ಕಲಬುರಗಿ: ಕಬ್ಬಿಗೆ ವೈಜ್ಞಾನಿಕ ಮತ್ತು ಉತ್ತಮ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಕಬ್ಬು ಬೆಳೆಗಾರರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡುವ ವೇಳೆಯಲ್ಲಿ ಮಿನಿ ವಿಧಾನಸೌಧದ ಒಳಗೆ ಪ್ರವೇಶ ನೀಡಲು ನಿರಾಕರಿಸಿ ಪೊಲೀಸರು ಅಡ್ಡಗಟ್ಟಿದ ಪ್ರಸಂಗ ನಡೆದಿದೆ.
ಈ ವೇಳೆಯಲ್ಲಿ ಕಬ್ಬು ಬೆಳೆಗಾರರು ಜಿಲ್ಲಾಧಿಕಾರಿ ಮುಖೇನ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವುದಾಗಿ ಹಲವಾರು ಬಾರಿ ಬೇಡಿಕೊಂಡರೂ ಪೋಲಿಸರು ಮಿನಿ ವಿಧಾನಸೌಧದ ಆವರಣಕ್ಕೆ ಪ್ರವೇಶ ನೀಡುವುದಿಲ್ಲ ಎಂದು ಅಡ್ಡಗಟ್ಟಿದರು. ಈ ವೇಳೆ ಬಿಸಿಲಲ್ಲಿ ನಿಂತಿದ್ದ ಕಬ್ಬು ಬೆಳೆಗಾರರು, ನೆತ್ತಿಸುಟ್ಟು ಸಿಟ್ಟಾಗಿ ಸರ್ಕಾರದ ವಿರುದ್ಧ ಮತ್ತು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಇದರಿಂದಾಗಿ ಕೆಲಕಾಲ ಜಿಲ್ಲಾಧಿಕಾರಿಯ ಕಚೇರಿಯ ಮುಂಭಾಗದಲ್ಲಿ ಉದ್ರಿಕ್ತ ವಾತಾವರಣ ಉಂಟಾಗಿತ್ತು. ಈ ವೇಳೆ ಪೊಲೀಸರು ಹಲವರನ್ನು ತಳ್ಳಾಡಿದರು. ಇದೇ ವೇಳೆ ಕಬ್ಬು ಬೆಳೆಗಾರರು ಬಿಸಿಲಿನ ಝಳಕ್ಕೆ ಸುಸ್ತಾಗಿ ಪ್ರಜ್ಞೆ ಕಳೆದುಕೊಂಡು ರಸ್ತೆಯಲ್ಲಿ ನರಳಾಡಿದ ಘಟನೆ ಕೂಡ ನಡೆಯಿತು. ಕೂಡಲೇ ಕೆಲವರನ್ನು ನೆರಳಲ್ಲಿ ಕೂಡಿಸಿ ನೀರು ಕುಡಿಸಿ ಸುಧಾರಿಸಿಕೊಳ್ಳುವಂತೆ ಕಿವಿಮಾತು ಹೇಳಿದರೂ ಕೂಡ, ಕಬ್ಬು ಬೆಳೆಗಾರರು ತಮ್ಮ ನೋವಿಗೆ ಸರಕಾರ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಕೋಲ್ಕತಾ ಮೇಲ್ಸೇತುವೆ ಕುಸಿದದ್ದು ದೇವರ ಸಂದೇಶ…ಇದು?..; ಸಿದ್ದರಾಮಯ್ಯ ಪ್ರಶ್ನೆ
ಪೊಲೀಸರ ಈ ಕ್ರಮವನ್ನು ಜಿಲ್ಲಾ ಅಧ್ಯಕ್ಷ ಜಗದೀಶ್ ಪಾಟೀಲ್ ಕಾಳಗಿ ವಿರೋಧಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಹಕ್ಕು ಕೇಳಲು ಪ್ರತಿಯೊಬ್ಬ ಸಾಮಾನ್ಯನಿಗೂ ಅವಕಾಶವಿದೆ. ಆದರೆ ನಾವು ಕಬ್ಬು ಬೆಳೆಗಾರರು ನಮ್ಮ ಸಂಕಷ್ಟಕ್ಕೆ ಸರ್ಕಾರ ಕಿವಿಗೊಡು ಬೇಕು ಎನ್ನುವ ಉದ್ದೇಶದಿಂದ ಶಾಂತಿಯುತವಾಗಿ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದೆವು. ಈ ಸಂದರ್ಭ ಪೊಲೀಸರು ಅಡ್ಡಗಟ್ಟಿ ನಮ್ಮನ್ನು ತಡೆದಿದ್ದಾರೆ. ಇದು ಪ್ರಜಾಪ್ರಭುತ್ವದ ಮೇಲೆ ನಡೆದ ದಬ್ಬಾಳಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದ 200ನೂರಕ್ಕು ಹೆಚ್ಚು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.