Advertisement

ಫಿಫಾ ವಿಶ್ವಕಪ್‌ ಫುಟ್ ಬಾಲ್: ಕತಾರ್‌ ಕ್ರೀಡಾಂಗಣಗಳಿಗೆ ಒಂದು ಸುತ್ತು

11:40 PM Nov 19, 2022 | Team Udayavani |

ಕತಾರ್‌ನಲ್ಲಿ ಫಿಫಾ ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಗಳು 8 ವಿವಿಧ ಕ್ರೀಡಾಂಗಣಗಳಲ್ಲಿ ನಡೆಯಲಿವೆ. ಈ ಕ್ರೀಡಾಂಗಣಗಳ ಕಿರು ಪರಿಚಯ ಇಲ್ಲಿದೆ.

Advertisement

ಅಲ್‌ ಬೈತ್‌ ಕ್ರೀಡಾಂಗಣ
ವಿಶ್ವಕಪ್‌ ಫ‌ುಟ್‌ಬಾಲ್‌ ಕೂಟದ ಉದ್ಘಾಟನೆ ಮತ್ತು ಆರಂಭಿಕ ಪಂದ್ಯವು ಈ ಕ್ರೀಡಾಂಗಣದಲ್ಲಿ ನಡೆಯಲಿದೆ. 60 ಸಾವಿರ ಆಸನ ಸಾಮರ್ಥ್ಯದ ಈ ಕ್ರೀಡಾಂಗಣ ದೋಹಾದಿಂದ ಉತ್ತರಕ್ಕೆ 35 ಕಿ.ಮೀ. ದೂರದ ಅಲ್‌ ಖೋರ್‌ ನಗರದಲ್ಲಿದೆ. ಇಲ್ಲಿ ಸೆಮಿಫೈನಲ್‌ ಪಂದ್ಯವಲ್ಲದೇ ಒಂದು ಕ್ವಾರ್ಟರ್‌ ಫೈನಲ್‌, ಅಂತಿಮ 16ರ ಸುತ್ತಿನ ಒಂದು ಪಂದ್ಯ ಹಾಗೂ 5 ಲೀಗ್‌ ಹಂತದ ಪಂದ್ಯಗಳು ನಡೆಯಲಿವೆ.

ಕತಾರ್‌ನ ಅಲೆಮಾರಿ ಜನರ ಬೈತ್‌ ಅಲ್‌ ಶಾರ್‌ನಿಂದ ಸ್ಫೂರ್ತಿ ಪಡೆದು ಟೆಂಟ್‌ ಮಾದರಿಯಲ್ಲಿ ನಿರ್ಮಾಣಗೊಂಡ ಆಧುನಿಕ ಫುಟ್‌ಬಾಲ್‌ ಕ್ರೀಡಾಂಗಣ ಇದಾಗಿದೆ. ಡೇರೆಗಳನ್ನು ಕಪ್ಪು ಮತ್ತು ಬಿಳಿ ಪಟ್ಟೆಗಳಿಂದ ಗುರುತಿಸಲಾಗುತ್ತದೆ.

ಲುಸೈಲ್‌ ಕ್ರೀಡಾಂಗಣ
ಈ ಕ್ರೀಡಾಂಗಣದಲ್ಲಿ ವಿಶ್ವಕಪ್‌ ಫ‌ುಟ್‌ಬಾಲ್‌ ಕೂಟದ ಫೈನಲ್‌ ಹಣಾಹಣಿ ನಡೆಯಲಿದೆ. ಇದು 80 ಸಾವಿರ ಆಸನ ಸಾಮರ್ಥ್ಯ ಹೊಂದಿದೆ. ಈ ಕ್ರೀಡಾಂಗಣ ಲುಸೈಲ್‌ ಸಿಟಿಯಲ್ಲಿದ್ದು, ಮಧ್ಯ ದೋಹಾದಿಂದ ಉತ್ತರಕ್ಕೆ 20 ಕಿ.ಮೀ. ದೂರದಲ್ಲಿದೆ.

ಈ ಕ್ರೀಡಾಂಗಣದಲ್ಲಿ ಐದು ಲೀಗ್‌ ಹಂತ, ಒಂದು ಅಂತಿಮ 16ರ ಸುತ್ತಿನ, ಒಂದು ಕ್ವಾರ್ಟರ್‌ ಫೈನಲ್‌ ಮತ್ತು ಒಂದು ಸೆಮಿಫೈನಲ್‌ ಪಂದ್ಯ ನಡೆಯಲಿದೆ.

