ಅಲ್ ರಯಾನ್: ಫಿಫಾ ವಿಶ್ವಕಪ್‌ನ ಮೊದಲ ನಾಕೌಟ್ ಪಂದ್ಯ ಶನಿವಾರ ರಾತ್ರಿ ನಡೆದಿದೆ. ಅಮೆರಿಕ ವಿರುದ್ಧ ನಡೆದ ಪ್ರೀಕ್ವಾರ್ಟರ್ ಫೈನಲ್‌ನಲ್ಲಿ 3-1 ಗೋಲುಗಳಿಂದ ಗೆಲುವು ಸಾಧಿಸಿದ ನೆದರ್ಲೆಂಡ್ಸ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಇಲ್ಲಿಗೆ ಅಮೆರಿಕ ಆಟ ಮುಗಿದಿದೆ. ಅದು ಗಂಟುಮೂಟೆ ಕಟ್ಟಿದೆ.
ನೆದರ್ಲೆಂಡ್ಸ್ ಪಂದ್ಯದ ಆರಂಭದಿಂದಲೇ ಅಬ್ಬರಿಸಲುತೊಡಗಿತು. 10ನೇ ನಿಮಿಷದಲ್ಲಿ ಮೆಂಫಿಸ್ ಡೆಪೇ ಗೋಲು ಸಿಡಿಸಿದರು. 46ನೇ ನಿಮಿಷದಲ್ಲಿ ಡ್ಯಾಲಿ ಗೋಲಿನೊಂದಿಗೆ ಮೆರೆದಾಡಿದರು. ಈ ಹಂತದಲ್ಲಿ ಅಮೆರಿಕ ಸಂಪೂರ್ಣ ನಿರುತ್ತರಗೊಂಡಿತ್ತು.
76ನೇ ನಿಮಿಷದಲ್ಲಿ ಅಮೆರಿಕದ ಹಾಜಿ ರೈಟ್ ಗೋಲು ಬಾರಿಸಿದರೂ, ಅಷ್ಟರಲ್ಲಾಗಲೇ ಬಹಳ ತಡವಾಗಿತ್ತು. ತಿರುಗಿಬೀಳುವುದು ಕಷ್ಟ ಎಂಬ ಸ್ಥಿತಿಯಿತ್ತು. ಆದರೂ ಅಮೆರಿಕಕ್ಕೆ ಒಂದು ಆಶಾವಾದವಿತ್ತು. ಅದು ಪೂರ್ಣ ಇಲ್ಲವಾಗಿದ್ದು 81ನೇ ನಿಮಿಷದಲ್ಲಿ. ಡಮ್‌ಫ್ರೈಸ್ ಆಗ ಗೋಲು ಬಾರಿಸಿ, ನೆದರ್ಲೆಂಡ್ಸ್ ಗೋಲುಗಳ ಸಂಖ್ಯೆಯನ್ನು 3ಕ್ಕೇರಿಸಿದರು.
ಅಮೆರಿಕದ ಸಾಧನೆ 1ರಲ್ಲೇ ಉಳಿಯಿತು.ಪಂದ್ಯ ಮುಗಿದಾಗ ನಿರೀಕ್ಷೆಯಂತೆ ಅಮೆರಿಕ ಸೋತಿತ್ತು. ಆದರೆ ವಸ್ತುಸ್ಥಿತಿಯಲ್ಲಿ ನೆದರ್ಲೆಂಡ್ಸ್‌ಗೆ ಇಲ್ಲಿಂದಲೇ ನಿಜವಾದ ಸವಾಲುಗಳು ಆರಂಭ. ಪ್ರತಿಯೊಂದು ಪಂದ್ಯದಲ್ಲಿ ಮೇಲೇರಿದಂತೆಲ್ಲ ಬಲಿಷ್ಠ ತಂಡಗಳು ಎದುರಾಗುತ್ತವೆ.