ಬೆಂಗಳೂರು: ರಾಜರಾಜೇಶ್ವರಿ ನಗರ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ಕಾವೇರುತ್ತಿದೆ. ಚುನಾವಣಾ ಪ್ರಚಾರದ ವೇಳೆ ಕೈ-ಕಮಲ ಕಾರ್ಯಕರ್ತರು ಕೈ ಕೈ ಮಿಲಾಯಿಸಿದ ಘಟನೆ ನಡೆದಿದೆ.
ಲಕ್ಷ್ಮೀದೇವಿನಗರ ಬೂತ್ ನಂಬರ್ 156 ಬಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಸುಮ ಅವರ ಪ್ರಚಾರ ನಡೆಸುತ್ತಿದ್ದ ಕಾಂಗ್ರೆಸ್ ವಾರ್ಡ್ ಅಧ್ಯಕ್ಷ ಜವರೇಗೌಡ, ಕಾರ್ಯಕರ್ತಚಿಕ್ಕರಾಜು, ರಾಕೇಶ್, ವಿನೋದ್, ರೂಪೇಶ್, ಮಾಲಿಕ್ ಮತ್ತು ಇತರ ಮುಖಂಡರ ಮೇಲೆ ಬಿಜೆಪಿ ಅಭ್ಯರ್ಥಿ ಮುನಿರತ್ನಂ ನಾಯ್ಡು ಬೆಂಬಲಿಗ ವೇಲು ನಾಯ್ಕರ್ ಮತ್ತು 30 ಕ್ಕೂ ಹೆಚ್ಚು ಜನರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಗಲಾಟೆಯ ವೇಳೆ ಬೂತ್ ಮಟ್ಟದಲ್ಲಿ ಮತದಾರರಿಗೆ ಗುರುತಿನ ಚೀಟಿ ವಿತರಣೆ ನಡೆಸಲು ಸಂಗ್ರಹಿಸಿದ್ದ ಮಾಹಿತಿಯ ಪುಸ್ತಕವನ್ನೂ ಬಿಜೆಪಿ ಬೆಂಬಲಿಗರು ಹರಿದು ಹಾಕಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಮುಖ್ಯಮಂತ್ರಿ ಬದಲಿಲ್ಲ ; 2023ರ ವರೆಗೂ ಬಿಎಸ್‌ವೈ ಮುಖ್ಯಮಂತ್ರಿ: ನಳಿನ್
ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿಸಿದ ಬಿಜೆಪಿ ಅಭ್ಯರ್ಥಿ ಮುನಿರತ್ನಂ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನಂದಿನಿ ಲೇಔಟ್ ಪೊಲೀಸ್ ಠಾಣೆ ಎದುರು ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಹೆಚ್.ಎಂ.ರೇವಣ್ಣ, ಮಾಜಿ ಸಂಸದ ಧೃವನಾರಾಯಣ್, ಮಾಜಿ ಶಾಸಕ ಬಾಲರಾಜ್, ಮಾಜಿ ಬಿಬಿಎಂಪಿ ಸದಸ್ಯ ಶಿವರಾಜ್, ಕಾಂಗ್ರೆಸ್ ಮುಖಂಡ ಆರಾಧ್ಯ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಕಾನೂನು ವಿಭಾಗದ ಸೂರ್ಯ ಮುಕುಂದರಾಜ್, ಚೇತನ್ ಶಂಕರಪ್ಪ ಮತ್ತು ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.