Advertisement

ಮಹದಾಯಿ ಅಧಿಸೂಚನೆಗೆ ಜನಾಂದೋಲನ: ಕೋನರಡ್ಡಿ

09:41 AM Dec 05, 2019 | Sriram |

ಹುಬ್ಬಳ್ಳಿ:ಮಹದಾಯಿ ನ್ಯಾಯಾಧಿಕರಣ ತೀರ್ಪಿನ ಅನ್ವಯ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದ್ದು, ಉಪ ಚುನಾವಣೆ ನಂತರ ನಾಲ್ಕು ಜಿಲ್ಲೆಗಳಲ್ಲಿ ಮಹದಾಯಿ ಯೋಜನೆಗಾಗಿ ಜನಾಂದೋಲನ ರೂಪಿಸುವುದಾಗಿ ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ತಿಳಿಸಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾ| ಜೆ.ಎಂ. ಪಾಂಚಾಳ ನೇತೃತ್ವದ ಮಹದಾಯಿ ನ್ಯಾಯಾಧಿಕರಣ ಮೂರು ರಾಜ್ಯಗಳ ವಾದ-ವಿವಾದ ಆಲಿಸಿ 2018, ಆ.14ರಂದು ತಿಂಗಳಲ್ಲಿ ನೀರು ಹಂಚಿಕೆ ಮಾಡಿ ತೀರ್ಪು ನೀಡಿದೆ.

ನ್ಯಾಯಾಧಿಕರಣದ ತೀರ್ಪು ಬಂದು ಒಂದು ವರ್ಷ ಕಳೆದರೂ ಕೇಂದ್ರ ಸರ್ಕಾರ ಗೆಜೆಟ್‌ ಅಧಿಸೂಚನೆ ಹೊರಡಿಸುತ್ತಿಲ್ಲ. ಕೇಂದ್ರ ಸರ್ಕಾರಕ್ಕೆ ಈ ಯೋಜನೆಗೆ ಶಾಶ್ವತ ಪರಿಹಾರ ನೀಡದೆ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ. ಇದೀಗ ನಾಲ್ಕು ಜಿಲ್ಲೆಗಳಲ್ಲಿ ಹೋರಾಟ ಅಗತ್ಯವಾಗಿದ್ದು, ಹೀಗಾಗಿ ನಾಲ್ಕು ಜಿಲ್ಲೆಗಳಲ್ಲಿ ಎಲ್ಲಾ ಸಂಘ, ಸಂಸ್ಥೆ ಹಾಗೂ ಸಂಘಟನೆಗಳ ಸಭೆ ಹುಬ್ಬಳ್ಳಿಯಲ್ಲಿ ನಡೆಸಲಾಗುವುದು. ಈ ಬಾರಿ ನೇರವಾಗಿ ಬಿಜೆಪಿ ವಿರುದ್ಧವೇ ಹೋರಾಟ ಮಾಡಲಾಗುವುದು ಎಂದರು.

ಈ ಭಾಗದ ಇಬ್ಬರು ಪ್ರಭಾವಿ ಕೇಂದ್ರ ಸಚಿವರು, 25 ಬಿಜೆಪಿಯ ಸಂಸದರು ಪ್ರಧಾನಿಯವರಿಗೆ ಮನವೊಲಿಕೆ ಮಾಡುವ ಶಕ್ತಿ ಇಲ್ಲದಂತಾಗಿದೆ. ಜನರ ಬೇಡಿಕೆಗಳಿಗೆ, ಸಮಸ್ಯೆಗಳಿಗೆ ಸ್ಪಂದಿಸದ ಇಂತಹ ಜನಪ್ರತಿನಿಧಿಗಳ ಅಗತ್ಯವಿಲ್ಲ. ಅಧಿಸೂಚನೆ ಹೊರಡಿಸುವುದಕ್ಕೆ ವಿವಿಧ ಕಾರಣ ಹೇಳುತ್ತಿರುವುದು ಸರಿಯಲ್ಲ. ಇಬ್ಬರು ಸಂಸದರಿರುವ ಗೋವಾ ರಾಜ್ಯಕ್ಕೆ ಕೇಂದ್ರ ಸರ್ಕಾರ ತಲೆಬಾಗುತ್ತಿರುವುದನ್ನು ನೋಡಿದರೆ ರಾಜ್ಯದ ಸಂಸದರಿಗೆ ಅವಮಾನದ ಸಂಗತಿಯಾಗಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ನಿರಾಪೇಕ್ಷಣ ಪತ್ರ ನೀಡಿದ ಬೆನ್ನಲ್ಲೇ ಮರು ಪರಿಶೀಲನಾ ಸಮಿತಿ ರಚನೆ ಮಾಡುವುದಾಗಿ ಹೇಳಿರುವುದು ರಾಜ್ಯಕ್ಕೆ ಮಾಡಿದ ಅಪಮಾನ ಎಂದರು.

