ಶಿಡ್ಲಘಟ್ಟ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮಿಶ್ರ ಸರ್ಕಾರದ ಅವಧಿಯಲ್ಲಿ ಕ್ಷೇತ್ರಗಳ ಅಭಿವೃದ್ಧಿಗಾಗಿ ಬಿಡುಗಡೆಯಾದ ಅನುದಾನವನ್ನು ರಾಜ್ಯ ಬಿಜೆಪಿ ಸರ್ಕಾರ ಕಡಿತಗೊಳಿಸುವ ಮೂಲಕ ಪಕ್ಷಪಾತ ಧೋರಣೆ ಅನುರಿಸರಿಸುತ್ತಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ವಿ.ಮುನಿಯಪ್ಪ ದೂರಿದರು.
ಪಕ್ಷಪಾತ ಧೋರಣೆ: ತಾಲೂಕಿನ ಸಾದಲಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಆಶ್ರಯ ಯೋಜನೆಯ ಫಲಾನುಭವಿಗಳಿಗೆ ನಿವೇಶನದ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಭೀಕರವಾಗಿ ಬರಗಾಲ ತಲೆದೋರಿದೆ. ರಾಜ್ಯ ಸರ್ಕಾರ ಬರಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವ ಬದಲಿಗೆ ವಿರೋಧ ಪಕ್ಷಗಳ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಮೈತ್ರಿ ಸರ್ಕಾರ ಬಿಡುಗಡೆಗೊಳಿಸಿದ ಅನುದಾನ ಕಡಿತಗೊಳಿಸುವ ಮೂಲಕ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ. ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹೋರಾಟ ಎಚ್ಚರಿಕೆ: ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡಬಾರದು. ಶಿಡ್ಲಘಟ್ಟ ಕ್ಷೇತ್ರದ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಗೆ ಬಿಡುಗಡೆಗೊಳಿಸಿದ ಸುಮಾರು 70 ಕೋಟಿ ರೂ.ಅನುದಾನವನ್ನು ಕಡಿತಗೊಳಿಸಲು ಸರ್ಕಾರ ಮುಂದಾಗಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಕ್ಷೇತ್ರ ಸಹಿತ ಜಿಲ್ಲೆಯ ವಿವಿಧ ಕ್ಷೇತ್ರಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನ ಕಡಿತಗೊಳಿಸಲು ಮುಂದಾಗಬಾರದು. ಪಕ್ಷಪಾತ ಧೋರಣೆ ಅನುಸರಿಸಿದರೆ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಅನಿವಾರ್ಯವಾಗಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸತತ ಬರಗಾಲದಿಂದ ತತ್ತರಿಸುತ್ತಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜನ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಜನಗಳಿಗೆ ನಾವು ಸಮಾಧಾನ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಕೂಡಲೇ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳದಿದ್ದರೇ ಜನ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಸುಮಾರು 15 ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ನಿವೇಶನ ಹಂಚಿಕೆ ಸಮಸ್ಯೆ ಇತ್ಯರ್ಥ ಮಾಡಿದ ಶಾಸಕರು ಸುಮಾರು 254 ಮಂದಿಗೆ ಸಾಂಕೇತಿಕವಾಗಿ ನಿವೇಶನಗಳ ಹಕ್ಕುಪತ್ರ ವಿತರಿಸಿದರು. ಸುಮಾರು ವರ್ಷಗಳ ಬಳಿಕ ಹಕ್ಕುಪತ್ರಗಳನ್ನು ಪಡೆದ ಫಲಾನುಭವಿಗಳು ಸಂತಸ ವ್ಯಕ್ತಪಡಿಸಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್, ತಹಶೀಲ್ದಾರ್ ಎಂ.ದಯಾನಂದ್, ತಾಪಂ ಇಒ ಶಿವಕುಮಾರ್, ಲೋಕೋಪಯೋಗಿ ಇಲಾಖೆಯ ಎಇಇ ವಿನೋದ್, ಕಿರಿಯ ಅಭಿಯಂತರ ದಿನೇಶ್, ಸಾದಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋವಿಂದರಾಜು, ಪಿಡಿಒ ಎಸ್.ವಿ.ನಾರಾಯಣಮೂರ್ತಿ, ಎಸ್.ದೇವಗಾನಹಳ್ಳಿ ಪಿಡಿಒ ನರಸಿಂಹಮೂರ್ತಿ, ತಾಪಂ ಸದಸ್ಯೆ ನಾಗವೇಣಿ ವೆಂಕಟೇಶ್, ವಸತಿ ವಿಷಯ ನಿರ್ವಾಹಕಿ ಮಂಜುಳಮ್ಮ, ಜಿಪಂ ಮಾಜಿ ಸದಸ್ಯ ಓಬಳಪ್ಪ, ಹೈಕೋರ್ಟ್ ವಕೀಲ ನಂಜುಂಡರೆಡ್ಡಿ, ಸಿಪಿಐ ಜೆ.ಎನ್.ಆನಂದ್ ಕುಮಾರ್, ದಿಬ್ಬೂರಹಳ್ಳಿ ಪೋಲಿಸ್ ಠಾಣೆಯ ಪಿಎಸ್‌ಐ ರಂಜನ್‌ಕುಮಾರ್ ಹಾಗೂ ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.