Advertisement

ಫಿಫಾ ವಿಶ್ವಕಪ್‌: ಸೆರ್ಬಿಯದೆದುರು ಸ್ವಿಸ್‌ಗೆ ರೋಚಕ ಜಯ

10:38 PM Dec 03, 2022 | Team Udayavani |

ರಾಸ್‌ ಅಬು ಅಬೌದ್‌: ದಿಟ್ಟ ಹೋರಾಟ ನೀಡಿದ ಸೆರ್ಬಿಯವನ್ನು 3-2 ಗೋಲುಗಳಿಂದ ಪರಾಭವಗೊಳಿಸಿದ ಸ್ವಿಜರ್ಲೆಂಡ್‌ ಫಿಫಾ ವಿಶ್ವಕಪ್‌ ನಾಕೌಟ್‌ಗೆ ಲಗ್ಗೆ ಹಾಕಿದೆ. ಹಾವು ಏಣಿ ಆಟದಂತೆ ಸಾಗಿದ ಈ ಪಂದ್ಯ 5 ಗೋಲುಗಳಿಗೆ ಸಾಕ್ಷಿಯಾಯಿತು. ಶೆರ್ಡನ್‌ ಶಾಕಿರಿ 20ನೇ ನಿಮಿಷದಲ್ಲೇ ಸ್ವಿಸ್‌ ಪರ ಗೋಲು ಖಾತೆ ತೆರೆದರು. ಇದರೊಂದಿಗೆ ಕಳೆದ 3 ವಿಶ್ವಕಪ್‌ ಗಳಲ್ಲೂ ಗೋಲು ಬಾರಿಸಿದ ಕೇವಲ 3ನೇ ಆಟಗಾರನೆನಿಸಿದರು. ಉಳಿದಿಬ್ಬರೆಂದರೆ ಲಯೋನೆಲ್‌ ಮೆಸ್ಸಿ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ.

Advertisement

ಆದರೆ ಮುಂದಿನ 15 ನಿಮಿಷಗಳಲ್ಲೇ ಸೆರ್ಬಿಯ ಭಾರೀ ಸದ್ದು ಮಾಡಿತು. ಅಲೆಕ್ಸಾಂಡರ್‌ ಮೆಟ್ರೋವಿಕ್‌ (26ನೇ ನಿಮಿಷ) ಮತ್ತು ಡುಸಾನ್‌ ವ್ಲಾಹೋವಿಕ್‌ (35ನೇ ನಿಮಿಷ) 2 ಗೋಲು ಬಾರಿಸಿ ಸೆರ್ಬಿಯಕ್ಕೆ ಮಹತ್ವದ ಮುನ್ನಡೆ ಒದಗಿಸಿದರು.

ಇದರಿಂದ ಸ್ವಿಜರ್ಲೆಂಡ್‌ ಸ್ವಲ್ಪವೂ ಎದೆಗುಂದಲಿಲ್ಲ. ಅದು ಇನ್ನಷ್ಟು ಆಕ್ರಮಣಕಾರಿಯಾಗಿ ಗೋಚರಿಸಿತು. 44ನೇ ನಿಮಿಷದಲ್ಲಿ ಬ್ರಿàಲ್‌ ಎಂಬೊಲೊ ಆಕರ್ಷಕ ಗೋಲಿನ ಮೂಲಕ ಪಂದ್ಯವನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾದರು. ಹೀಗೆ ವಿರಾಮದ ಒಳಗಾಗಿ 4 ಗೋಲು ಸಿಡಿದವು.

ದ್ವಿತೀಯಾರ್ಧದಲ್ಲೂ ಆಕ್ರಮಣಕಾರಿ ಆಟದ ಮುನ್ಸೂಚನೆ ಲಭಿಸಿತು. ಮೂರೇ ನಿಮಿಷದಲ್ಲಿ ರೆಮೊ ಫ್ರಾಲರ್‌ ಸ್ವಿಸ್‌ ತಂಡದ 3ನೇ ಗೋಲಿಗೆ ಸಾಕ್ಷಿಯಾದರು. ಇದು ಪಂದ್ಯದ ನಿರ್ಣಾಯಕ ಗೋಲೆನಿಸಿತು. ಶೇ. 54ರಷ್ಟು ಸಮಯ ಚೆಂಡನ್ನು ತನ್ನ ಹಿಡಿತದಲ್ಲಿರಿಸಿಕೊಂಡರೂ ಸೆರ್ಬಿಯಕ್ಕೆ ಇದರ ಸಂಪೂರ್ಣ ಲಾಭ ಎತ್ತಲಾಗಲಿಲ್ಲ. ಹಾಗೆಯೇ 69ನೇ ನಿಮಿಷದಲ್ಲಿ ಶೆರ್ಡನ್‌ ಶಾಕಿರಿ ಹೊರನಡೆದರೂ ಸೆರ್ಬಿಯಕ್ಕೆ ಮೇಲುಗೈ ಸಾಧ್ಯವಾಗಲಿಲ್ಲ.

ಫ‌ಲಿತಾಂಶ
ಸ್ವಿಜರ್ಲೆಂಡ್‌: 03
ಸೆರ್ಬಿಯ: 02

Advertisement
Advertisement

Udayavani is now on Telegram. Click here to join our channel and stay updated with the latest news.

Next