ಜೆಡಿಎಸ್‌ಗೆ 5 ಸ್ಥಾನ:
ರಾಜ್ಯದ ಉಪ ಚುನಾವಣೆಯಲ್ಲಿ ಜೆಡಿಎಸ್‌ ಕನಿಷ್ಟ 5 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಯಾವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು ಎಂಬುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಡಿ.9ರಂದು ಹೊಸ ಸುದ್ದಿ ನೀಡುವುದು ಖಚಿತ. ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ. ಮಿತ್ರರೂ ಅಲ್ಲ. ಹೀಗಾಗಿ ರಾಜಕೀಯದಲ್ಲಿ ಏನಾದರೂ ಸಂಭವಿಸಬಹುದು. ಜೆಡಿಎಸ್‌ ಪಕ್ಷಕ್ಕೆ ಎರಡು ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡ ಅನುಭವವಿದೆ. ಬಿಜೆಪಿ ನಾಯಕರು ಜೆಡಿಎಸ್‌ ಪಕ್ಷ ಹಾಗೂ ಮುಖಂಡರ ವಿರುದ್ಧ ವ್ಯಕ್ತಿಗತ ಹಾಗೂ ಕೆಳಮಟ್ಟದ ಶಬ್ದಗಳನ್ನು ಬಳಸುತ್ತಿರುವುದು ಶೋಭೆಯಲ್ಲ. ಇದು ನಿಮ್ಮ ಹಾಗೂ ನಿಮ್ಮ ಪಕ್ಷದ ಸಂಸ್ಕೃತಿ ತೊರುತ್ತದೆ. ಸಾಮಾಜಿಕ ಜೀವನದಲ್ಲಿ ಇರುವುದನ್ನು ಮರೆಯಬಾರದು. ಶಾಸಕರಾದ ಬಸವರಾಜ ಪಾಟೀಲ ಯತ್ನಾಳ, ಉಮೇಶ ಕತ್ತಿಯಂತಹ ಅನೇಕ ನಾಯಕರನ್ನು ಬಿಜೆಪಿಯಲ್ಲಿ ಮೂಲೆಗುಂಪು ಮಾಡಲಾಗಿದೆ. ಪ್ರಾಮಾಣಿಕ ನಾಯಕರನ್ನು ಅಧಿಕಾರದಿಂದ ದೂರ ಇರಿಸಲಾಗಿದೆ. ಇಂತಹ ಅನೇಕ ಹುಳುಕುಗಳು ಇರುವಾಗ, ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಎಚ್ಚರದಿಂದ ಇರಬೇಕು ಎಂದರು.

Advertisement

111 ಕೋಟಿ ರೂ. ಬೆಳೆ ಸಾಲಮನ್ನಾ
ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನವಲಗುಂದ ಮತ ಕ್ಷೇತ್ರಕ್ಕೆ ಸಂಬಂಧಿಸಿದಂತೆ 16,611 ರೈತರ 111 ಕೋಟಿ ರೂ. ಸಾಲಮನ್ನಾ ಮಾಡಲಾಗಿದೆ. ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿದಂತೆ ರೈತರ ಬೆಳೆ ಸಾಲಮನ್ನಾ ಮಾಡಲಾಗಿದೆ. ರಾಜ್ಯದಲ್ಲಿ ಈಗಾಗಲೇ ಬಹುತೇಕ ರೈತರ ಸಾಲಮನ್ನಾ ಆಗಿದ್ದು, ಕೆಲ ರೈತರ ದಾಖಲೆ ಹಾಗೂ ತಾಂತ್ರಿಕ ಕಾರಣದಿಂದ ಬಾಕಿ ಉಳಿದಿದ್ದು, ಇದೇ ಕಾರಣಕ್ಕೆ ಪಕ್ಷದಿಂದ ಸಹಾಯವಾಣಿ ಅರಂಭಿಸಲಾಗಿದೆ. ಸಾಲಮನ್ನಾ ಆಗಿರುವ ಕುರಿತು ಪ್ರತಿಯೊಂದು ಗ್ರಾಮದಲ್ಲಿ ಪಕ್ಷದ ಕಾರ್ಯಕರ್ತರು ಮಾಹಿತಿ ನೀಡುವ ಕೆಲಸ ಮಾಡಲಿದ್ದಾರೆ ಎಂದು ಮಾಜಿ ಶಾಸಕ ಕೋನರಡ್ಡಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next