ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಬೇರೆ ಬೇರೆಯಾಗಿ ಈಗಾಗಲೇ 8 ವರ್ಷಗಳು ಸಂದಿವೆ. ಆದರೂ ಇನ್ನೂ ಸರಿಯಾಗಿ ಆಸ್ತಿ ಹಂಚಿಕೆಯಾಗಿಲ್ಲ ಎಂಬುದು ಆಂಧ್ರ ಸರಕಾರದ ಆರೋಪ. ಈ ಕುರಿತ ಒಂದು ಮಾಹಿತಿ..
ಏನಿದು ವಿವಾದ?
2014ರಲ್ಲಿ ಆಂಧ್ರ ಪ್ರದೇಶದಿಂದ ತೆಲಂಗಾಣ ಅಧಿಕೃತವಾಗಿ ಬೇರೆಯಾಗಿದ್ದು, ತೆಲಂಗಾಣಕ್ಕೆ ರಾಜಧಾನಿ ಹೈದರಾಬಾದ್ ಹೋಗಿದೆ. ಅಲ್ಲದೆ, ಆಗ ರಾಜ್ಯದಲ್ಲಿನ ಆಸ್ತಿಗಳನ್ನು ಹಂಚಿಕೆ ಮಾಡುವ ಸಂಬಂಧ ಇದುವರೆಗೆ ಉಭಯ ರಾಜ್ಯಗಳ ನಡುವೆ ಹಲವಾರು ಸಭೆ ನಡೆದಿವೆ. ಇದುವರೆಗೆ ಬಗೆಹರಿದಿಲ್ಲ.
ರಾಜ್ಯಗಳ ವಾದ
ಆಸ್ತಿಗಳ ಹಂಚಿಕೆಗಾಗಿ ಶೀಲಾ ಭಿಡೆ ಎಂಬ ಅಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಿ ಇದು ವರದಿ ನೀಡಿದೆ. ಆದರೆ, ತೆಲಂಗಾಣ ರಾಜ್ಯವು ತನಗೆ ಬೇಕಾದ ಶಿಫಾರಸುಗಳನ್ನು ಮಾತ್ರ ಜಾರಿ ಮಾಡಿ ಉಳಿದವುಗಳನ್ನು ಹಾಗೆಯೇ ಬಿಟ್ಟಿದೆ ಎಂಬುದು ಆಂಧ್ರದ ವಾದವಾದರೆ, ತೆಲಂಗಾಣಕ್ಕೆ ಮಾರಕವಾದ ಶಿಫಾರಸು ಮಾಡಿದೆ ಎಂಬುದು ತೆಲಂಗಾಣ ಆರೋಪಿಸಿದೆ.
ಯಾವ ಆಸ್ತಿಗಳ ಹಂಚಿಕೆ?
ಆಂಧ್ರ ಪ್ರದೇಶ ಪುನರ್ವಿಂಗಡಣ ಕಾಯ್ದೆಯ ಶೆಡ್ನೂಲ್ 9ರ ಪ್ರಕಾರ 91 ಸಂಸ್ಥೆಗಳು ಮತ್ತು ಶೆಡ್ನೂಲ್ 10ರ ಪ್ರಕಾರ 142 ಸಂಸ್ಥೆಗಳಿವೆ. ಆದರೆ 12 ಆಸ್ತಿಗಳ ಬಗ್ಗೆ ಕಾಯ್ದೆಯಲ್ಲಿ ಯಾವುದೇ ಪ್ರಸ್ತಾವವಿಲ್ಲ. ಸದ್ಯಕ್ಕೆ ಇವುಗಳದ್ದೇ ವಿವಾದವುಂಟಾಗಿರುವುದು. ಅಂದರೆ, ಎರಡೂ ಶೆಡ್ನೂಲ್‌ಗಳ ಒಟ್ಟಾರೆ ಆಸ್ತಿಯ ಮೌಲ್ಯ 1.42 ಲಕ್ಷ ಕೋಟಿ ರೂ. ಮುಖ್ಯ ಕಚೇರಿಗಳ ಆಸ್ತಿಗಳ ಮೌಲ್ಯ 24 ಸಾವಿರ ಕೋಟಿ ರೂ. ಆಗಿದ್ದು, ಶೆಡ್ನೂಲ್ 10ರ ಆಸ್ತಿಗಳ ಮೌಲ್ಯ 34 ಸಾವಿರ ಕೋಟಿ ರೂ. ಉಳಿದ 12 ಆಸ್ತಿಗಳ ಮೌಲ್ಯ 1,759 ಕೋಟಿ ರೂ.
Related Articles
ಕೇಂದ್ರ ಏನು ಮಾಡಬಹುದು?
ಒಂದು ವೇಳೆ ಎರಡು ರಾಜ್ಯಗಳ ನಡುವಿನ ವಿವಾದ ಬಗೆಹರಿಯದಿದ್ದರೆ, ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬಹುದು. ಈ ಬಗ್ಗೆ ಕಾಯ್ದೆಯಲ್ಲಿಯೇ ಸ್ಪಷ್ಟವಾಗಿದೆ. ಅಲ್ಲದೆ, ಪ್ರಮುಖವಾಗಿ 12 ಆಸ್ತಿಗಳ ಕುರಿತ ವ್ಯಾಜ್ಯ ಬಗೆಹರಿಸಬೇಕಾಗಿದೆ.