Advertisement

ಫ‌ುಟ್‌ಬಾಲ್‌ ಮತ್ತು ವಾಸ್ತುಶಿಲ್ಪದ ಇತಿಹಾಸದಲ್ಲಿ ಇದಕ್ಕೆ ವಿಶೇಷ ಸ್ಥಾನಮಾನವಿದೆ. ಈ ಕ್ರೀಡಾಂಗಣದ ವಿನ್ಯಾಸವು ನಾಗರಿಕತೆಯ ಉದಯದ ಸಮಯದಲ್ಲಿ ಅರಬ್‌ ಮತ್ತು ಇಸ್ಲಾಮಿಕ್‌ ಪ್ರಪಂಚದಾದ್ಯಂತ ಕಂಡು ಬರುವ, ಕೈಯಿಂದ ರಚಿಸಲಾದ ಬಟ್ಟಲುಗಳನ್ನು ಪ್ರತಿಬಿಂಬಿಸುತ್ತದೆ.

ಎಜುಕೇಶನ್‌ ಸಿಟಿ ಸ್ಟೇಡಿಯಂ
ಅಲ್‌ ರಯಾನ್‌ನಲ್ಲಿರುವ ಈ ಕ್ರೀಡಾಂಗಣ ಮಧ್ಯ ದೋಹಾದ ವಾಯುವ್ಯಕ್ಕೆ 7 ಕಿ.ಮೀ. ದೂರದಲ್ಲಿದೆ. 40 ಸಾವಿರ ಆಸನದ ಸಾಮರ್ಥ್ಯ ಹೊಂದಿರುವ ಈ ಕ್ರೀಡಾಂಗಣದಲ್ಲಿ ಒಂದು ಕ್ವಾರ್ಟರ್‌ ಫೈನಲ್‌, ಒಂದು ಅಂತಿಮ 16ರ ಸುತ್ತಿನ ಹಾಗೂ 5 ಲೀಗ್‌ ಹಂತದ ಪಂದ್ಯಗಳು ನಡೆಯಲಿವೆ. ಈ ಕ್ರೀಡಾಂಗಣ ವಿಶಿಷ್ಟ ಸ್ಥಳವಾಗಿದ್ದು, ಅರಬ್‌ ಪ್ರಪಂಚದಾದ್ಯಂತ ಮತ್ತು ಅದರಾಚೆಗಿನ ವಿದ್ಯಾರ್ಥಿಗಳು ಮತ್ತು ಶಿಕ್ಷಣತಜ್ಞರಿಗೆ ಕ್ರಿಯಾತ್ಮಕ ಕಲಿಕೆಯ ಕೇಂದ್ರವಾಗಿದೆ.

ಅಲ್‌ ತುಮಾಮ ಕ್ರೀಡಾಂಗಣ
ಈ ಕ್ರೀಡಾಂಗಣವು ಮಧ್ಯ ದೋಹಾದಿಂದ ದಕ್ಷಿಣಕ್ಕೆ 12 ಕಿ.ಮೀ. ದೂರದಲ್ಲಿದೆ. ಆಸನ ಸಾಮರ್ಥ್ಯ 40 ಸಾವಿರ. ಇಲ್ಲಿ ಒಂದು ಕ್ವಾರ್ಟರ್‌ಫೈನಲ್‌, ಒಂದು ಅಂತಿಮ 16ರ ಸುತ್ತಿನ ಮತ್ತು 5 ಲೀಗ್‌ ಹಂತದ ಪಂದ್ಯಗಳು ನಡೆಯಲಿವೆ.
ಈ ಕ್ರೀಡಾಂಗಣದ ಕ್ರಿಯಾತ್ಮಕ ಮತ್ತು ಕಾಲ್ಪನಿಕ ಆಕಾರವು ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಸಾಕ್ಷಿ. ಇದರ ದಪ್ಪನೆಯ ವೃತ್ತಾಕಾರದ ರೂಪವು “ಗಹ್‌ಫಿಯಾ’ವನ್ನು ಪ್ರತಿಬಿಂಬಿಸುತ್ತದೆ. ಸಾಂಪ್ರದಾಯಿಕವಾಗಿ ನೇಯ್ದ ಕ್ಯಾಪ್‌ಗೆ ಗಹ್‌ಫಿಯಾ ಎಂದು ಕರೆಯಲಾಗುತ್ತದೆ. ಅದನ್ನು ಅರಬ್‌ ಪ್ರಪಂಚದಾದ್ಯಂತ ಪುರುಷರು ಮತ್ತು ಹುಡುಗರು ಧರಿಸುತ್ತಾರೆ.

