ಚಿಕ್ಕಮಗಳೂರು: ಕರಗಡ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪೂರ್ಣಗೊಂಡು ಬಯಲುಸೀಮೆಗೆ ನೀರು ಹರಿಯುವವರೆಗೂ ರಾಜಿರಹಿತ ಹೋರಾಟ ನಡೆಸುವ ನಿರ್ಣಯವನ್ನು ತಾಲೂಕಿನ ನಿಡಘಟ್ಟದಲ್ಲಿ ಶುಕ್ರವಾರ ನಡೆದ ಪ್ರತಿಭಟನೆ ವೇಳೆ ವಿವಿಧ ಪಕ್ಷ ಹಾಗೂ ಸಂಘಟನೆಗಳ ಮುಖಂಡರು ಕೈಗೊಂಡರು. ಕರಗಡ ಕುಡಿಯುವ
ನೀರಿನ ಯೋಜನೆ ಕಾಮಗಾರಿ ಪೂರ್ಣಗೊಳಿಸುವುದರ ಜೊತೆಗೆ ಜಿಲ್ಲೆಯ ಬಯಲುಸೀಮೆಯ ಕೆರೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ, ಜನಜಾಗೃತಿಗಾಗಿ ಪತ್ರ ಚಳುವಳಿ ಹಾಗೂ ಹೋರಾಟವನ್ನು ರಾಜ್ಯ ಮಟ್ಟಕ್ಕೆ ವಿಸ್ತರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಕರಗಡ ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸುವುದರ ಜೊತೆಗೆ ಜಿಲ್ಲೆಯ ಬಯಲುಸೀಮೆಯ ಕೆರೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಕರಗಡ ಕುಡಿಯುವ ನೀರಿನ ಹೋರಾಟ ಸಮಿತಿ ಮತ್ತು ಸಮಗ್ರ ಬಯಲು ಸೀಮೆ ನೀರಾವರಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ರೈತರ ಕರಾಳ ದಿನದ ಪ್ರಯುಕ್ತ ನಿಡುಗಟ್ಟ ಗ್ರಾಮದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಗುಡಿ ಬಳಿ ಬೆಳಗ್ಗೆ ಸಮಾವೇಶಗೊಂಡ ವಿವಿಧ ಪಕ್ಷಗಳು ಹಾಗೂ ಸಂಘಟನೆಗಳ ಮುಖಂಡರು ಗುಡಿ ಮುಂಭಾಗ ಮಧ್ಯಾಹ್ನದವರೆಗೆ ಧರಣಿ ನಡೆಸಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್. ಎಚ್. ದೇವರಾಜ್ ಮಾತನಾಡಿ, ಕರಗಡ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ನಾಂದಿ ಹಾಡಿದ ಮಾಜಿ ಶಾಸಕ ಎಸ್.ಎಲ್. ಧರ್ಮೇಗೌಡರು ತಮ್ಮ ಅವಧಿಯಲ್ಲಿ ಸಾಕಷ್ಟು ಹಣ ಒದಗಿಸಿದ್ದಾರೆ. ಕಾಂಗ್ರೆಸ್ ಪಕ್ಷ ಸಹ ಆಡಳಿತಾವಧಿಯಲ್ಲಿ ಹಣ ನೀಡಿದೆ. ಆದರೆ, 17 ವರ್ಷಗಳ ಕಾಲ ಶಾಸಕರು ಮತ್ತು 2 ಬಾರಿ ಮಂತ್ರಿಯಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಒಂದು ನಯಾಪೈಸೆ ಹಣ ತರದೇ ಕಾಮಗಾರಿಯನ್ನು ಪೂರ್ಣಗೊಳಿಸದೇ ಬಯಲುಸೀಮೆಯ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದರು.
ಸಮಿತಿಯ ಸಂಚಾಲಕ ರವೀಶ್ ಬಸಪ್ಪ ಮಾತನಾಡಿ, ಬಯಲು ಸೀಮೆಗೆ ನೀರು ಹರಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಜಿಲ್ಲಾ ಉಸ್ತುವಾರಿ ಸಚಿವರು ಚಳುವಳಿಯನ್ನು ಕೊಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರತಿಭಟನೆ ನಡೆಯುವುದಿಲ್ಲ. ಹಾಗಾಗಿ ಯಾರೂ ಹೋಗಬಾರದು ಎಂದು ಕಳೆದ 3 ದಿನಗಳಿಂದ ಹಳ್ಳಿಗಳಲ್ಲಿ ಸಾರಲಾಗಿದೆ ಎಂದು ದೂರಿದರು. ರೈತ ಸಂಘದ ಮುಖಂಡ ಗುರುಶಾಂತಪ್ಪ ಮಾತನಾಡಿ, ಕರಗಡ ಕುಡಿಯವ ನೀರಿನ ಯೋಜನೆ ಕಾಮಗಾರಿ ಆರಂಭಗೊಂಡು ದಶಕಗಳಾಗಿವೆ. ಅದನ್ನು ಪೂರ್ಣಗೊಳಿಸುವುದು ಬಿಟ್ಟು ಆಗಾಗ ಯೋಜನೆಗಳನ್ನು ಬದಲಿಸುವ ಮೂಲಕ ಬಯಲು ಸೀಮೆಯ ರೈತರ ದಿಕ್ಕು ತಪ್ಪಿಸಲಾಗುತ್ತಿದೆ. ಬಯಲುಸೀಮೆಯ ರೈತರಿಗೆ ಹೊಸ ಯೋಜನೆಗಳು ಬೇಡ. ಕರಗಡ ಕಾಮಗಾರಿ ಪೂರ್ಣಗೊಳಿಸಿ ನೀರು ಕೊಡಿ ಎಂದು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ|ಅಂಶುಮತ್, ಮುಖಂಡರಾದ ಬಿ.ಎಂ. ಸಂದೀಪ್, ಗಾಯತ್ರಿ ಶಾಂತೇಗೌಡ, ಎಂ.ಎಲ್. ಮೂರ್ತಿ, ಎ.ಎನ್. ಮಹೇಶ್, ಎಂ.ಸಿ. ಶಿವಾನಂದಸ್ವಾಮಿ, ಮಹಡಿಮನೆ ಸತೀಶ್, ಪವನ್, ಬಹುಜನ ಸಮಾಜಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ. ರಾಧಾಕೃಷ್ಣ, ಸಿಪಿಐ ಮುಖಂಡ ಎಚ್.ಎಂ. ರೇಣುಕಾರಾಧ್ಯ ಮತ್ತಿತರರು ಇದ್ದರು.