Advertisement

ಫಿಫಾ ವಿಶ್ವಕಪ್ 2022: ಜಪಾನೀ ಹೊಡೆತಕ್ಕೆ ತಬ್ಬಿಬ್ಟಾದ ಜರ್ಮನಿ

09:59 PM Nov 23, 2022 | Team Udayavani |

ದೋಹಾ: ಮಂಗಳವಾರ ಸೌದಿ ಅರೇಬಿಯ ತಂಡ ಆರ್ಜೆಂಟೀನಾಕ್ಕೆ ಆಘಾತ ನೀಡಿತ್ತು. ಆ ಆಘಾತ ಮರೆಯುವ ಮುನ್ನವೇ ಬುಧವಾರ ಜಪಾನ್‌ ತಂಡ ಜರ್ಮನಿಗೆ ಹೊಡೆತ ನೀಡಿದೆ.

Advertisement

24ನೇ ರ್‍ಯಾಂಕಿಂಗ್‌ ಹೊಂದಿರುವ ಜಪಾನ್‌, 11ನೇ ಶ್ರೇಯಾಂಕದ ಬಲಿಷ್ಠ ಜರ್ಮನಿಯನ್ನು 2-1 ಗೋಲುಗಳಿಂದ ಮಣಿಸಿದೆ. ನಾಲ್ಕು ಬಾರಿ ವಿಶ್ವಕಪ್‌ ಗೆದ್ದಿರುವ ಜರ್ಮನಿಗೆ, ಒಮ್ಮೆಯೂ ಕಪ್‌ ಗೆಲ್ಲದ ಜಪಾನ್‌ ಈ ಪರಿಯ ಹೊಡೆತ ನೀಡಿದ್ದು ಅಚ್ಚರಿಯೆಂದು ಹೇಳಬಹುದು.

“ಇ’ ಗುಂಪಿನ ಮೊದಲ ಪಂದ್ಯ ಬುಧವಾರ ನಡೆಯಿತು. ಇಲ್ಲಿ ಸೋತಿರುವುದರಿಂದ ಜರ್ಮನಿಗೆ ಮುಂದಿನ ಹಾದಿ ಕಠಿನವಾಗಿದೆ. ಅದಿನ್ನು ಉಳಿದೆರಡು ಪಂದ್ಯಗಳನ್ನು ಭರ್ಜರಿಯಾಗಿ ಗೆದ್ದರೆ ಮಾತ್ರ ಮೇಲೇರಲಿದೆ. ಇಲ್ಲವಾದರೆ ಗುಂಪು ಹಂತದಲ್ಲೇ ಹೊರಬೀಳಬಹುದು.

ವಿಚಿತ್ರವೆಂದರೆ ಮಂಗಳವಾರದ ಆರ್ಜೆಂಟೀನಾ-ಸೌದಿ ಪಂದ್ಯದಂತೆಯೇ ಬುಧವಾರದ ಜರ್ಮನಿ-ಜಪಾನ್‌ ಪಂದ್ಯ ನಡೆದಿತ್ತು. ಆರ್ಜೆಂಟೀನಾ ಪರ ನಾಯಕ ಮೆಸ್ಸಿ ಮೊದಲು ಗೋಲು ಹೊಡೆದಿದ್ದರು. ಅಲ್ಲಿಗೆ ಆ ತಂಡದ ಆಟ ಮುಗಿದಿತ್ತು. ಅನಂತರ ಸೌದಿ 2 ಗೋಲುಗಳನ್ನು ಬಾರಿಸಿ ಮೆರೆದಾಡಿತು. ಬುಧವಾರ ಮೊದಲ ಗೋಲು ಹೊಡೆದಿದ್ದು ಜರ್ಮನಿಯ ಮಿಡ್‌ಫಿಲ್ಡರ್‌ ಇಲ್ಕೆ ಗುಂಡೊಗನ್‌. ಪೆನಾಲ್ಟಿ ರೂಪದಲ್ಲಿ ಬಂದ ಅವಕಾಶವನ್ನು ಬಳಸಿಕೊಂಡ ಅವರು ಚೆಂಡನ್ನು ಗೋಲುಪೆಟ್ಟಿಗೆಯೊಳಕ್ಕೆ ನುಗ್ಗಿಸಿಯೇಬಿಟ್ಟರು. ಅತ್ಯುತ್ತಮವಾಗಿಯೇ ಆಡುತ್ತಿದ್ದ ಜಪಾನ್‌ಗೆ ಇದೊಂದು ಅನಗತ್ಯ ತಲೆನೋವಾಯಿತು. ವಿಚಿತ್ರವೆಂದರೆ ಆರ್ಜೆಂಟೀನಾ ಪರ ಮೆಸ್ಸಿ ಮೊದಲ ಗೋಲು ಬಾರಿಸಿದ್ದೂ ಪೆನಾಲ್ಟಿಯಲ್ಲಿ ಸಿಕ್ಕ ಅವಕಾಶದ ಮೂಲಕ!

