ಬೀದರ್: ಗಡಿ ನಾಡು ಬೀದರ್ ನಲ್ಲಿ ಕೋವಿಡ್ ಸಾವಿನ ಸರಣಿ ಮುಂದುವರೆದಿದ್ದು, ರವಿವಾರ ಕೋವಿಡ್ ಸೋಂಕಿಗೆ ಐದನೇ ಬಲಿ ಆಗಿದೆ.
ಇನ್ನೊಂದೆಡೆ ಮಹಾರಾಷ್ಟ್ರ ಕಂಟಕದಿಂದಾಗಿ ಮತ್ತೆ ಹೊಸ 33 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಈಗ 163ಕ್ಕೆ ತಲುಪಿದೆ.
ಚಿಟಗುಪ್ಪದ ಕಂಟೈನ್ಮೆಂಟ್ ಝೋನ್‌ನ ನಿವಾಸಿಯಾಗಿರುವ 75 ವರ್ಷದ ವ್ಯಕ್ತಿ ರಕ್ತದೊತ್ತಡ ಮತ್ತು ಉಸಿರಾಟದ ತೊಂದರೆ ಹಿನ್ನಲೆ ಬೀದರನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಪಡೆದಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೇ 29ರಂದು ತಮ್ಮ ಸ್ವಗ್ರಾಮದಲ್ಲಿ ನಿಧನರಾಗಿದ್ದರು. ಅವರ ಕೋವಿಡ್- 19 ಪರೀಕ್ಷೆ ಫಲಿತಾಂಶದಲ್ಲಿ ಪಾಸಿಟಿವ್ ಬಂದಿದೆ. ಇದರೊಂದಿಗೆ ಚಿಟಗುಪ್ಪ ತಾಲೂಕಿನಲ್ಲೇ ಮೂರನೇ ಸಾವು ಸಂಭವಿಸಿದಂತಾಗಿದ್ದು, ಆ ಪ್ರದೇಶದಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.
ಬೀದರನ ಓಲ್ಡ್ ಸಿಟಿಯ 82 ವರ್ಷದ (ಪಿ-590) ವ್ಯಕ್ತಿ ಕೋವಿಡ್ ಗೆ ಮೊದಲ ಬಲಿ ಆಗಿದ್ದರು. ನಂತರ ಚಿಟಗುಪ್ಪಾದ 50 ವರ್ಷದ (ಪಿ-1041), ಬೀದರ ವಿದ್ಯಾನಗರದ 49 ವರ್ಷದ (ಪಿ-1712) ಮತ್ತು ಫಾತ್ಮಾಪೂರದ 47 ವರ್ಷದ ಮಹಿಳೆ (ಪಿ-2783) ರೋಗಿಗಳು ಸೋಂಕಿನಿಂದ ಮೃತಪಟ್ಟಿದ್ದು, ಈಗ ಐದನೇ ಸಾವು ಸಂಭವಿಸಿದಂತಾಗಿದೆ.
ಇನ್ನೂ ಜಿಲ್ಲೆಯಲ್ಲಿ ರವಿವಾರ ಪತ್ತೆಯಾಗಿರುವ ಒಟ್ಟು ಸೋಂಕಿತರಲ್ಲಿ 33 ಪ್ರಕರಣಗಳು ಮಹಾರಾಷ್ಟ್ರ ಸಂಪರ್ಕ ಹೊಂದಿದ್ದರೆ, ಇನ್ನುಳಿದ 7 ಜಿಲ್ಲೆಯ ಕಂಟೈನ್ಮೆಂಟ್ ಪ್ರದೇಶಗಳ ನಂಟು ಇದೆ.
ಸೋಂಕಿತರಲ್ಲಿ 5 ಜನ ಬಾಲಕಿಯರಿದ್ದಾರೆ. ಒಟ್ಟು ಕೇಸ್‌ಗಳಲ್ಲಿ ಭಾಲ್ಕಿ ತಾಲೂಕು 9, ಬಸವಕಲ್ಯಾಣ, ಬೀದರ ಮತ್ತು ಚಿಟಗುಪ್ಪ ತಾಲೂಕು ತಲಾ 7, ಹುಮನಾಬಾದ, 2 ಮತ್ತು ಕಮಲನಗರ ತಾಲೂಕಿನಲ್ಲಿ 1 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಜಿಲ್ಲೆಯಲ್ಲಿ ಹೊಸ 33 ಕೇಸ್‌ಗಳು ಸೇರಿ ಈವರೆಗೆ 163 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಐದು ಜನ ಮೃತಪಟ್ಟಿದ್ದರೆ, 27 ಜನ ಚಿಕಿತ್ಸೆಯಿಂದ ಗುಣಮುಖರಾಗಿ ಬಿಡುಗಡೆ ಆಗಿದ್ದು, ಇನ್ನೂ 121 ಸಕ್ರೀಯ ಪ್ರಕರಣಗಳು ಇವೆ.