ಬೆಳಗಾವಿ:ದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಲವ್ ಜಿಹಾದ್ ಹಾಗೂ ಮತಾಂತರ ವಿರುದ್ಧ ಹಿಂದೂ ಯುವಕರು ಹೋರಾಟ ಮಾಡಬೇಕು ಎಂದು ಆಂಧ್ರ ಪ್ರದೇಶ ಭಾಗ್ಯನಗರದ ಬಿಜೆಪಿ ಶಾಸಕ ರಾಜಾಸಿಂಗ್ ಠಾಕೂರ ಹೇಳಿದರು.
ತಾಲೂಕಿನ ನಾವಗೆ ಬಳಿಯ ಗಣೇಶಬಾಗ್‌ದಲ್ಲಿ ರವಿವಾರ ಧನಂಜಯ ಜಾಧವ ಮಿತ್ರ ಪರಿವಾರದಿಂದ ಹಮ್ಮಿಕೊಂಡಿದ್ದ ಹಿಂದೂ ಸಮ್ಮಿಲನ, ಸ್ನೇಹ ಭೋಜನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜಕೀಯದಲ್ಲಿ ನಾಯಕರಿಗೆ ಭವಿಷ್ಯ ಇಲ್ಲ. ಆದರೆ ಕಟ್ಟಾ ಹಿಂದುತ್ವವಾದಿ ಯಾಗಿ ರಾಷ್ಟ್ರ ಕಟ್ಟಲು ಸಂಕಲ್ಪ ಮಾಡಬೇಕು. ಪ್ರತಿ ಗ್ರಾಮಕ್ಕೆ ತೆರಳಿ ಒಂದು ಸೇನೆ ನಿರ್ಮಿಸುವ ಪ್ರತಿಜ್ಞೆ ಮಾಡಬೇಕು. ಇಂಥ ಕಾರ್ಯಕರ್ತರಿಂದಲೇ ಹಿಂದೂ ರಾಷ್ಟ್ರ ನಿರ್ಮಾಣ ಆಗುತ್ತದೆ. ಮತಾಂತರ ಹೆಸರಿನಲ್ಲಿ ಅನೇಕ ಹಿಂದುಗಳನ್ನು ಮತಾಂತರ ಮಾಡಲಾಗುತ್ತಿದೆ. ಹಿಂದುಧರ್ಮ ರಕ್ಷಣೆಗಾಗಿ ಎಲ್ಲರೂ ಶ್ರಮಪಡಬೇಕು ಎಂದರು.
ಹಿಂದೂಗಳನ್ನು ಮತಾಂತರ ಮಾಡುವ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಹಿಂದೂ ಕಾರ್ಯಕರ್ತರು. ಸಂಕಲ್ಪ ಮಾಡಬೇಕು. ಹಸಿರು ಟೋಪಿಯವರದ್ದು ದೊಡ್ಡ ಇತಿಹಾಸವಿಲ್ಲ. ಕೇವಲ ಎರಡೂವರೆ ಸಾವಿರ ವರ್ಷದ ಇತಿಹಾಸ ಇದೆ ಎಂದು ಟೀಕಿಸಿದ ಅವರು, ದೇಶದಿಂದ ಬ್ರಿಟಿಷರು ಹೋದರೂ ಕಾಂಗ್ರೆಸ್‌ನವರನ್ನು ಬಿಟ್ಟು ಹೋಗಿದ್ದಾರೆ. ದೇಶದಲ್ಲಿ ಕಾಂಗ್ರೆಸ್‌ನಿಂದ ಹಿಂದೂ-ಹಿಂದೂಗಳ ಮಧ್ಯೆ, ಭಾಷೆಗಳ ಮಧ್ಯೆ ಜಗಳ ಹಚ್ಚಲು ಷಡ್ಯಂತ್ರ ನಡೆಯುತ್ತಿದೆ. ಬ್ರಿಟಿಷರು ದ್ರೋಹಿಗಳನ್ನು ಬಿಟ್ಟು ಹೋಗಿದ್ದಾರೆ. ಕನ್ನಡಿಗರು ಮತ್ತು ಮರಾಠಿಗರ ಮಧ್ಯೆ ಜಗಳ ಹಚ್ಚಲು ಷಡ್ಯಂತ್ರ ನಡೆಯುತ್ತಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಇತ್ತೀಚೆಗೆ ಛತ್ರಪತಿ ಶಿವಾಜಿ ಮಹಾರಾಜ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ಅವಮಾನಿಸಿ ಕನ್ನಡ ಹಾಗೂ ಮರಾಠಿಗರ ಮಧ್ಯೆ ವಿಷಬೀಜ ಬಿತ್ತುವ ಕೆಲಸ ಮಾಡಲಾಗಿದೆ. ಇದರ ಹಿಂದೆ ಕಾಂಗ್ರೆಸ್‌ನಕೈವಾಡವಿದೆ.ಕಾಂಗ್ರೆಸ್‌ನಿಂದ ಹಿಂದೂಗಳ ರಕ್ಷಣೆ ಅಸಾಧ್ಯ. ಬೆಳಗಾವಿಯ ನೆಲ ಪುಣ್ಯಭೂಮಿ, ವೀರಭೂಮಿ. ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ಆ ವೇಳೆಯೂ ನಮ್ಮಲ್ಲಿ ದ್ರೋಹಿಗಳು ಇದ್ದರು. ಎಂದು ಹೇಳಿದರು.
