ಕಡಬ: ಬಿಳಿನೆಲೆ ಗ್ರಾಮದ ನೆಟ್ಟಣ ಸಿಪಿಸಿಆರ್‌ಐ ( ಕೇಂದ್ರೀಯ ತೋಟದ ಬೆಳೆಗಳ ಸಂಶೋಧನ ಸಂಸ್ಥೆ) ಕಿದು ಫಾರ್ಮ್ ಮುಚ್ಚುಗಡೆಯಾಗಲಿದೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ ಕೃಷಿಕರ ನಿಯೋಗವು ಗುರುವಾರ ಬೆಂಗಳೂರಿಗೆ ತೆರಳಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದೆ.
ಸಂಸದ ನಳಿನ್‌ಕುಮಾರ್ ಕಟೀಲು ಅವರನ್ನು ಬುಧವಾರ ಮಂಗಳೂರಿನಲ್ಲಿ ಭೇಟಿ ಮಾಡಿ ಸಂಸ್ಥೆಯನ್ನು ಮುಚ್ಚದಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ಮನವಿ ಮಾಡಿರುವ ಬೆನ್ನಲ್ಲೇ ಗುರುವಾರ ಬೆಂಗಳೂರಿಗೆ ತೆರಳಿ, ಹಲವು ಮುಖಂಡರನ್ನು ನಿಯೋಗವು ಭೇಟಿಯಾಗಿದೆ.
ಮೂರು ತಿಂಗಳ ಹಿಂದೆ ಬಿಳಿನೆಲೆ ಸಿಪಿಸಿಆರ್‌ಐ ಕಿದು ಫಾರ್ಮ್ ನ್ನು ಆಂಧ್ರಪ್ರದೇಶಕ್ಕೆ ಸ್ಥಳಾಂತರ ಮಾಡಲಾಗುತ್ತದೆ ಎಂಬುದನ್ನರಿತ ಸ್ಥಳೀಯ ಕೃಷಿಕರು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಬಿಳಿನೆಲೆ ಕಿದು ಫಾರ್ಮ್ ಮುಚ್ಚದಂತೆ ಆಗ್ರಹಿಸಿ ಹೋರಾಟ ಸಂಘಟಿಸಿದ್ದರು. ಹೋರಾಟಗಾರರ ಮನವಿಗೆ ಸ್ಪಂದಿಸಿದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಚಿವರು ಹಾಗೂ ಸಂಸದರು ಕೇಂದ್ರವನ್ನು ಮುಚ್ಚಲು ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ್ದರು. ಆ ಬಳಿಕ ಬಿಳಿನೆಲೆ ಸಿಪಿಸಿಆರ್‌ಐ ಕಿದು ಫಾರ್ಮ್ ನಲ್ಲಿ ಜರಗಿದ ಬೃಹತ್ ಕೃಷಿ ಮೇಳದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಯಾವುದೇ ಕೇಂದ್ರವನ್ನು ಸ್ಥಳಾಂತರ ಮಾಡಲು ಬಿಡುವುದಿಲ್ಲ. ಈ ಬಗ್ಗೆ ಕೇಂದ್ರ ಸರಕಾರ ದಿಟ್ಟ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದರು. ವೇದಿಕೆಯಲ್ಲಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಈ ಕೇಂದ್ರವನ್ನು ಉಳಿಸುವಲ್ಲಿ ಕೇಂದ್ರ ಸರಕಾರ ಮುಂದಾಗಬೇಕು ಎಂದು ಹೇಳಿದ್ದರು. ಆದರೆ ಮತ್ತೆ ಬಿಳಿನೆಲೆ ಸಿಪಿಸಿಆರ್‌ಐ ಕೇಂದ್ರ ಮುಚ್ಚುಗಡೆಗೆ ಶಿಫಾರಸು ಮಾಡಿ ಕೇಂದ್ರೀಯ ಪುನರ್ ಪರಿಶೋಧನ ಸಮಿತಿ ವರದಿ ಸಲ್ಲಿಸಿರುವುದು ಹೋರಾಟಗಾರರ ನಿದ್ದೆಗೆಡಿಸಿದೆ.
ಅಧಿವೇಶನದಲ್ಲಿ ಪ್ರಸ್ತಾವ
ಬಿಳಿನೆಲೆ ಸಿಪಿಸಿಆರ್‌ಐ ಉಳಿಸಿ ಹೋರಾಟ ಸಮಿತಿಯ ನಿಯೋಗ ಸಂಚಾಲಕ ಬಾಲಕೃಷ್ಣ ಗೌಡ ವಾಲ್ತಾಜೆ ಅವರ ನೇತ್ವದಲ್ಲಿ ಬೆಂಗಳೂರಿಗೆ ತೆರಳಿ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾಆರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಅವರು ಬೆಳಗಾವಿ ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾವಿಸುವುದಾಗಿ ತಿಳಿಸಿದ್ದಾರೆ. ನಿಯೋಗವು ಪುತ್ತೂರು ಶಾಸಕ ಸಂಜೀವ ಮಠಂದೂರು ಹಾಗೂ ಸುಳ್ಯ ಶಾಸಕ ಎಸ್.ಅಂಗಾರ ಅವರನ್ನೂ ಭೇಟಿ ಮಾಡಿ, ಸಂಶೋಧನ ಕೇಂದ್ರವನ್ನು ಉಳಿಸುವಂತೆ ಮನವಿ ಮಾಡಿದೆ. ಜಿಲ್ಲೆಯ ಎಲ್ಲಾ ಶಾಸಕರು ಒಗ್ಗಟ್ಟಾಗಿ ವಿಧಾನ ಸಭೆಯಲ್ಲಿ ಈ ಕುರಿತು ಹೋರಾಡುವುದಾಗಿ ತಿಳಿಸಿದ್ದಾರೆ.
ಡಿ.ವಿ.ಗೆ ಮನವಿ
ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿ ಮಾಡಿ ನಿಯೋಗವು ಮತ್ತೊಮ್ಮೆ ಮನವಿ ಸಲ್ಲಿಸಿದೆ. ಈ ಬಗ್ಗೆ ಕೂಡಲೇ ಕೇಂದ್ರ ಕೃಷಿ ಸಚಿವರಲ್ಲಿ ಮಾತುಕತೆ ನಡೆಸಿ ಸಿಪಿಸಿಆರ್‌ಐ ಬಿಳಿನೆಲೆ ಕೇಂದ್ರವನ್ನು ಸ್ಥಳಾಂತರ ಮಾಡದಂತೆ ಒತ್ತಡ ಹೇರುವುದಾಗಿ ನಿಯೋಗಕ್ಕೆ ಭರವಸೆ ನೀಡಿದ್ದಾರೆ. ಪ್ರಮುಖರಾದ ನಾಗೇಶ್ ಕೈಕಂಬ, ದಯಾನಂದ ಕಾಯರ್ಗ ಮುಂತಾದವರಿದ್ದರು.