ಇದು ಕಳೆದ ಮೂರು ದಿನಗಳಲ್ಲಿ ಭಾರತವು ಜರ್ಮನಿ ವಿರುದ್ಧ ದಾಖಲಿಸಿದ ಎರಡನೇ ಗೆಲುವು ಆಗಿದೆ. ಈ ಸಾಧನೆಯಿಂದ ಭಾರತವು ಆಡಿದ ಏಳು ಪಂದ್ಯಗಳಿಂದ 17 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಸ್ಪೇನ್ ತಂಡ 17 ಅಂಕ ಗಳಿಸಿದ್ದರೂ ಗೋಲು ಅಂತರದಲ್ಲಿ ಅದು ದ್ವಿತೀಯ ಸ್ಥಾನದಲ್ಲಿದೆ.
ಆಸ್ಟ್ರೇಲಿಯ ವಿರುದ್ಧ 5-4 ಅಂತರದಿಂದ ಗೆದ್ದ ಉತ್ಸಾಹದಲ್ಲಿದ್ದ ಭಾರತವು ಮೂರನೇ ನಿಮಿಷದಲ್ಲಿ ಎದರಾಳಿಗೆ ಗೋಲು ಹೊಡೆ ಯುವ ಅವಕಾಶ ಕಲ್ಪಿಸಿದ್ದರೂ ಆಬಳಿಕ ಭರ್ಜರಿಯಾಗಿ ಆಡಿತು. ಟಾಮ್ ಗ್ರಾಮ್‌ಬುಶ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಹೊಡೆದಿದ್ದರು. ಆಬಳಿಕ ಆಕ್ರಮಣಕಾರಿಯಾಗಿ ಆಡಿದ ಭಾರತವು ಜುಗ್ರಾಜ್ ಸಿಂಗ್, ಅಭಿಷೇಕ್, ಸೆಲ್ವಂ ಕಾರ್ತಿ ಮತ್ತು ನಾಯಕ ಹರ್ಮನ್‌ಪ್ರೀತ್ ಮೂಲಕ ಗೋಲು ಹೊಡೆದು ಗೆಲುವು ಒಲಿಸಿಕೊಂಡಿತು.