ಖಲೀಫಾ ಇಂಟರ್‌ನ್ಯಾಶನಲ್‌ ಸ್ಟೇಡಿಯಂ
ಅಸ್ಪಯೈರ್‌ನಲ್ಲಿರುವ ಈ ಕ್ರೀಡಾಂಗಣ 40 ಸಾವಿರ ಆಸನ ಸಾಮರ್ಥ್ಯ ಹೊಂದಿದ್ದು ಮಧ್ಯ ದೋಹಾದಿಂದ ಪಶ್ಚಿಮಕ್ಕೆ 5 ಕಿ.ಮೀ. ದೂರದಲ್ಲಿದೆ. ಇಲ್ಲಿ ಮೂರನೇ ಸ್ಥಾನಕ್ಕಾಗಿ ನಡೆಯುವ ಪಂದ್ಯ ಸಹಿತ ಒಂದು ಅಂತಿಮ 16ರ ಸುತ್ತು ಹಾಗೂ 5 ಲೀಗ್‌ ಹಂತದ ಪಂದ್ಯಗಳು ನಡೆಯಲಿವೆ.

ಈ ಕ್ರೀಡಾಂಗಣ 1976ರಲ್ಲೇ ಉದ್ಘಾಟನೆಯಾಗಿದ್ದು, ಹಲವಾರು ಪ್ರಮುಖ ಕ್ರೀಡಾಕೂಟಗಳು ನಡೆದಿವೆ. ವಿಶ್ವಕಪ್‌ಗಾಗಿ ಈ ಕ್ರೀಡಾಂಗಣವನ್ನು ನವೀಕರಿಸಲಾಗಿದೆ. 12 ಸಾವಿರದಷ್ಟು ಆಸನ ಸಾಮರ್ಥ್ಯವನ್ನು ಹೆಚ್ಚಿಸಲಾಗಿದ್ದು, ಡಿಜಿಟಲ್‌ ಬೆಳಕಿನ ವ್ಯವಸ್ಥೆ ಹಾಗೂ ಆಧುನಿಕ ಸೌಕರ್ಯಗಳನ್ನು ಕಲ್ಪಿಸಲಾಗಿದೆ.

ಅಲ್‌ ಜನೌಬ್‌ ಸ್ಟೇಡಿಯಂ
ಅಲ್‌ ವಕ್ರಾದಲ್ಲಿರುವ ಈ ಕ್ರೀಡಾಂಗಣ 40 ಸಾವಿರ ಆಸನ ಸಾಮರ್ಥ್ಯವನ್ನು ಹೊಂದಿದೆ. ಮಧ್ಯ ದೋಹಾದಿಂದ ದಕ್ಷಿಣಕ್ಕೆ 22 ಕಿ.ಮೀ. ದೂರದಲ್ಲಿದೆ. ಇಲ್ಲಿ ಅಂತಿಮ 16ರ ಸುತ್ತಿನ ಒಂದು ಪಂದ್ಯ ಸಹಿತ 5 ಲೀಗ್‌ ಹಂತದ ಪಂದ್ಯಗಳು ಜರಗಲಿವೆ.

ಅಹ್ಮದ್‌ ಬಿನ್‌ ಅಲಿ ಸ್ಟೇಡಿಯಂ
ಉಮ್‌ ಅಲ್‌ ಅಫೈಯಲ್ಲಿರುವ ಈ ಕ್ರೀಡಾಂಗಣ ದೋಹಾದಿಂದ ಪಶ್ಚಿಮಕ್ಕೆ 20 ಕಿ.ಮೀ. ದೂರದಲ್ಲಿದೆ. 40 ಸಾವಿರ ಆಸನ ಸಾಮರ್ಥ್ಯ ಹೊಂದಿದೆ. ಇಲ್ಲಿ ಅಂತಿಮ 16ರ ಸುತ್ತಿನ ಒಂದು ಪಂದ್ಯ ಸಹಿತ 5 ಲೀಗ್‌ ಹಂತದ ಪಂದ್ಯಗಳು ಜರಗಲಿವೆ.

ಸ್ಟೇಡಿಯಂ 974
ರಾಸ್‌ ಅಬು ಅಬೌದ್‌ದಲ್ಲಿರುವ ಈ ಕ್ರೀಡಾಂಗಣ ಮಧ್ಯ ದೋಹಾದಿಂದ 10 ಕಿ.ಮೀ. ಪೂರ್ವದಲ್ಲಿದೆ. 40 ಸಾವಿರ ಆಸನ ಸಾಮರ್ಥ್ಯ ಹೊಂದಿದೆ. ಇಲ್ಲಿ ಅಂತಿಮ 16ರ ಸುತ್ತಿನ ಒಂದು ಪಂದ್ಯ, 5 ಲೀಗ್‌ ಹಂತದ ಪಂದ್ಯಗಳು ಜರಗಲಿವೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next