Advertisement

ಜಪಾನ್‌ ನಾಕೌಟ್‌ ಹಾದಿ ದುರ್ಗಮ; ಅನಿರೀಕ್ಷಿತವಾಗಿ ಗೆಲುವು ಸಾಧಿಸಿದ ಕೋಸ್ಟಾರಿಕ

11:09 PM Nov 27, 2022 | Team Udayavani |

ಅಲ್‌ ರಯಾನ್‌: ವಿಶ್ವಕಪ್‌ ಫ‌ುಟ್‌ಬಾಲ್‌ನಲ್ಲಿ ಅನಿರೀಕ್ಷಿತಗಳು ಸಂಭವಿಸಿದರೆ ಅದನ್ನು ಅಚ್ಚರಿ ಅನ್ನುವಂತಹದ್ದಿಲ್ಲ. ಕಾರಣ ಕ್ರಿಕೆಟ್‌ನಲ್ಲಿ ಟಿ20 ಪಂದ್ಯಗಳು ಹೇಗೋ, ವಿಶ್ವಕಪ್‌ ಫ‌ುಟ್‌ಬಾಲ್‌ ಹಾಗೆ. ಅದಕ್ಕೆ ಸ್ಪಷ್ಟ ಸಾಕ್ಷಿ ಭಾನುವಾರದ ಜಪಾನ್‌-ಕೋಸ್ಟಾರಿಕ ನಡುವಿನ ಪಂದ್ಯ.

Advertisement

ಒಂದೆಡೆ ಬಲಿಷ್ಠ ಜರ್ಮನಿಯನ್ನು 2-1 ಗೋಲುಗಳಿಂದ ಹೊಡೆದುರುಳಿಸಿ ಬಂದಿದ್ದ ಜಪಾನ್‌, ಇನ್ನೊಂದೆಡೆ ಸ್ಪೇನ್‌ ಕೈಯಲ್ಲಿ 7-0 ಆಘಾತ ಅನುಭವಿಸಿದ್ದ ಕೋಸ್ಟಾರಿಕ ತಂಡಗಳು “ಅಲ್‌ ರಯಾನ್‌ ಸ್ಟೇಡಿಯಂ’ನಲ್ಲಿ ಎದುರಾಗಿದ್ದವು. ನಾಕೌಟ್‌ ಕನಸಿನಲ್ಲಿ ವಿಹರಿಸುತ್ತಿದ್ದ ಜಪಾನ್‌ ಇಲ್ಲಿ ನೆಚ್ಚಿನ ತಂಡವಾಗಿತ್ತು. ಆದರೆ ಗೆಲುವಿನ ಫ‌ಲಿತಾಂಶ ಕೋಸ್ಟಾರಿಕ ಪರವಾಗಿ ಬಂತು. ಅದು ಏಕೈಕ ಗೋಲಿನ ಅಚ್ಚರಿಯ ಜಯ ಸಾಧಿಸಿ ನಾಕೌಟ್‌ ರೇಸ್‌ನಲ್ಲಿ ಉಳಿದುಕೊಂಡಿತು.

ಈ ಪಂದ್ಯ ಗೋಲಿಲ್ಲದೆ ಡ್ರಾಗೊಂಡೀತೆಂಬ ಸಾಧ್ಯತೆಯೇ ಹೆಚ್ಚಿತು. ಡ್ರಾ ಫ‌ಲಿತಾಂಶ ದಾಖಲಾದರೂ ಜಪಾನ್‌ಗೆ ಲಾಭವಾಗುತ್ತಿತ್ತು. ಅದು “ಇ’ ವಿಭಾಗದ ಅಗ್ರಸ್ಥಾನ ಅಲಂಕರಿಸುತ್ತಿತ್ತು. ಆದರೆ 81ನೇ ನಿಮಿಷದಲ್ಲಿ ಬಿರುಗಾಳಿಯಂತೆ ಬಂದ ಕೀಶರ್‌ ಫ‌ುಲ್ಲರ್‌ ಚೆಂಡನ್ನು ಜಪಾನ್‌ ಗೋಲುಪೆಟ್ಟಿಗೆಗೆ ರವಾನಿಸಿದರು. ಪಂದ್ಯದ ಫ‌ಲಿತಾಂಶ ಕೋಸ್ಟಾರಿಕ ಪರವಾಗಿ ಬರಲು ಈ ಒಂದು ಹೊಡೆತ ಧಾರಾಳವಾಯಿತು.

ಜಪಾನ್‌ ಬರೋಬ್ಬರಿ 5 ಬದಲಾವಣೆಗಳೊಂದಿಗೆ ಕಣಕ್ಕಿಳಿದಿತ್ತು. ಕೋಚ್‌ ಹಾಜಿಮ್‌ ಮೊರಿಯಾಸು ಇಷ್ಟೊಂದು ಪರಿವರ್ತನೆ ಏಕೆ ಮಾಡಿದರೆಂಬುದೇ ಅಚ್ಚರಿಯಾಗಿ ಕಂಡಿತು. ಆದರೆ ಎರಡೇ ಪಂದ್ಯಗಳಲ್ಲಿ ಜಪಾನ್‌ ತಂಡದ ಎಲ್ಲ 26 ಆಟಗಾರರೂ ವಿಶ್ವಕಪ್‌ ಆಡಿದ್ದು ಮಾತ್ರ ಸುಳ್ಳಲ್ಲ.

ಜರ್ಮನಿಗೆ ಜೀವದಾನ: ಈ ಜಯದಿಂದ ನಿಜವಾದ ಜೀವದಾನ ಲಭಿಸಿದ್ದು ಜರ್ಮನಿಗೆ. ಅದಿನ್ನೂ ಗೆಲುವಿನ ಖಾತೆ ತೆರೆದಿಲ್ಲ. ಜರ್ಮನ್‌ ಪಡೆ ತಡರಾತ್ರಿ ಸ್ಪೇನ್‌ ವಿರುದ್ಧ ಕಣಕ್ಕಿಳಿಯಲಿದ್ದು, ಅಂತಿಮ ಸ್ಥಾನದಿಂದ ಮೇಲೇರಿ ಬರಲು ಹರಸಾಹಸ ಮಾಡಲಿದೆ. ಹಾಗೆಯೇ ಈ ಸೋಲಿನಿಂದ ಜಪಾನ್‌ ನಾಕೌಟ್‌ ಹಾದಿಯೂ ದುರ್ಗಮಗೊಂಡಿದೆ. ಅಂತಿಮ ಲೀಗ್‌ ಪಂದ್ಯದಲ್ಲಿ ಅದು ಸ್ಪೇನ್‌ ವಿರುದ್ಧ ಆಡಲಿದೆ.

Advertisement

ಫ‌ಲಿತಾಂಶ
ಕೋಸ್ಟಾರಿಕ: 01
ಜಪಾನ್‌: 00

Advertisement

Udayavani is now on Telegram. Click here to join our channel and stay updated with the latest news.

Next