ಶಿವಮೊಗ್ಗ: ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿಯನ್ನು ಹೆಚ್ಚಿಸಲು ಆಗ್ರಹಿಸಿ ಇಂದಿನಿಂದವಿವಿಧ ರೀತಿಯ ಹೋರಾಟಗಳನ್ನು, ಜಾಗೃತಿ ಸಭೆಗಳನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುವುದು ಎಂದು ರಾಜನಹಳ್ಳಿ ಶ್ರೀಮಠದ ವಾಲ್ಮೀಕಿ ಸಮಾಜದ ಗುರುಗಳಾದ ಶ್ರೀ ಪ್ರಸನ್ನಾನಂದಪುರಿಮಹಾಸ್ವಾಮೀಜಿಗಳು ಹೇಳಿದರು.
ಶುಕ್ರವಾರ ನಗರದ ವಿದ್ಯಾನಗರ ಲಕಪ್ಪನ ಕೇರಿಯ ಗಣಪತಿ ದೇವಸ್ಥಾನದ ಸಮುದಾಯ ಭವನದಲ್ಲಿ ಆಯೋಜಿಸಿದ್ದ ವಿಶೇಷಸಭೆಯಲ್ಲಿ ಅವರು ಮಾತನಾಡಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.15 ರಿಂದ 17 ಹಾಗೂ 3 ರಿಂದ ಶೇ.7.5ಕ್ಕೆ ಹೆಚ್ಚಿಸಲು ಸರ್ಕಾರ ವಿಳಂಬ ಮಾಡುತ್ತಿದೆ.ಆದ್ದರಿಂದ ಇಂದಿನಿಂದ ಶಿವಮೊಗ್ಗದಿಂದಲೇಹೋರಾಟ ಹಮ್ಮಿಕೊಳ್ಳಲಾಗುವುದು. ಇಂದಿನಿಂದಅ.19ರವರೆಗೂ ರಾಜ್ಯದೆಲ್ಲೆಡೆ ಪ್ರವಾಸ ಕೈಗೊಂಡು ಜನಾಂಗದವರ ಜೊತೆ ಚರ್ಚಿಸಿ ಸಭೆಗಳನ್ನು ನಡೆಸಿ ರಾಜ್ಯ ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ನಮ್ಮ ಜನಾಂಗದ ಮುಖಂಡರು ಈ ಬಗ್ಗೆ ಜಾಗೃತಿ ಮೂಡಿಸಬೇಕು. ಇದಕ್ಕಾಗಿ ಹೋರಾಟದ ಸಿದ್ಧತೆ ಮಾಡಿಕೊಳ್ಳಬೇಕೆಂದು ಅವರು ಕರೆನೀಡಿದರು. ಅ.20 ರಂದು ಬೆಂಗಳೂರಿನಲ್ಲಿ ವಾಲ್ಮೀಕಿ ಸಮಾಜದ ಮುಖಂಡರ ಸಭೆ ಕರೆಯಲಾಗಿದೆ. ಅ.21 ರಿಂದ ಅ.30ರವರೆಗೆ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಕುಳಿತುಕೊಳ್ಳಲಾಗುವುದು. ಅ.30 ರಂದು ಬೆಂಗಳೂರು ಚಲೋ ಪರಿಶಿಷ್ಟ ಮೀಸಲು ಹೆಚ್ಚಳಕ್ಕೆ ವಾಲ್ಮೀಕಿ ಶ್ರೀಗಳಿಂದ ಜಾಗೃತಿ ಸಭೆ ಕಾರ್ಯಕ್ರಮದ ಮೂಲಕ ಮುಖ್ಯಮಂತ್ರಿಗಳಗಮನ ಸೆಳೆಯಲಾಗುವುದು. ವಾಲ್ಮೀಕಿ ಜಯಂತಿಯಂದು ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ನಮ್ಮ ಅಹವಾಲುಗಳನ್ನು ತಲುಪಿಸಲಾಗುವುದು ಎಂದರು.
ರಾಜ್ಯದಲ್ಲಿ ಸುಮಾರು 50 ಲಕ್ಷಕ್ಕೂ ಜನಸಂಖ್ಯೆ ಹೊಂದಿರುವ ವಾಲ್ಮೀಕಿ ಸಮುದಾಯದವರಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ದೊರಕುತ್ತಿಲ್ಲ. ಈಗ ಕೇವಲ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ.3ರಷ್ಟು ಮಾತ್ರ ಸಿಗುತ್ತಿದೆ. ಇದನ್ನು ಶೇ.7.5ಕ್ಕೆ ಹೆಚ್ಚಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದು ಸ್ವಾಮೀಜಿಗಳು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ನಾಯಕ ವಾಲ್ಮೀಕಿ ಸಮಾಜದ ಅಧ್ಯಕ್ಷ ಆರ್. ಲಕ್ಷ್ಮಣ್, ಕಾರ್ಯದರ್ಶಿ ಎಂ.ಆರ್. ಮೋಹನ್, ಕೋಶಾಧ್ಯಕ್ಷ ಕೆ.ಆರ್.ಸೀತಾರಾಮನಾಯಕ್, ಎಚ್.ಎಸ್.ಬಸವರಾಜಪ್ಪ, ಗಿರೀಶ್ ಹಾಗೂ ಸಮಾಜದ ಪ್ರಮುಖರು ಸಭೆಯಲ್ಲಿ ಇದ್ದರು.