ಸಂಸದೆ ಮಂಗಲಾ ಅಂಗಡಿ ಮಾತನಾಡಿ, 25 ವರ್ಷಗಳಿಂದ ನಡೆಯುತ್ತಿರುವ ಈ ಚಿಹ್ನೆ ಸಮ್ಮಿಲನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿರುವುದು ಸಂತಸದ ವಿಷಯ. ಹಿಂದೂಗಳು ಏಕತೆಯಿಂದ ದೇಶ ರಕ್ಷಣೆಗೆ ಮುಂದಾಗಬೇಕು ಎಂದರು. ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ ಮಾತ ನಾಡಿ, ಹಿಂದೂಗಳು ಒಗ್ಗಟ್ಟು ಪ್ರದರ್ಶಿಸಿ ದೇಶ ಮತ್ತು ಸಮಾಜ ರಕ್ಷಣೆಗೆ ಮುಂದಾಗಬೇಕು. ಅನೇಕ ವರ್ಷಗಳಿಂದ ಹಿಂದೂಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು
ಅನೇಕ ಮಹಾನ್ ಪುರುಷರು ತಡೆದು ವೈರಿಗಳನ್ನು ಹಿಮ್ಮೆಟ್ಟಿ ಸುವ ಕೆಲಸ ಮಾಡಿದ್ದಾರೆ ಎಂದರು.
ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ, ಹಿಂದೂ ಸಮ್ಮಿಲನ ರೂವಾರಿ ಧನಂಜಯ ಜಾಧವ ಮಾತನಾಡಿ, 25 ವರ್ಷಗಳಿಂದ ಹಿಂದೂ ಸ್ನೇಹಿತರು ಸೇರಿ ಆಯೋಜಿಸಿಕೊಂಡು ಬಂದಿರುವ ಈ ಸಮ್ಮಿಲನ ಕಾರ್ಯಕ್ರಮ ಯಶಸ್ವಿಯಾಗಿ ಮುಂದುವರಿಯುತ್ತಿದೆ ಎಂದ ಅವರು, ಮೊದಲು ಬ್ರಿಟಿಷರು ಜಾತಿಗಳ ಮಧ್ಯೆ, ಭಾಷೆಗಳ ಮಧ್ಯೆ ಜಗಳ ಹಚ್ಚುತ್ತಿದ್ದರು. ಆ ನೀಚ ಕೆಲಸವನ್ನು ಈಗ ಕಾಂಗ್ರೆಸ್‌ನವರು ಮಾಡುತ್ತಿದಾರೆ ಎಂದು ದೂರಿದರು.
ಮುಖಂಡರಾದ ಸಂಜಯ ಕುಬಲ್, ಪಂಡಿತ ಓಗಲೆ, ಪಂಕಜ ಘಾಡಿ, ಷಡಕ್ಷರಿ ಹಿರೇಮಠ, ಪ್ರದೀಪ ಪಾಟೀಲ, ಸುರೇಶ ಘೋರ್ಪಡೆ, ಸಿದ್ದು ಹುಕ್ಕೇರಿ, ಬಸವರಾಜ ಡಮ್ಮಣಗಿ, ರಮೇಶ ದೇಶಪಾಂಡೆ, ಪ್ರಥ್ವಿಸಿಂಗ್ ಸೇರಿದಂತೆ ಇತರರು ಇದ್ದರು.