ಗೋಲು ಬಿಟ್ಟುಕೊಟ್ಟ ಅನಂತರ ಜಪಾನ್‌ ಆಟದ ರೀತಿಯೇ ಬದಲಾಯಿತು. ಅಬ್ಬರದಲ್ಲಿ ನುಗ್ಗಲು ಶುರು ಮಾಡಿದ ಅದು ಜರ್ಮನಿಯೆದುರು ನಿಕಟವಾಗಿ ಕಾದಾಡಲು ಆರಂಭಿಸಿತು. ಆದರೆ ಜರ್ಮನಿ ಉತ್ತಮವಾಗಿ ರಕ್ಷಣೆ ಮಾಡಿಕೊಂಡಿದ್ದರಿಂದ ಜಪಾನೀಯರಿಗೆ ಬಹಳ ಹೊತ್ತು ಅವಕಾಶ ದಕ್ಕಲೇ ಇಲ್ಲ. ಅಂತೂ ಅದಕ್ಕೆ ಜರ್ಮನಿ ಕೋಟೆ ಮುರಿಯಲು 75ನೇ ನಿಮಿಷದಲ್ಲಿ ಒಂದು ಅವಕಾಶ ಲಭಿಸಿತು.

Advertisement

ಮಿನಾಮಿನೊ ಬಳಿಯಿಂದ ಚೆಂಡು ಪಡೆದ ಮಿತೊಮ ಅದನ್ನು ತಳ್ಳಿಕೊಂಡು ವೇಗವಾಗಿ ಮುನ್ನುಗ್ಗಿದರು. ಅವರು ಜೋರಾಗಿ ಒದ್ದ ಚೆಂಡು ಜರ್ಮನಿಯ ಖ್ಯಾತ ಆಟಗಾರ ನೀಯರ್‌ ಮುಖವನ್ನೇ ದಾಟಿಕೊಂಡು ಮುನ್ನುಗ್ಗಿತು. ಆ ಹಂತದಲ್ಲಿ ನುಗ್ಗಿ ಬಂದ ಜಪಾನೀ ಸ್ಟ್ರೈಕರ್‌ ರಿತ್ಸು ಡೋನ್‌ ನೋಡನೋಡುವಷ್ಟರಲ್ಲಿ ಜರ್ಮನಿಯ ಗೋಲುಪೆಟ್ಟಿಗೆಯೊಳಕ್ಕೆ ಚೆಂಡನ್ನು ನುಗ್ಗಿಸಿದ್ದರು. ಅಲ್ಲಿಗೆ 1-1 ಗೋಲುಗಳಿಂದ ಪಂದ್ಯ ಸಮವಾಯಿತು.
ಈ ಆಘಾತದಿಂದ ಚೇತರಿಸಿಕೊಳ್ಳುತ್ತಿದ್ದ ಜರ್ಮನಿಗೆ ಇನ್ನೊಂದು ಆಘಾತ ಸದ್ಯದಲ್ಲೇ ಇದೆ ಎಂಬ ಸುಳಿವೂ ಇರಲಿಲ್ಲ. ಅದು ಸಂಭವಿಸಿದ್ದು 83ನೇ ನಿಮಿಷದಲ್ಲಿ. ಜಪಾನ್‌ ಆಟಗಾರರು ಒಂದು ಫ್ರೀಕಿಕ್‌ ಅವಕಾಶ ಪಡೆದರು. ತಮ್ಮದೇ ಅಂಕಣದಿಂದ ಇತಕುರ ಜೋರಾಗಿ ಚೆಂಡನ್ನು ಒದ್ದರು. ಅದನ್ನು ಇನ್ನೊಬ್ಬ ಜಪಾನೀ ಸ್ಟ್ರೈಕರ್‌ ಟಕುಮ ಅಸಾನೊ ಪಡೆದುಕೊಂಡು ಲೀಲಾಜಾಲವಾಗಿ ಜರ್ಮನಿಯ ನೀಯರ್‌ರನ್ನು ದಾಟಿ ಮುನ್ನಡೆದರು. ಅವರ ಜೋರಾದ ಹೊಡೆತ ಜರ್ಮನಿಯ ಕೋಟೆಯನ್ನು ಇನ್ನೊಮ್ಮೆ ಭೇದಿಸಿತು.

ಜರ್ಮನಿ ಆಟಗಾರರು ಹತಾಶೆಗೊಂಡರು. ಅಷ್ಟರಲ್ಲಾಗಲೇ ಜಪಾನ್‌ ಗೆಲುವಿನ ಸ್ಪಷ್ಟ ನಂಬಿಕೆಯನ್ನು ಪಡೆದಾಗಿತ್ತು.

ಇನ್ನುಳಿದಂತೆ ಜಪಾನ್‌ ಮಾಡಬೇಕಾಗಿದ್ದು ಬಾಕಿ ಸಮಯದಲ್ಲಿ ಚೆಂಡನ್ನು ಜರ್ಮನಿಯ ಕೈಗೆ ಸಿಗದಂತೆ ತಡೆಯುವ ಅಥವಾ ಸಮಯ ವ್ಯರ್ಥ ಮಾಡುವ ಕೆಲಸವನ್ನು ಮಾತ್ರ. ಅದರಲ್ಲಿ ಅದಕ್ಕೆ ಯಶಸ್ಸು ಸಿಕ್ಕಿತು ಎನ್ನುವುದನ್ನು ಮರೆಯುವಂತಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next