ಕುಣಿಗಲ್: ತಾಲೂಕಿನ ಅಭಿವೃದ್ಧಿಗೆ ಬಿಜೆಪಿ ಸರ್ಕಾರದೊಂದಿಗೆ ಹೋರಾಟ ನಡೆಸಿ ಅನುದಾನ ತರುತ್ತೇನೆ ಎಂದು ಶಾಸಕ ಡಾ.ಎಚ್.ಡಿ.ರಂಗನಾಥ್ ತಿಳಿಸಿದರು. ತಾಲೂಕಿನ ಕೊತ್ತಗೆರೆ ಹೋಬಳಿ ನೀಲತ್ತಹಳ್ಳಿ ಗ್ರಾಮದಲ್ಲಿ ಬುಧವಾರ ಎಸ್‌ಸಿಪಿ ಯೋಜನೆಯಡಿ 62 ಲಕ್ಷ ರೂ. ವೆಚ್ಚದ ಸಿ.ಸಿ. ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಕುಣಿಗಲ್ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಸಮ್ಮಿಶ್ರ ಸರ್ಕಾರ ರಸ್ತೆ, ಚರಂಡಿ, ನೀರಾವರಿ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗೆ 700 ಕೋಟಿ ರೂ.ಗೂ ಅಧಿಕ ಹಣ ಮಂಜೂರು ಮಾಡಿತ್ತು. ಆದರೆ ಈಗಿನ ಬಿಜೆಪಿ ಸರ್ಕಾರ ಅನುದಾನ ತಡೆ ಹಿಡಿದಿದೆ. ಇದರಿಂದ ಕಾಮಗಾರಿ ಕುಂಠಿತಗೊಂಡಿದೆ. ಅನುದಾನ ಬಿಡುಗಡೆ ಮಾಡಿಕೊಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗುವುದು.
ಸ್ಪಂದಿಸದಿದ್ದರೆ ತಾಲೂಕಿನ ಜನರೊಂದಿಗೆ ಪಾದಯಾತ್ರೆ ಮೂಲಕ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಗ್ರಾಮಸ್ಥರು ಭಿನ್ನಾಭಿಪ್ರಾಯ ಬಿಟ್ಟು ಸರ್ಕಾರದಿಂದ ಮಂಜೂರಾಗಿರುವ ಯೋಜನೆ ಗ್ರಾಮಗಳ ಅಭಿವೃದ್ಧಿಗೆ ಸದ್ಬಳಕ್ಕೆ ಮಾಡಿಕೊಳ್ಳಬೇಕು. ಇದರಲ್ಲಿ ಗ್ರಾಮಸ್ಥರ ಜವಾಬ್ದಾರಿಯೂ ಹೆಚ್ಚಿದೆ ಎಂದು ಹೇಳಿದರು.
ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವ ಪಕ್ಕದ ದೊಡ್ಡ ಅಳ್ಳದಲ್ಲಿ ಕೊಳಚೆ ನೀರು ನಿಂತಿರುವ ಬಗ್ಗೆ ಕೆಂಡಾಮಂಡಲರಾದ ಶಾಸಕರು, ಕಲುಷಿತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಿದೆ. ಏಕೆ ಹಳ್ಳ ಮುಚ್ಚಿಲ್ಲ ಎಂದು ಪಿಡಿ ತೇಜಸ್‌ಗೆ ಪ್ರಶ್ನಿಸಿ ಕೂಡಲೇ ಮುಚ್ಚಲು ಕ್ರಮ ಕೈಗೊಳ್ಳಬೇಕೆಂದು ತಾಕೀತು ಪಡಿಸಿದರು.
ವಾಗ್ವಾದ: ಕಳೆದ ಏಳು ತಿಂಗಳಿನಿಂದ ವಾಟರ್ ಮ್ಯಾನ್‌ಗೆ ಸಂಬಳ ಕೊಟ್ಟಿಲ್ಲ. ಇದಕ್ಕಾಗಿ ಮೂರು ಸಾವಿರ ರೂ. ವಾಟರ್ ಮ್ಯಾನ್ ಸಂಜೀವಯ್ಯ ಅವರಿಂದಲೇ ಪಡೆದ್ದೀರಾ, ಎಂದು ಪಿಡಿಒ ತೇಜಸ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಯಾವ ವಾಟರ್ ಮ್ಯಾನ್‌ನಿಂದಲ್ಲೂ ಹಣ ಪಡೆದಿಲ್ಲ. ಅವರಿಗೆ ಸಾಲವಾಗಿ ಕೊಟ್ಟ ಹಣ ಪಡೆದಿದ್ದೇನೆ ಲಂಚ ಪಡೆದಿಲ್ಲ ಎಂದು ಪಿಡಿಒ ತಿಳಿಸಿದರು. ಈ ನಡುವೆ ಗ್ರಾಮಸ್ಥರ ಹಾಗೂ ಪಿಡಿಒ ನಡುವೆ ವಾಗ್ವಾದ ನಡೆಯಿತು. ಹೇಮಾವತಿ ಎಇಇ ಸುರೇಶ್, ಗ್ರಾಪಂ ಅಧ್ಯಕ್ಷೆ ಮರಿಯಮ್ಮ, ಸದಸ್ಯ ರಾಮು, ಪುರಸಭಾ ಮಾಜಿ ಸದಸ್ಯ ಪಾಪಣ್ಣ, ಮುಖಂಡರಾದ ರವಿ, ಶೇಖರಪ್ಪ, ನಾಗರಾಜು, ಪಾಪಣ್ಣ ಮತ್ತಿತರರಿದ್ದರು.
ಪಿಡಿಒಗೆ ತರಾಟೆ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತೇಜಸ್ ಗ್ರಾಮದ ಅಭಿವೃದ್ಧಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈವರೆಗೂ ಗ್ರಾಮಕ್ಕೆ ಭೇಟಿ ನೀಡರಲಿಲ್ಲ. ಶಾಸಕರು ಬಂದಿರುವುದಕ್ಕೆ ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ ಎಂದು ತರಾಟೆ ತೆಗೆದುಕೊಂಡ ಗ್ರಾಮಸ್ಥರು, ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕರಿಗೆ ದೂರು ಹೇಳಿದರು. ಇದರಿಂದ ಸಿಟ್ಟಾದ ಶಾಸಕರು, ಪಂಚಾಯಿತಿಯಲ್ಲಿ ಕುಳಿತು ಏನ್ ಮಾಡ್ತೀರಾ. ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಅರಿತು ಮೂಲಸೌಲಭ್ಯ ಕಲ್ಪಿಸಿಕೊಡಲು ಏಕೆ ಕ್ರಮ ಕೈಗೊಂಡಿಲ್ಲ ಎಂದು ಗದರಿದರು.